ಏಷ್ಯಾದ ಫೋರ್ಬ್ಸ್‌-30 ಪಟ್ಟೀಲಿ 5 ಬೆಂಗ್ಳೂರಿಗರು

| Published : May 18 2024, 12:42 AM IST / Updated: May 18 2024, 04:49 AM IST

ಸಾರಾಂಶ

30 ವರ್ಷದೊಳಗಿರುವ ಏಷ್ಯಾದ 30 ಉದ್ಯಮ ಸಾಧಕರನ್ನು ಗುರುತಿಸುವ ‘ಫೋರ್ಬ್ಸ್‌ 30 ಅಂಡರ್ 30 ಏಷ್ಯಾ’ ಪಟ್ಟಿ ಬಿಡುಗಡೆಯಾಗಿದ್ದು, ಬೆಂಗಳೂರಿನ ಹಾಗೂ ಬೆಂಗಳೂರು ನಂಟಿನ ಐವರಿಗೆ ಸ್ಥಾನ ದೊರೆತಿದೆ.

 ಬೆಂಗಳೂರು : 30 ವರ್ಷದೊಳಗಿರುವ ಏಷ್ಯಾದ 30 ಉದ್ಯಮ ಸಾಧಕರನ್ನು ಗುರುತಿಸುವ ‘ಫೋರ್ಬ್ಸ್‌ 30 ಅಂಡರ್ 30 ಏಷ್ಯಾ’ ಪಟ್ಟಿ ಬಿಡುಗಡೆಯಾಗಿದ್ದು, ಬೆಂಗಳೂರಿನ ಹಾಗೂ ಬೆಂಗಳೂರು ನಂಟಿನ ಐವರಿಗೆ ಸ್ಥಾನ ದೊರೆತಿದೆ.

ಆನ್‌ಫೈನಾನ್ಸ್‌ ಎಐ ಎಂಬ ಸ್ಟಾರ್ಟಪ್‌ ಕಂಪನಿಯ ಅನುಜ್‌ ಶ್ರೀವಾತ್ಸವ, ಪ್ರಿಯೇಶ್‌ ಶ್ರೀವಾತ್ಸವ, ಬೆಂಗಳೂರಿನ ಸಂಚಾರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸ್ಟಾಟಿಕ್‌ ಎಂಬ ಕಂಪನಿ ಸ್ಥಾಪಿಸಿದ ಅಕ್ಷಿತ್‌ ಬನ್ಸಲ್‌, ರಾಘವ್‌ ಅರೋರಾ ಹಾಗೂ ದೃಷ್ಟಿಹೀನರು ಬ್ರೈಲ್‌ ಲಿಪಿ ಓದುವಂತಹ ಗ್ಲೋವ್ಸ್‌ ಅಭಿವೃದ್ಧಿಪಡಿಸಿದ ಕುಶ್‌ ಜೈನ್‌ ಈ ಸಾಧಕರು.

ನಿಯೋಜಿಪಿಟಿ:

ಹಣಕಾಸು ಸೇವಾ ಉದ್ಯಮದ ಅನುಕೂಲಕ್ಕಾಗಿ ಚಾಟ್‌ಜಿಪಿಟಿ ರೀತಿಯಲ್ಲಿ ನಿಯೋಜಿಪಿಟಿ ಅಭಿವೃದ್ಧಿಪಡಿಸಿದ ಬೆಂಗಳೂರಿನ ಸ್ಟಾರ್ಟಪ್‌ ಕಂಪನಿ ‘ಆನ್‌ಫೈನಾನ್ಸ್‌ ಎಐ’ನ ಸಂಸ್ಥಾಪಕರಾದ ಅನುಜ್‌ ಶ್ರೀವಾತ್ಸವ ಹಾಗೂ ಪ್ರಿಯೇಶ್‌ ಶ್ರೀವಾತ್ಸವ ಅವರಿಬ್ಬರ ಹೆಸರನ್ನು ಫೋರ್ಬ್ಸ್‌ ಪರಿಗಣಿಸಿದೆ. ಈ ಇಬ್ಬರೂ ಸಂಬಂಧಿಕರೇನಲ್ಲ. ಇವರಿಬ್ಬರೂ ಒಗ್ಗೂಡಿ ಅಭಿವೃದ್ಧಿಪಡಿಸಿದ ನಿಯೋ ಜಿಪಿಟಿ ಸೇವೆಯು ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಮುನ್ನೋಟಗಳನ್ನು ನೀಡಿ, ಹಣಕಾಸು ಮಾರುಕಟ್ಟೆಯ ಸಂಶೋಧನೆ ನಡೆಸಲು ಸಹಕಾರಿಯಾಗಿದೆ.

ವಾಹನ ಚಾರ್ಜಿಂಗ್‌ ಕಂಪನಿ:

ಇದೇ ವೇಳೆ ಸ್ಟಾಟಿಕ್‌ ಕಂಪನಿಯ ಅಕ್ಷಿತ್‌ ಬನ್ಸಲ್‌ ಹಾಗೂ ರಾಘವ್‌ ಅರೋರಾ ಕೂಡ ಫೋರ್ಬ್ಸ್‌ ಸಾಧಕರ ಪಟ್ಟಿಯಲ್ಲಿದ್ದಾರೆ. ಈ ಇಬ್ಬರೂ ಕಾರ್‌ ಶೇರಿಂಗ್‌ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಅದರಲ್ಲಿ ವೈಫಲ್ಯ ಅನುಭವಿಸಿದ್ದರು. ಬಳಿಕ ಬೆಂಗಳೂರಿನ ಮಲಿನ ರಸ್ತೆಗಳಲ್ಲಿ ಬೈಕ್‌ನಲ್ಲಿ ಓಡಾಡುವಾಗ ಹಸಿರು ಸಾರಿಗೆ ಕಲ್ಪಿಸಬೇಕೆಂಬ ಆಲೋಚನೆ ಇವರಲ್ಲಿ ಒಡಮೂಡಿತು. ಹೀಗಾಗಿ ಗುಡಗಾಂವ್‌ನಲ್ಲಿ ಸ್ಟಾಟಿಕ್‌ ಎಂಬ ಕಂಪನಿಯನ್ನು ಸ್ಥಾಪಿಸಿ ದೇಶಾದ್ಯಂತ ಚಾರ್ಜಿಂಗ್‌ ಮೂಲಸೌಕರ್ಯವನ್ನು ಒದಗಿಸುತ್ತಿದ್ದಾರೆ. ಎಲೆಕ್ಟ್ರಿಕ್‌ ಕಾರು, ಬಸ್‌, ಟ್ರಕ್‌ ಹಾಗೂ ತ್ರಿಚಕ್ರ ವಾಹನಗಳಿಗೆ ಇವರ ಸೇವೆ ಸಿಗುತ್ತಿದೆ.

ಇದೇ ವೇಳೆ, 2018ರಲ್ಲಿ ಬೆಂಗಳೂರಿನಲ್ಲಿದ್ದಾಗ ದೃಷ್ಟಿಹೀನರು ಎದುರಿಸುತ್ತಿದ್ದ ಸವಾಲುಗಳನ್ನು ಮನಗಂಡ ಕುಶ್‌ ಜೈನ್‌ ಅವರು ಓರಾಮ ಎಐ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿಯ ಉತ್ಪನ್ನ ಸ್ಮಾರ್ಟ್‌ ಗ್ಲೋವ್‌ ದೃಷ್ಟಿ ಹೀನರು ಬ್ರೈಲ್‌ ಕಲಿಯಸಲು ಸಹಕಾರಿಯಾಗಿದೆ. ಗ್ಲೋವ್ಸ್‌ನಲ್ಲಿ ಕ್ಯಾಮೆರಾ ಹಾಗೂ ಸ್ಪೀಕರ್‌ ಇದ್ದು, ಬ್ರೈಲ್‌ ಅಕ್ಷರ ಮುಟ್ಟುತ್ತಿದ್ದಂತೆ ಗುರುತಿಸಿ ಓದುತ್ತದೆ.