ಪೊಲೀಸ್‌ ಸೋಗಲ್ಲಿ ಯುವತಿಯರ ಮನೆಗೆ ನುಗ್ಗಿ ಸುಲಿಗೆ ಮಾಡಿದ 6 ಆರೋಪಿಗಳ ಬಂಧನ

KannadaprabhaNewsNetwork |  
Published : Nov 25, 2025, 04:15 AM IST
Crime

ಸಾರಾಂಶ

ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಯುವತಿಯರ ಮೊಬೈಲ್‌ಗಳನ್ನು ಸುಲಿಗೆ ಮಾಡಿದ್ದ ಪ್ರಕರಣದ ಸಂಬಂಧ ಯುವತಿಯ ಸ್ನೇಹಿತ ಸೇರಿ ಆರು ಆರೋಪಿಗಳನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಯುವತಿಯರ ಮೊಬೈಲ್‌ಗಳನ್ನು ಸುಲಿಗೆ ಮಾಡಿದ್ದ ಪ್ರಕರಣದ ಸಂಬಂಧ ಯುವತಿಯ ಸ್ನೇಹಿತ ಸೇರಿ ಆರು ಆರೋಪಿಗಳನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಳಿಮಾವು ನಿವಾಸಿ ಮೊಹಮ್ಮದ್‌ ನಿಜಾಶ್‌ (24), ವಿಷ್ಣು (23), ಸರುಣ್ (38), ಕಲ್ಯಾಣ ನಗರ ನಿವಾಸಿಗಳಾದ ದಿವಾಕರ್‌ (34), ಮಧುಕುಮಾರ್‌ (32), ಕಿರಣ್‌ (29) ಬಂಧಿತರು. ಆರೋಪಿಗಳಿಂದ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಾದ ಅಜ್ಮಲ್‌, ಅಗಸ್ಟಿನ್‌ ಹಾಗೂ ಶಫೀಕ್‌ಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ನ.7ರಂದು ಅನುಪಾ ಚಕ್ರಬೋರ್ತಿ ಮತ್ತು ಆಕೆಯ ಸ್ನೇಹಿತರು ವಾಸವಾಗಿದ್ದ ಮನೆಗೆ ನುಗ್ಗಿ ಸುಲಿಗೆ ಮಾಡಿದ್ದರು. ಆರೋಪಿಗಳ ಪೈಕಿ ಮೊಹಮ್ಮದ್‌ ನಿಜಾಶ್‌ ದೂರುದಾರೆ ಸ್ನೇಹಿತ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಅನುಪಾ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ತಾನೂ ವಾಸವಾಗಿದ್ದ ಮನೆ ಕೆಳಗಿನ ಟೀ ಅಂಗಡಿಗೆ ಟೀ ಕುಡಿಯಲು ಬರುತ್ತಿದ್ದ ಮೊಹಮ್ಮದ್‌ ನಿಜಾಶ್‌ನನ್ನು 15 ದಿನಗಳ ಹಿಂದಷ್ಟೇ ಪರಿಚಯಿಸಿಕೊಂಡಿದ್ದು, ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಹೀಗಾಗಿ ನ.7ರಂದು ಮೊಹಮ್ಮದ್‌ ನಿಜಾಶ್‌ನ ಹುಟ್ಟುಹಬ್ಬಇದ್ದುದ್ದರಿಂದ ಆತನನ್ನು ತನ್ನ ಮನೆಗೆ ಕರೆಸಿಕೊಂಡು ಬರ್ತ್‌ಡೇ ಆಚರಿಸಿದ್ದರು.

ಈ ವೇಳೆ ಈತನ ಸ್ನೇಹಿತ ವಿಷ್ಣು ಕೂಡ ಹೋಗಿದ್ದ. ಯುವತಿಯ ಐಷಾರಾಮಿ ಜೀವನ ಕಂಡ ಆರೋಪಿಗಳು ಅದೇ ದಿನ ರಾತ್ರಿ ಸರುಣ್‌ಗೆ ಕರೆ ಮಾಡಿ, ಪೊಲೀಸರ ಸೋಗಿನಲ್ಲಿ ಅನುಪಾ ಮನೆಗೆ ನುಗ್ಗಿ ಹಣ ವಸೂಲಿ ಮಾಡಬಹುದು ಎಂದು ಸಂಚು ರೂಪಿಸಿದ್ದರು.

ಡೆಲಿವರಿ ಬಾಯ್‌ ಸೋಗಲ್ಲಿ ಸುಲಿಗೆ:

ಅದರಂತೆ ಅದೇ ದಿನ ತಡರಾತ್ರಿ 2 ಗಂಟೆ ಸುಮಾರಿಗೆ ಸರುಣ್‌, ಅಗಸ್ಟಿನ್‌ಗೆ ಕರೆ ಮಾಡಿ ಇತರೆ ಆರೋಪಿಗಳನ್ನು ಯುವತಿ ಮನೆ ಬಳಿ ಕರೆಸಿಕೊಂಡಿದ್ದ. ನಂತರ ಯುವತಿ ಮನೆಯ ಬಾಗಿಲು ಬಡಿದಿದ್ದರು. ಇದರಿಂದ ಗಾಬರಿಗೊಂಡ ಯುವತಿ ಮತ್ತು ಆಕೆಯ ಗೆಳತಿಯರು ಒಳಗಿನಿಂದಲೇ ಯಾರು ಎಂದು ಪ್ರಶ್ನಿಸಿದಾಗ ಫುಡ್‌ ಡೆಲಿವರಿ ಬಾಯ್ ಎಂದು ಹೇಳಿದ್ದರು. ನಾವು ಯಾವುದೇ ಆರ್ಡರ್ ಮಾಡಿಲ್ಲ ಎಂದಾಗ, ಮತ್ತೆ ಜೋರಾಗಿ ಬಾಗಿಲು ಬಡಿದಿದ್ದರು. ನಂತರ ಯುವತಿ ಬಾಗಿಲು ತೆರೆಯುತ್ತಿದ್ದಂತೆ ತಾವು ಪೊಲೀಸರು, ಇಲ್ಲಿ ಮದ್ಯ ಮತ್ತು ಮಾದಕ ವಸ್ತು ಸೇವನೆ ಮಾಡಲಾಗುತ್ತಿದೆ ಎಂದು ಬೆದರಿಸಿ, 5 ಲಕ್ಷ ರು. ಗೆ ಬೇಡಿಕೆ ಇಟ್ಟಿದ್ದರು.

ಹಣ ಕೊಡಲು ನಿರಾಕರಿಸಿದಾಗ ಆರೋಪಿಗಳು ದೂರುದಾರೆಯ ಸ್ನೇಹಿತೆಯರ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು. ಕೆಲ ಹೊತ್ತಿನ ಬಳಿಕ ಯುವತಿ ಎಚ್‌ಎಎಲ್‌ ಠಾಣೆಗೆ ಬಂದು ದೂರು ನೀಡಿದ್ದರು.

ಸ್ನೇಹಿತನೇ ಸುಲಿಗೆ ಪ್ರಕರಣದ ಸೂತ್ರಧಾರ

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ದೂರುದಾರೆ ಸ್ನೇಹಿತ ಮೊಹಮ್ಮದ್‌ ನಿಜಾಶ್‌ನೇ ಸುಲಿಗೆ ಪ್ರಕರಣದ ಸೂತ್ರಧಾರ ಎಂಬುದು ಗೊತ್ತಾಗಿದೆ. ಘಟನಾ ಸ್ಥಳದ ಮೊಬೈಲ್‌ ನೆಟ್‌ವರ್ಕ್‌ ಹಾಗೂ ಇತರೆ ತಾಂತ್ರಿಕ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ನಡೆಸಿದಾಗ ಮೊಹಮ್ಮದ್‌ ನಿಜಾಶ್‌ ಮತ್ತು ವಿಷ್ಣು ಸಂಚು ರೂಪಿಸಿದ್ದಾರೆ ಎಂಬುದು ಪತ್ತೆಯಾಗಿದೆ.

ಯುವತಿ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿದ್ದರಿಂದ ಹಣ ಸುಲಿಗೆ ಮಾಡಬಹುದೆಂದು ನಿಜಾಶ್‌, ವಿಷ್ಣು ಜತೆ ಸೇರಿ ಸುಲಿಗೆಗೆ ಸಂಚು ರೂಪಿಸಿದ್ದರು. ಅದರಂತೆ ಇತರೆ ಆರೋಪಿಗಳನ್ನು ಕರೆಸಿಕೊಂಡು ಕೃತ್ಯ ಎಸಗಿದ್ದಾರೆ. ಇನ್ನು ಆರೋಪಿಗಳ ಪೈಕಿ ವಿಷ್ಣು ಮತ್ತು ಸರುಣ್ ಈ ಹಿಂದೆ ವೃದ್ಧರೊಬ್ಬರನ್ನು ಹನಿಟ್ರ್ಯಾಪ್‌ ಮಾಡಿದ್ದ ಆರೋಪದಲ್ಲಿ ಎಚ್‌ಎಎಲ್‌ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಮೊಹಮ್ಮದ್‌ ನಿಜಾಶು, ವಿಷ್ಣು ಮತ್ತು ಸರುಣ್‌ ಕೇರಳ ಮೂಲದವರಾಗಿದ್ದು, ಕೆಲ ವರ್ಷಗಳಿಂದ ಹುಳಿಮಾವು ಬಳಿ ವಾಸವಾಗಿದ್ದಾರೆ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಯುಪಿಐ ಪಾವತಿ ಟಿಕೆಟ್‌ ಅಕ್ರಮ ಬಿಎಂಟಿಸಿ 3 ಕಂಡಕ್ಟರ್‌ ಸಸ್ಪೆಂಡ್‌