ತೆರಿಗೆ ಬಾಕಿ ಇರುವ ವಾಣಿಜ್ಯ ಸ್ವತ್ತುಗಳನ್ನು ಸೀಲ್ ಮಾಡುವಂತೆ ಮಹೇಶ್ವರ್ ರಾವ್ ಸೂಚನೆ

Published : Nov 25, 2025, 11:58 AM IST
Greater Bengaluru Authority

ಸಾರಾಂಶ

  ಐದು ಪಾಲಿಕೆಗಳಿಂದ 6,700 ಕೋಟಿ ರು. ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು,   3,533 ಕೋಟಿ ರು. ಸಂಗ್ರಹಿಸಲಾಗಿದೆ. ಬಾಕಿ ಮತ್ತು ಹೆಚ್ಚು ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಪಟ್ಟಿ ಮಾಡಿ ಆಸ್ತಿ ತೆರಿಗೆ ವಸೂಲಿ ಮಾಡುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 ಬೆಂಗಳೂರು :  ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐದು ಪಾಲಿಕೆಗಳಿಂದ 6,700 ಕೋಟಿ ರು. ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ಈವರೆಗೆ 3,533 ಕೋಟಿ ರು. ಸಂಗ್ರಹಿಸಲಾಗಿದೆ. ಬಾಕಿ ಮತ್ತು ಹೆಚ್ಚು ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಪಟ್ಟಿ ಮಾಡಿ ಆಸ್ತಿ ತೆರಿಗೆ ವಸೂಲಿ ಮಾಡುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಬಿಎ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ, ಇ-ಖಾತಾ, ಬಿ ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮಾಡುವ ಕುರಿತು ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸುಸ್ತಿದಾರರು, ಆಸ್ತಿ ತೆರಿಗೆ ಪರಿಷ್ಕರಣೆ ಪ್ರಕರಣಗಳನ್ನು ಪತ್ತೆ ಹಚ್ಚಿ ಅದರಿಂದ ಬರಬೇಕಿರುವ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕು. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಹುಡುಕಿ, ತೆರಿಗೆ ವ್ಯಾಪ್ತಿಗೆ ತರಬೇಕು ಎಂದು ಹೇಳಿದರು.

ಪಾಲಿಕೆಗಳಲ್ಲಿ 24 ಸಾವಿರ ಆಸ್ತಿಗಳ ಆಸ್ತಿ ತೆರಿಗೆ ಪರಿಷ್ಕರಣೆ ಪ್ರಕರಣ

ಪಾಲಿಕೆಗಳಲ್ಲಿ 24 ಸಾವಿರ ಆಸ್ತಿಗಳ ಆಸ್ತಿ ತೆರಿಗೆ ಪರಿಷ್ಕರಣೆ ಪ್ರಕರಣಗಳಿದ್ದು, ಅದರಿಂದ ಸುಮಾರು 170 ಕೋಟಿ ರು. ಸಂಗ್ರಹಿಸಬೇಕಿದೆ. ಸುಮಾರು 22 ಸಾವಿರ ಸುಸ್ತಿದಾರರಿಂದ ಬರಬೇಕಿರುವ 598 ಕೋಟಿ ರು. ವಸೂಲಿಗೆ ಹೆಚ್ಚು ಗಮನ ನೀಡಬೇಕು. ನಿತ್ಯ ಕಂದಾಯ ಅಧಿಕಾರಿಗಳ ಜೊತೆ ಪರಿಶೀಲನೆ ಸಭೆ ನಡೆಸಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮ ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಖಾತಾ ಪಡೆಯಲು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಅವುಗಳಿಗೆ ಕೂಡಲೇ ಖಾತೆ ನೀಡಬೇಕು. ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಬಂದಿರುವಂತಹ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗಾಗಿ ಎ-ಖಾತಾ ನೀಡುವ ಕೆಲಸ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರು ತಿಳಿಸಿದರು.

ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಪಾಲಿಕೆಗಳ ಆಯುಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸೀಲ್ ಮಾಡಿ ಬಾಕಿ ಹಣ ವಸೂಲಿ ಮಾಡಿ:

ಪಾಲಿಕೆಗಳಲ್ಲಿ ವಿಭಾಗವಾರು 100 ಪರಿಷ್ಕರಣೆ ಪ್ರಕರಣಗಳು, 100ಕ್ಕೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರನ್ನು ಪಟ್ಟಿ ಮಾಡಿ ತೆರಿಗೆ ವಸೂಲಿ ಮಾಡಬೇಕು. ಬಾಕಿ ಉಳಿಸಿಕೊಳ್ಳುವ ವಾಣಿಜ್ಯ ಸ್ವತ್ತುಗಳನ್ನು ಸೀಲ್ ಮಾಡಬೇಕು ಎಂದು ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದರು.

PREV
Read more Articles on

Recommended Stories

₹7.11 ಕೋಟಿ ಲೂಟಿ ಪ್ರಕರಣದ ಬಂಧಿತರಲ್ಲಿ ಇಬ್ಬರು ಕೊಲೆ, ಲೈಂಗಿಕ ಕಿರುಕುಳ ಆರೋಪಿಗಳು!
ಹೊಸ ವರ್ಷಾಚರಣೆಗಾಗಿ ದಾಸ್ತಾನು ಮಾಡಿದ್ದ ಬರೋಬ್ಬರಿ ₹23.74 ಕೋಟಿಯ ಡ್ರಗ್ಸ್‌ ಜಪ್ತಿ