ಕನ್ನಡಪ್ರಭ ವಾರ್ತೆ ಬೆಂಗಳೂರು
ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ.ಅಧಿಕಾರಿಗಳು ನ.18ರಿಂದ 22ರ ವರೆಗೆ ಬೆಂಗಳೂರು, ಗುರುಗ್ರಾಮದ ವಿವಿಧ ಸ್ಥಳಗಳಲ್ಲಿ ಎನ್‌ಎನ್‌ಪಿಎಲ್, ಜಿಟಿಪಿಎಲ್ ಕಚೇರಿ, ನಿರ್ದೇಶಕರು ಮತ್ತು ಇತರ ಆರೋಪಿಗಳು ಹಾಗೂ ಶಂಕಿತರ ಮನೆಗಳ ಮೇಲೆ ದಾಳಿಸಿ ಶೋಧ ಕಾರ್ಯ ಕೈಗೊಂಡಿದ್ದರು. ಕರ್ನಾಟಕ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇ.ಡಿ. ತನಿಖೆ ಆರಂಭಿಸಿತ್ತು.
ಎನ್‌ಎನ್‌ಪಿಎಲ್ ನಿರ್ವಹಿಸುವ ಗೇಮಿಂಗ್ ಪ್ಲಾಟ್‌ಫಾರ್ಮ್ ಪಾಕೆಟ್ 52 ಗೇಮ್‌ನಲ್ಲಿ ವ್ಯವಸ್ಥಿತವಾಗಿ ಗ್ರಾಹಕರಿಗೆ ವಂಚಿಸಿ, ಸುಮಾರು 3 ಕೋಟಿ ರು.ಗೂ ಅಧಿಕ ನಷ್ಟ ಉಂಟು ಮಾಡಿದ ಆರೋಪ ಕೇಳಿ ಬಂದಿತ್ತು. ಈ ಗೇಮಿಂಗ್ ಆ್ಯಪ್ ಬಳಕೆದಾರರು ಆಟದ ಕೌಶಲ್ಯ, ಪಾರದರ್ಶಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಂಪನಿ ಉದ್ದೇಶಪೂರ್ವಕವಾಗಿ ಬಳಕೆದಾರರನ್ನು ಶೋಷಿಸಿರುವುದು ಹಾಗೂ ನಷ್ಟ ಉಂಟು ಮಾಡಿರುವುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಕೇಂದ್ರ ಸರ್ಕಾರ ರಿಯಲ್ ಮನಿ ಗೇಮ್‌ಗಳನ್ನು ನಿಷೇಧಿಸಿದ ಬಳಿಕವೂ ಜಿಟಿಪಿಎಲ್ ಮತ್ತು ಎನ್‌ಎನ್‌ಪಿಎಲ್ ಕಂಪನಿ ಗ್ರಾಹಕರಿಗೆ ಕ್ರಮವಾಗಿ 30 ಕೋಟಿ ರು. ಮತ್ತು 18.57 ಕೋಟಿ ರು.ಗೂ ಅಧಿಕ ಹಣ ಮರು ಪಾವತಿಸದೆ ಎಸ್ಕ್ರೋ ಬ್ಯಾಂಕ್ ಖಾತೆಗಳಲ್ಲಿ ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿದೆ. ಈ ಹಣವು ಅಪರಾಧದ ಆದಾಯ ಇರಬಹುದು ಶಂಕಿಸಿದ್ದು, ಫ್ರೀಜ್ ಮಾಡಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ ಇ.ಡಿ. ತಿಳಿಸಿದೆ.