ಜಯನಗರದ ಜಿಬಿಎ ಕಚೇರಿಯಲ್ಲಿ ಅಗ್ನಿ ಅವಘಡ: ಸತತ 3 ತಾಸು ಬೆಂಕಿ ನಂದಿಸಿದ ಸಿಬ್ಬಂದಿ

KannadaprabhaNewsNetwork |  
Published : Nov 25, 2025, 04:15 AM IST
GBA 1 | Kannada Prabha

ಸಾರಾಂಶ

ಜಯನಗರದಲ್ಲಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಯನಗರದಲ್ಲಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ.

ಜಯನಗರದ 4ನೇ ಬ್ಲಾಕ್‌ನಲ್ಲಿರುವ ಜಿಬಿಎ ಕಚೇರಿಯಲ್ಲಿನ ಮೊದಲ ಮಹಡಿಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯ ಜ್ವಾಲೆ 2, 3, 4 ಮತ್ತು 5ನೇ ಮಹಡಿಗೆ ಹರಡಿಕೊಂಡಿದ್ದು, ಈ ವೇಳೆ ಇಬ್ಬರು ಜಿಬಿಎ ಸಿಬ್ಬಂದಿ ಲಿಫ್ಟ್‌ನಲ್ಲಿ ಸಿಲುಕಿ ಒದ್ದಾಡಿದ್ದರು.

ವಿಷಯ ತಿಳಿದು ಮೂರು ವಾಹನಗಳೊಂದಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊದಲು ಲಿಫ್ಟ್‌ನಲ್ಲಿ ಸಿಲುಕಿದವರನ್ನು ರಕ್ಷಿಸಿದರು. ನಂತರ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ತನಿಖೆಗಾಗಿ ತಂಡ ರಚನೆ:

ಈ ವಿದ್ಯುತ್ ಅವಘಡಕ್ಕೆ ನಿಖರ ಕಾರಣವನ್ನು ತಿಳಿಯುವ ಸಂಬಂಧ ತನಿಖೆ ನಡೆಸಿ ವರದಿ ನೀಡಲು ದಕ್ಷಿಣ ನಗರ ಪಾಲಿಕೆ, ಬೆಸ್ಕಾಂ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳ ಒಂದು ತಂಡವನ್ನು ರಚಿಸಲಾಗಿದೆ.

ಜಯನಗರ 4ನೇ ಬ್ಲಾಕ್‌ನಲ್ಲಿರುವ ವಾಣಿಜ್ಯ ಸಂಕೀರ್ಣದ 1 ಮತ್ತು 2ನೇ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡದ ಕುರಿತು ಮಾಹಿತಿ ದೊರೆತ ಕೂಡಲೇ ದಕ್ಷಿಣ ವಲಯದ ಪಾಲಿಕೆ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬಹುಮಹಡಿ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ನಂತರ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕಾರ್ಯಾಚರಣೆ ವೇಳೆ ಕಟ್ಟಡದ ಲಿಫ್ಟ್‌ನಲ್ಲಿ ಸಿಲುಕಿದ್ದ ಕೃಷ್ಣೇಗೌಡ, ಅರುಣ್ ಪ್ರಸಾದ್‌ ಎಂಬುವವರನ್ನು ರಕ್ಷಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯ ನೌಕರ ಅರುಣ್ ಪ್ರಸಾದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳಿಂದ ಸ್ಥಳ ಪರಿಶೀಲನೆ:

ಸ್ಥಳಕ್ಕೆ ಮುಖ್ಯ ಆಯುಕ್ತ ಮಹೇಶ್ವರರಾವ್, ಆಯುಕ್ತ ಕೆ.ಎನ್. ರಮೇಶ್ ಹಾಗೂ ಅಪರ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ಸಮಯದಲ್ಲಿ ಕಟ್ಟಡಕ್ಕೆ ಹಾಗೂ ಕಚೇರಿಗಳಿಗೆ ಯಾವುದೇ ಹಾನಿಯಾಗಿರುವುದು ಕಂಡುಬಂದಿರುವುದಿಲ್ಲ. ಆದರೆ, ವಿದ್ಯುತ್ ಅವಘಡದಿಂದ ಎಲೆಕ್ಟ್ರಿಕಲ್ ಡಕ್ಟ್ ಹಾನಿಯಾಗಿದೆ. ಕಟ್ಟಡ ದುರಸ್ತಿಗೊಳಿಸಲು ಕಟ್ಟಡದಲ್ಲಿನ ಎಲ್ಲಾ ಮಳಿಗೆ ಹಾಗೂ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಯುಪಿಐ ಪಾವತಿ ಟಿಕೆಟ್‌ ಅಕ್ರಮ ಬಿಎಂಟಿಸಿ 3 ಕಂಡಕ್ಟರ್‌ ಸಸ್ಪೆಂಡ್‌