ಕನ್ನಡಪ್ರಭ ವಾರ್ತೆ ಮದ್ದೂರು
ಮನೆಯೊಂದಕ್ಕೆ ನುಗ್ಗಿ ಗೃಹಿಣಿ ಬೆದರಿಸಿ ನಗದು ಸೇರಿದಂತೆ ಚಿನ್ನಾಭರಣಗಳನ್ನು ದೋಚಿದ್ದ ಆರೋಪದ ಮೇಲೆ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಮರೀಗೌಡನಿಗೆ ಜೆಎಂಎಫ್‌ಸಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮಂಗಳವಾರ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.ಆರೋಪಿ ಮರೀಗೌಡ ತಮ್ಮ ಪರ ವಕೀಲ ಬಿ.ಅಪ್ಪಾಜಿಗೌಡರು ಈತ ಹಿರಿಯ ನಾಗರಿಕನಾಗಿದ್ದಾನೆ. ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ಪೊಲೀಸರು ಸಹಾಯಕ ಸರ್ಕಾರಿ ಅಭಿಯೋಜಕರ ಮೂಲಕ ತಕರಾರು ಅರ್ಜಿ ಸಲ್ಲಿಸಿದ್ದರು.
ಆರೋಪಿ ಮರೀಗೌಡರ ಪರ ವಕೀಲರ ಅರ್ಜಿ ವಿಚಾರಣೆ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕರು ನ್ಯಾಯಾಂಗ ಬಂಧನದಲ್ಲಿರುವ ಮರಿಗೌಡ ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿಯಾಗಿದ್ದಾನೆ. ಈತರಿಗೆ ಜಾಮೀನು ನೀಡಿದರೆ ಸಾಕ್ಷಿ ಗಳಿಗೆ ಹೆದರಿಸಿ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಈತನಿಗೆ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಿದ್ದರು.ಆರೋಪಿ ಪರ ವಕೀಲ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರ ವಾದಗಳನ್ನು ಆಲಿಸಿದ ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಕೆ.ಗೋಪಾಲಕೃಷ್ಣ ಅವರು ಮರೀಗೌಡನಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಪೊಲೀಸರ ವಿಚಾರಣೆಗೆ ಸಹಕರಿಸಬೇಕು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು, ಸಾಕ್ಷಿಗಳಿಗೆ ಬೆದರಿಕೆಹಾಕಬಾರದು ಮತ್ತು ನಾಶಪಡಿಸಬಾರದು ಎಂದು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಆರೋಪಿ ಮರೀಗೌಡ ಕಳೆದ ಮೂರು ತಿಂಗಳ ಹಿಂದೆ ಪಟ್ಟಣದ ಶ್ರೀ ವೆಂಕಟೇಶ್ವರ ಇಂಡಿಯನ್ ಗ್ಯಾಸ್ ಮಾಲೀಕ ಎಂ.ಸಿ.ಚಂದ್ರಶೇಖರ್ ಮನೆಗೆ ರಾತ್ರಿ ವೇಳೆ ನುಗ್ಗಿ ಆತನ ಪತ್ನಿ ಸುಶೀಲಮ್ಮಳಿಗೆ ಬೆದರಿಕೆ ಹಾಕಿ 150 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ನಗದು ದೋಚಿ ಆರೋಪದ ಮೇಲೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.