ಮಂಡ್ಯ ಸಿಟಿ ಕ್ಲಬ್ ವಿರುದ್ಧ ಲೋಕಾಯುಕ್ತಗೆ ದೂರು

KannadaprabhaNewsNetwork |  
Published : Jan 20, 2026, 01:45 AM IST
ಮಂಡ್ಯ ಸಿಟಿ ಕ್ಲಬ್ ವಿರುದ್ಧ ಲೋಕಾಯುಕ್ತಗೆ ದೂರು | Kannada Prabha

ಸಾರಾಂಶ

ಮಂಡ್ಯ ನಗರ ಸರ್ವೇ ನಂ.೧ರಲ್ಲಿನ ನಗರಸಭೆಗೆ ಸೇರಿದ ಆಸ್ತಿಯನ್ನು ದಶಕಗಳ ಕಾಲ ಅನಧಿಕೃತವಾಗಿ ವಶಪಡಿಸಿಕೊಂಡು ವಾಣಿಜ್ಯ ಉದ್ದೇಶಕ್ಕೆ ದುರುಪಯೋಗ ಪಡಿಸಿಕೊಂಡಿರುವ ಕುರಿತು ಮಂಡ್ಯ ಸಿಟಿ ಕ್ಲಬ್ ಸಮಿತಿ ಸದಸ್ಯರು ಹಾಗೂ ಅವರಿಗೆ ಅಕ್ರಮ ಸಂರಕ್ಷಣೆ ನೀಡಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರ ಸರ್ವೇ ನಂ.೧ರಲ್ಲಿನ ನಗರಸಭೆಗೆ ಸೇರಿದ ಆಸ್ತಿಯನ್ನು ದಶಕಗಳ ಕಾಲ ಅನಧಿಕೃತವಾಗಿ ವಶಪಡಿಸಿಕೊಂಡು ವಾಣಿಜ್ಯ ಉದ್ದೇಶಕ್ಕೆ ದುರುಪಯೋಗ ಪಡಿಸಿಕೊಂಡಿರುವ ಕುರಿತು ಮಂಡ್ಯ ಸಿಟಿ ಕ್ಲಬ್ ಸಮಿತಿ ಸದಸ್ಯರು ಹಾಗೂ ಅವರಿಗೆ ಅಕ್ರಮ ಸಂರಕ್ಷಣೆ ನೀಡಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ಎಸ್.ಸಂಜಯ್ ಖಾಸಗಿ ದೂರೊಂದನ್ನು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ೧೯೮೮ ಹಾಗೂ ಕರ್ನಾಟಕ ಮುನಿಸಿಪಲ್ ಕಾನೂನಿನಡಿ ೧೦೦ ಕೋಟಿ ರು.ಗೂ ಅಧಿಕ ಸಾರ್ವಜನಿಕ ನಿಧಿ ನಷ್ಟ ಉಂಟುಮಾಡಿರುವ ಮಂಡ್ಯ ಸಿಟಿ ಕ್ಲಬ್ ಸಮಿತಿ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಉಪ ನಿಬಂಧಕರಲ್ಲಿ ಮನವಿ ಮಾಡಿದ್ದಾರೆ.

ಮಂಡ್ಯ ನಗರ ಸರ್ವೇ ನಂ.೧ರಲ್ಲಿರುವ ನಗರಸಭೆಗೆ ಸೇರಿದ ಜಮೀನು ೧೯೭೬ರಲ್ಲಿ ಸರ್ಕಾರದಿಂದ ಭೂಸ್ವಾಧೀನಗೊಂಡು ನಗರಸಭೆಯ ಶಾಶ್ವತ ಸಾರ್ವಜನಿಕ ಆಸ್ತಿಯಾಗಿದೆ. ಆದರೆ, ಸಿಟಿ ಕ್ಲಬ್ ಯಾವುದೇ ನೋಂದಾಯಿಸಲ್ಪಟ್ಟ ಮಾರಾಟಪತ್ರ, ಗುತ್ತಿಗೆ, ಶಾಸನಬದ್ಧ ಮಂಜೂರಾತಿ ಇಲ್ಲದೆ ಅಕ್ರಮವಾಗಿ ಸಾರ್ವಜನಿಕ ಆಸ್ತಿಯನ್ನು ವಶಪಡಿಸಿಕೊಂಡು ರಿಕ್ರಿಯೇಷನ್ ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್ ನಡೆಸಿ ಲಕ್ಷಾಂತರ ರು. ವಾರ್ಷಿಕ ಆದಾಯ ಗಳಿಸಿಕೊಂಡು ಬಂದಿರುವುದು ಸಂಘಟಿತ ಕ್ರಿಮನಲ್ ಕೃತ್ಯವಾಗಿದೆ ಎಂದು ಆರೋಪಿಸಿದ್ದಾರೆ.

ನಗರಸಭೆ, ಅಬಕಾರಿ ಇಲಾಖೆ ಹಾಗೂ ಸಾರ್ವಜನಿಕರನ್ನು ನಮ್ಮ ಆಸ್ತಿಗೆ ಖಾತೆ ಇದೆ, ತೆರಿಗೆ ಕಟ್ಟಿದ್ದೇವೆ ಎಂಬ ಸುಳ್ಳು ನೆಪದಲ್ಲಿ ಮೋಸಗೊಳಿಸಿ ಅನಧಿಕೃತ ಲಾಭ ಪಡೆದಿದ್ದಾರೆ. ನಗರಸಭಾ ಆಸ್ತಿಗೆ ಉದ್ದೇಶಪೂರ್ವಕವಾಗಿ ನುಗ್ಗಿ ವಾಣಿಜ್ಯ ಚಟುವಟಿಕೆ ನಡೆಸಿರುವುದು ಗಂಭೀರ ಕೃತ್ಯವಾಗಿದೆ. ಸಾರ್ವಜನಿಕ ಆಸ್ತಿಯನ್ನು ಖಾಸಗಿ ಲಾಭಕ್ಕೆ ಬಳಸಿರುವುದು ಕ್ರಿಮಿನಲ್ ಅಪರಾಧವಾಗಿದೆ. ಸಿಟಿ ಕ್ಲಬ್ ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳು ಒಟ್ಟಾಗಿ ಸಂಚು ರೂಪಿಸಿ ಅತಿಕ್ರಮಿಸಿಕೊಂಡಿರುವ ಜಾಗದಿಂದ ಹೊರಹಾಕುವಂತೆ ನ್ಯಾಯಾಲಯ ನೀಡಿರುವ ಆದೇಶವನ್ನು ತಡೆಹಿಡಿದಿರುವುದು. ಆಸ್ತಿ ಅತಿಕ್ರಮಣದಿಂದ ಆದಷ್ಟವನ್ನು ವಸೂಲು ಮಾಡದೆ ಅಕ್ರಮವಾಗಿ ಲೈಸೆನ್ಸ್ ನೀಡಿರುವುದು ದೊಡ್ಡ ಕೃತ್ಯವಾಗಿದೆ ಎಂದು ದೂಷಿಸಿದ್ದಾರೆ.

ನಗರಸಭೆ ಸೇರಿದ ಆಸ್ತಿಯಲ್ಲಿ ಅತಿಕ್ರಮಿಸಿಕೊಂಡಿರುವ ಜಾಗವನ್ನು ತೆರವುಗೊಳಿಸುವಂತೆ ೧೭ ಫೆಬ್ರವರಿ ೨೦೦೭ರಲ್ಲೇ ನ್ಯಾಯಾಲಯ ಆದೇಶಿಸಿದ್ದರೂ ಜಾರಿಗೊಳಿಸದೆ ನಗರಸಭೆ ಅಧಿಕಾರಿಗಳು ೧೦೦ ಕೋಟಿ ರು.ಗೂ ಅಧಿಕ ಅಕ್ರಮ ಸ್ವಾಧೀನದ ಲಾಭವನ್ನು ವಸೂಲಿ ಮಾಡದೆ ಸಾರ್ವಜನಿಕ ನಿಧಿಗೆ ಭಾರೀ ನಷ್ಟ ಉಂಟುಮಾಡಿರುವುದಾಗಿ ಆಪಾದಿಸಿದ್ದಾರೆ.

ಅತಿಕ್ರಮಣದ ಜಾಗ ತೆರವಿಗೆ ನ್ಯಾಯಾಲಯ ಆದೇಶ ನೀಡಿದ್ದರೂ ನಗರಸಭೆ ಅಧಿಕಾರಿಗಳು ಸಿಟಿ ಕ್ಲಬ್ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ. ಜಾಗ ತೆರವಿಗೆ ನೋಟಿಸ್ ನೀಡದೆ ಹೈಕೋರ್ಟ್ ತೀರ್ಪಿನ ನೆಪದಲ್ಲಿ ಪ್ರಕರಣವನ್ನು ಅಕ್ರಮವಾಗಿ ಎಳೆದಿರುವುದು ನ್ಯಾಯಾಂಗ ನಿಂದನೆಯಾಗಿದೆ ಎಂದು ದೂರಿದ್ದಾರೆ.

ಅತಿಕ್ರಮಣಗೊಂಡಿರುವ ಜಾಗದ ಇಂದಿನ ಮಾರುಕಟ್ಟೆ ಬೆಲೆ ಚದರಡಿಗೆ ೫೦೦೦ ರು. ಇದೆ. ೫೪ ಸಾವಿರ ಚದರಡಿಗೆ ಪ್ರತಿ ಚದರಡಿಗೆ ೩೩ ರು.ನಂತೆ ೧೭.೮೨ ಲಕ್ಷ ರು., ವಾರ್ಷಿಕ ೨.೧೪ ಕೋಟಿ ರು. ಆಗಿದೆ. ಕಳೆದ ೩೦ ವರ್ಷಗಳಿಂದ ಅಕ್ರಮ ಸ್ವಾಧೀನದಲ್ಲಿರುವುದಕ್ಕೆ ೬೪.೨ ಕೋಟಿ ರು. ಅದಕ್ಕೆ ಶೇ.೨ರಷ್ಟು ಬಡ್ಡಿ ಸೇರಿಸಿದರೆ ೧೨೮ ಕೋಟಿ ರು.ಗೂ ಹೆಚ್ಚು ಹಣವನ್ನು ಪಾವತಿಸಬೇಕಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಸಿಟಿ ಕ್ಲಬ್ ಸಮಿತಿ ಸದಸ್ಯರು ೩೦ ವರ್ಷಗಳಿಂದ ೧೨೮ ಕೋಟಿ ರು. ಸಾರ್ವಜನಿಕ ಹಣವನ್ನು ವ್ಯವಸ್ಥಿತವಾಗಿ ಲೂಟಿ ಹೊಡೆದಿದ್ದಾರೆ. ಟ್ರೇಡ್ ಲೈಸೆನ್ಸ್, ಸಿಎಲ್-೪ ಬಾರ್ ಲೈಸೆನ್ಸ್ ಅಕ್ರಮವಾಗಿ ಕ್ಲಬ್ ನಡೆಸುತ್ತಿರುವುದು ಬಂಧನಕ್ಕೆ ಅರ್ಹ ಅಪರಾಧವಾಗಿದೆ. ಆ ಹಿನ್ನೆಲೆಯಲ್ಲಿ ಸಿಟಿ ಕ್ಲಬ್ ಸಮಿತಿ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬಸ್‌ನಲ್ಲಿ ಲೈಂಗಿಕ ಕಿರುಕುಳ ಎಂದು ಮಹಿಳೆ ವಿಡಿಯೋ, ವ್ಯಕ್ತಿ ಆತ್ಮ*ತ್ಯೆ
ಹುಣಸೂರಿನಲ್ಲಿ ₹10 ಕೋಟಿ ಚಿನ್ನ ದೋಚಿದ್ದವರು ಬಿಹಾರದಲ್ಲಿ ಬಲೆಗೆ