ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಮಹಿಳೆ ಸಂಬಂಧಿಕರಿಂದಲೇ ಯುವಕನ ಹತ್ಯೆ

KannadaprabhaNewsNetwork |  
Published : Nov 26, 2025, 04:15 AM IST
narasimaraju | Kannada Prabha

ಸಾರಾಂಶ

ವಿಚ್ಛೇದಿತ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಮಹಿಳೆಯ ಸಂಬಂಧಿಕರು ಹತ್ಯೆಗೈದಿರುವ ಘಟನೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ವಿಚ್ಛೇದಿತ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಮಹಿಳೆಯ ಸಂಬಂಧಿಕರು ಹತ್ಯೆಗೈದಿರುವ ಘಟನೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುತ್ಯಾಲನಗರ ನಿವಾಸಿ ನರಸಿಂಹರಾಜು(35) ಕೊಲೆಯಾದವ. ಶನಿವಾರ ಸಂಜೆ ಯಶವಂತಪುರದ ಮುತ್ಯಾಲನಗರದಲ್ಲಿ ಈ ಘಟನೆ ನಡೆದಿದೆ. ನರಸಿಂಹರಾಜು ವಿಚ್ಛೇದಿತ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿರುವುದೇ ಹತ್ಯೆಗೆ ಕಾರಣ ಎನ್ನಲಾಗಿದೆ.

ಮುತ್ಯಾಲನಗರದಲ್ಲಿ ಕೆಲ ವರ್ಷಗಳಿಂದ ತಾಯಿ ಜತೆ ವಾಸವಾಗಿದ್ದ ನರಸಿಂಹರಾಜು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತನ ತಾಯಿ ಕೂಡ ಸಣ್ಣ-ಪುಟ್ಟ ಕೆಲಸಕ್ಕೆ ಹೋಗುತ್ತಿದ್ದರು. ಈಮಧ್ಯೆ, ಮನೆ ಸಮೀಪದಲ್ಲಿರುವ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುವ ಮಹಿಳೆ ಜತೆ ನರಸಿಂಹರಾಜು ಸುಮಾರು 8 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದ ತನ್ನ ಕುಟುಂಬ ಸದಸ್ಯರು ಆಕೆಗೆ ಬುದ್ಧಿವಾದ ಹೇಳಿದ್ದರು. ಆದರೂ ಆಕೆ ನರಸಿಂಹರಾಜು ಜತೆಗಿನ ಸಂಬಂಧ ಮುಂದುವರಿಸಿದ್ದಳು. ಆಗಾಗ್ಗೆ ಆಕೆ ನರಸಿಂಹರಾಜು ಮನೆಗೆ ಬಂದು ಹೋಗುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕವಾಗಿ ಹಲ್ಲೆ ನಡೆಸಿ ಹತ್ಯೆ?

ನ.22ರಂದು ಕೂಡ ಮಹಿಳೆ ನರಸಿಂಹರಾಜು ಮನೆಗೆ ಬಂದಿದ್ದಳು. ಈ ವಿಷಯ ತಿಳಿದ ಆ ಮಹಿಳೆಯ ಸಂಬಂಧಿಕರು ಕೂಡಲೇ ಅಲ್ಲಿಗೆ ಬಂದಿದ್ದು, ಬಳಿಕ ನರಸಿಂಹರಾಜುನನ್ನು ಮನೆಯಿಂದ ಹೊರಗೆ ಎಳೆದು ಸಾರ್ವಜನಿಕವಾಗಿ ರಸ್ತೆಯಲ್ಲೇ ಐದಾರು ಮಂದಿ ಮನಸೋಇಚ್ಛೆ ಥಳಿಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಹೋದ ಆತನ ತಾಯಿ ಮೇಲೂ ಹಲ್ಲೆ ನಡೆಸಲಾಗಿದೆ. ಬಳಿಕ ಸ್ಥಳೀಯರು ಜಗಳ ಬಿಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನರಸಿಂಹರಾಜುನನ್ನು ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ಸಂಬಂಧ ಮೃತನ ತಾಯಿ, ಪುತ್ರನ ಸಾವಿಗೆ ಮಹಿಳೆ ಮತ್ತು ಆಕೆಯ ಕುಟುಂಬದ ಸದಸ್ಯರೇ ಕಾರಣ ಎಂದು ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರ್ಛೆ ರೋಗದಿಂದ ಬಳಲುತ್ತಿದ್ದ?:

ಮಹಿಳೆ ಕುಟುಂಬ ಸದಸ್ಯರು ಹಲ್ಲೆ ನಡೆಸುವಾಗ ನರಸಿಂಹರಾಜುಗೆ ಮೂರ್ಛೆ ಬಂದಿದ್ದು, ಅದರಿಂದಲೇ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ನರಸಿಂಹರಾಜು ಮೇಲೆ ಯಾವುದೇ ಗಂಭೀರವಾದ ಗಾಯಗಳು ಆಗಿಲ್ಲ. ಆದರೆ, ಹಲ್ಲೆಯಿಂದ ಆಂತರಿಕ ಗಾಯವಾಗಿರುವ ಸಾಧ್ಯತೆಯಿದೆ. ಆದ್ದರಿಂದ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ. ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಕ್ಸ್...ಹಲ್ಲೆ ವಿಡಿಯೋ ವೈರಲ್‌

ಮತ್ತೊಂದೆಡೆ ನರಸಿಂಹರಾಜು ಮೇಲೆ ಮಹಿಳೆಯ ಕುಟುಂಬ ಸದಸ್ಯರು ಸಾರ್ವಜನಿಕವಾಗಿ ಹಲ್ಲೆ ನಡೆಸುವ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಐದಾರು ಮಂದಿ ಪೈಪ್‌ ಹಾಗೂ ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಆರೋಪಿತರ ವಿಚಾರಣೆ ನಡೆಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-ಮುತ್ಯಾಲನಗರದ ನರಸಿಂಹರಾಜುಗೆ ವಿಚ್ಛೇಧಿತ ಮಹಿಳೆ ಜತೆ ಅಕ್ರಮ ಸಂಬಂಧ ಇತ್ತು-ಈ ಬಗ್ಗೆ ವಿಚ್ಛೇಧಿತ ಮಹಿಳೆ ಕಡೆಯವರು ಆಕೆಗೆ ಬುದ್ಧಿವಾದ ಹೇಳಿದ್ದರು-ಆದರೂ ಆಕೆ ಆಗಾಗ ನರಸಿಂಹರಾಜು ಮನೆಗೆ ಬಂದು ಹೋಗುತ್ತಿದ್ದಳು.-ಶನಿವಾರ ಕೂಡ ಆಕೆ ಮನೆಗೆ ಬಂದುದನ್ನು ತಿಳಿದು ಕುಟುಂಬ ಸದಸ್ಯರು ಬಂದಿದ್ದಾರೆ-ಆಗ ನರಸಿಂಹರಾಜುನನ್ನು ಹೊರಗೆಳೆದು ಥಳಿಸಿದ್ದು ಅಸ್ವಸ್ಥನಾಗಿ ಮೃತಪಟ್ಟಿದ್ದಾನೆ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಯುಪಿಐ ಪಾವತಿ ಟಿಕೆಟ್‌ ಅಕ್ರಮ ಬಿಎಂಟಿಸಿ 3 ಕಂಡಕ್ಟರ್‌ ಸಸ್ಪೆಂಡ್‌