ಯಶವಂತಪುರ ಫ್ಲೈಓವರಿಂದ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಕಾರು: ಸಾಫ್ಟ್‌ವೇರ್‌ ಉದ್ಯೋಗಿ ಬಲಿ

KannadaprabhaNewsNetwork |  
Published : Sep 04, 2024, 01:49 AM ISTUpdated : Sep 04, 2024, 05:28 AM IST
accident 1 | Kannada Prabha

ಸಾರಾಂಶ

ಯಶವಂತಪುರ ಮೇಲ್ಸೇತುವೆಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಸಾವನ್ನಪ್ಪಿದ್ದಾರೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

 ಬೆಂಗಳೂರು :  ನಗರದ ಯಶವಂತಪುರ ಮೇಲ್ಸೇತುವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ದಾಟಿ ಬೈಕ್‌ಗೆ ಗುದ್ದಿ ಕಾರೊಂದು ಕೆಳಗೆ ಬಿದ್ದು ಸಾಫ್ಟ್‌ವೇರ್ ಉದ್ಯೋಗಿ ಮೃತಪಟ್ಟು, ಆತನ ಮೂವರು ಸ್ನೇಹಿತರು ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಮಂಗಳವಾರ ನಸುಕಿನಲ್ಲಿ ನಡೆದಿದೆ.

ತಮಿಳುನಾಡು ರಾಜ್ಯದ ಸೇಲಂ ಮೂಲದ ಶಬರೀಶ್ (29) ಮೃತ ದುರ್ದೈವಿ. ಮೃತನ ಸ್ನೇಹಿತರಾದ ಕಾರು ಚಾಲಕ ಮಿಥುನ್‌ ಚಕ್ರವರ್ತಿ, ಶಂಕರ್ ರಾವ್, ಆತನ ಸಹೋದರಿ ಅನುಶ್ರೀ ಹಾಗೂ ಕಾಚರಕನಹಳ್ಳಿ ನಿವಾಸಿ ಬೈಕ್ ಸವಾರ ಮಂಜುನಾಥ್ ಗಾಯಗೊಂಡಿದ್ದಾರೆ. ಈ ಗಾಯಾಳುಗಳ ಪೈಕಿ ಮಿಥುನ್ ಪರಿಸ್ಥಿತಿ ಗಂಭೀರವಾಗಿದ್ದು, ಇನ್ನುಳಿದವರು ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಉತ್ತರ ವಿಭಾಗದ (ಸಂಚಾರ) ಡಿಸಿಪಿ ಸಿರಿಗೌರಿ ತಿಳಿಸಿದ್ದಾರೆ.

ಮಲ್ಲೇಶ್ವರದ ಮನೆಯಲ್ಲಿ ಪಾರ್ಟಿ ಮುಗಿಸಿ ಮಂಗಳವಾರ ನಸುಕಿನ 3.30ರ ಸುಮಾರಿಗೆ ಊಟಕ್ಕಾಗಿ ಯಶವಂತಪುರಕ್ಕೆ ಮೃತನ ನಾಲ್ವರು ಸ್ನೇಹಿತರು ಕಾರಿನಲ್ಲಿ ತೆರಳುವಾಗ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೀಸಾ ಪಡೆಯಲು ಬಂದಿದ್ದ ಸ್ನೇಹಿತರು:

ಕೇರಳ ಮೂಲದ ಶಂಕರ್‌ ರಾವ್‌, ಆತನ ಸೋದರಿ ಅನುಶ್ರೀ, ತಮಿಳುನಾಡಿನ ಶಬರೀಷ್ ಹಾಗೂ ಮಿಥುನ್ ಸ್ನೇಹಿತರಾಗಿದ್ದು, ಎಂಜಿನಿಯರಿಂಗ್ ಮುಗಿಸಿದ ಬಳಿಕ ಎಲ್ಲ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ವಿದೇಶಕ್ಕೆ ತೆರಳಲು ತಯಾರಿ ನಡೆಸಿದ್ದ ಶಬರೀಷ್ ಹಾಗೂ ಮಿಥುನ್‌, ಈ ಸಂಬಂಧ ವೀಸಾ ಪಡೆಯಲು ನಗರಕ್ಕೆ ಸೋಮವಾರ ಬಂದಿದ್ದರು.

ಮಲ್ಲೇಶ್ವರದಲ್ಲಿ ನೆಲೆಸಿದ್ದ ತಮ್ಮ ಸ್ನೇಹಿತರಾದ ಶಂಕರ್ ಹಾಗೂ ಅನುಶ್ರೀ ಮನೆಗೆ ಅವರು ಭೇಟಿ ನೀಡಿದ್ದರು. ನಂತರ ಡಾ। ರಾಜ್‌ ಕುಮಾರ್ ರಸ್ತೆಯಲ್ಲಿರುವ ಓರಿಯನ್ ಮಾಲ್‌ನಲ್ಲಿ ವಿದೇಶ ಯಾತ್ರೆಗೆ ಅಗತ್ಯವಾದ ವಸ್ತುಗಳ ಖರೀದಿಗೆ ಸ್ನೇಹಿತರ ಜತೆ ಮಿಥುನ್ ಹಾಗೂ ಶಬರೀಷ್ ಶಾಂಪಿಂಗ್ ಮಾಡಿದ್ದರು. ಅಲ್ಲಿಂದ ರಾತ್ರಿ ಮಲ್ಲೇಶ್ವರದ ಶಂಕರ್ ಮನೆಗೆ ಮರಳಿ ಗೆಳೆಯರು ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿ ಮುಗಿಸಿ ನಸುಕಿನ 3.30ರ ಸುಮಾರಿಗೆ ಊಟ ಮಾಡಲು ತುಮಕೂರು ರಸ್ತೆ ಕಡೆಗೆ ಕಾರಿನಲ್ಲಿ ಗೆಳೆಯರು ಹೊರಟಿದ್ದರು.

ಆ ವೇಳೆ ಕಾರು ಓಡಿಸುತ್ತಿದ್ದ ಮಿಥುನ್‌ ಚಾಲನೆ ಮೇಲೆ ನಿಯಂತ್ರಣ ತಪ್ಪಿದ್ದಾನೆ. ಇದರಿಂದ ರಸ್ತೆ ವಿಭಜಕ ದಾಟಿ ಮತ್ತೊಂದು ಬದಿಗೆ ನುಗ್ಗಿದ ಕಾರು, ಅದೇ ಸಮಯಕ್ಕೆ ಯಶವಂತಪುರದಿಂದ ಕಾಚರಕರನಹಳ್ಳಿ ತನ್ನ ಮನೆ ಬೈಕ್ ಹೊರಟಿದ್ದ ಎಲೆಕ್ಟ್ರಿಶಿಯನ್ ಮಂಜುನಾಥ್‌ಗೆ ಅಪ್ಪಳಿಸಿ ಬಳಿಕ ಮೇಲ್ಸೇತುವೆಯಿಂದ ಕೆಳಗೆ ಕಾರು ಬಿದ್ದಿದೆ. ಈ ವೇಳೆ ಕಾರಿನ ಬಾಗಿಲು ತೆರೆದುಕೊಂಡ ಪರಿಣಾಮ ಕಾರಿನಲ್ಲಿದ್ದ ಅನುಶ್ರೀ ಮೇಲ್ಸೇತುವೆಗೆ ಉರುಳಿ ಬಿದ್ದಿದ್ದು, ಇನ್ನುಳಿದ ಮೂವರು ಕಾರಿನ ಜತೆ ಕೆಳಗೆ ಬಿದ್ದಿದ್ದಾರೆ.

ತಕ್ಷಣವೇ ಗಾಯಾಳುಗಳನ್ನು ಸಾರ್ವಜನಿಕರು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಶಬರೀಷ್ ಮೃತಪಟ್ಟಿದ್ದಾನೆ. ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನಲ್ಲಿ ಮದ್ಯದ ಬಾಟಲ್

ಅಪಘಾತಕ್ಕೀಡಾದ ಕಾರಿನಲ್ಲಿ ಎರಡು ಖಾಲಿ ಮದ್ಯದ ಬಾಟಲ್‌ಗಳು ಪತ್ತೆಯಾಗಿವೆ. ಹೀಗಾಗಿ ಚಾಲಕ ಮಿಥುನ್ ಸೇರಿ ಕಾರಿನಲ್ಲಿದ್ದವರು ಮದ್ಯ ಸೇವಿಸಿರುವ ಬಗ್ಗೆ ಅನುಮಾನಿಸಲಾಗಿದೆ. ಇದಕ್ಕಾಗಿ ಗಾಯಾಳುಗಳ ರಕ್ತದ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕಾರು ಪಲ್ಟಿಯಾಗದ ಪರಿಣಾಮ ಉಳಿದ ಜೀವ:

ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಕಾರು ರಸ್ತೆಗುರುಳದೆ ಹಾಗೆಯೇ ನಿಂತಿದೆ. ಇದರಿಂದ ತೀವ್ರ ಸ್ವರೂಪದ ಪೆಟ್ಟಾಗದೆ ಕಾರಿನಲ್ಲಿದ್ದವರ ಪೈಕಿ ಮೂವರ ಪ್ರಾಣ ಉಳಿದಿದೆ. ಒಂದು ವೇಳೆ ಕಾರು ಕೆಳಗೆ ಬಿದ್ದ ಕೂಡಲೇ ಉರುಳಿದ್ದರೆ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆಗಳಿತ್ತು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಅಪಘಾತಕ್ಕೂ ಮುನ್ನ ಕಾರಿನಲ್ಲಿದ್ದವರು ಸಂತೋಷ ಕೂಟ ನಡೆಸಿರುವ ಮಾಹಿತಿ ಇದೆ. ಆದರೆ ಎಲ್ಲರೂ ಮದ್ಯ ಸೇವಿಸಿದ್ದರೆಯೇ ಎಂಬುದು ಖಚಿತವಾಗಿಲ್ಲ. ಹೀಗಾಗಿ ಅಪಘಾತದ ವೇಳೆ ಕಾರು ಚಾಲನೆ ಮಾಡಿದ್ದ ಗಾಯಾಳು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

-ಡಿ.ಆರ್‌.ಸಿರಿಗೌರಿ, ಡಿಸಿಪಿ, ಉತ್ತರ ವಿಭಾಗ (ಸಂಚಾರ).

PREV

Recommended Stories

ಹೆಮ್ಮನಹಳ್ಳಿಯ ಗೃಹಿಣಿ ಆತ್ಮಹತ್ಯೆ ಪ್ರಕರಣ ಸುಖಾಂತ್ಯ; ತೋಟದಲ್ಲಿ ಅಂತ್ಯಕ್ರಿಯೆ
ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು