ಈಗೀಗ ಮಧ್ಯರಾತ್ರಿ ಗುಡ್‌ನೈಟ್ ಮೆಸೇಜ್ ಬಂದರೂ ಭಯ ಆಗುತ್ತೆ : ಸುದೀಪ್ ಮನದಾಳದ ಮಾತು

KannadaprabhaNewsNetwork |  
Published : Dec 20, 2024, 12:46 AM ISTUpdated : Dec 20, 2024, 04:38 AM IST
Kiccha Sudeep Mother Passes Away

ಸಾರಾಂಶ

ಮ್ಯಾಕ್ಸ್ ಬಿಡುಗಡೆ ಹಿನ್ನೆಲೆಯಲ್ಲಿ ಸುದೀಪ್ ಮನದಾಳದ ಮಾತು.

- ಪ್ರಿಯಾ ಕೆರ್ವಾಶೆ

ಸಾಮಾನ್ಯವಾಗಿ ಪತ್ರಕರ್ತರ ಜೊತೆ ಆರಾಮವಾಗೇ ಕುಳಿತು ಮಾತನಾಡುವ ಸುದೀಪ್ ಈ ಬಾರಿ ಕೊಂಚ ಉದ್ವಿಗ್ನತೆಯಿಂದಲೇ ಮಾತಿಗೆ ಕೂತರು. ಮಾತಿಗೂ ಮೊದಲು, ‘ನಾನು ಸ್ವಲ್ಪ ಬೇಗ ಹೋಗಬೇಕು’ ಅಂದರು. ಅದಕ್ಕೆ ಕಾರಣವನ್ನೂ ಕೊಟ್ಟರು. ‘ಅಮ್ಮ ಹೋದ ಮೇಲೆ ಅಪ್ಪ ಒಂಟಿಯಾಗಿದ್ದಾರೆ. 57 ವರ್ಷಗಳ ಸಾಂಗತ್ಯ ಅವರದು. 87 ವರ್ಷದ ಅಪ್ಪ ಇದನ್ನೆಲ್ಲ ಹೇಗೆ ತಡೆಯುತ್ತಾರೆ.. ನಾನೀಗ ಅಪ್ಪನ ಬಳಿ ಹೋಗಬೇಕು’ ಎನ್ನುತ್ತ ವಿಷಾದದಿಂದ ನಕ್ಕರು. ಬಳಿಕ ಅಮ್ಮನ ಬಗ್ಗೆ, ಸಿನಿಮಾ ಬಗ್ಗೆ, ಬದುಕಿನ ಬಗ್ಗೆ ಸಣ್ಣ ವಿಷಾದದಲ್ಲೇ ಅನೇಕ ವಿಚಾರಗಳನ್ನು ಈ ಸಂದರ್ಭ ಹಂಚಿಕೊಂಡರು.

- ಮಗು ತಾಯಿ ಸಂಬಂಧ ಅಂತ ಒಂದಿರುತ್ತೆ. ನನ್ನ ಅಮ್ಮ ಜಗತ್ತು ವರ್ಸ್ಟ್ ಅಂದುಕೊಂಡ ನನ್ನ ಕೆಲಸವನ್ನೂ ಇಷ್ಟ ಪಡ್ತಿದ್ದರು. ಬಿಗ್‌ಬಾಸ್‌ನಲ್ಲಿ ಪ್ರತೀ ಸಲ ಕಾಸ್ಟ್ಯೂಮ್‌ ಹಾಕ್ಕೊಂಡಾಗ ಕನ್ನಡಿ ಎದುರು ನಿಂತು ಒಂದು ಫೋಟೋ ಕ್ಲಿಕ್ ಮಾಡಿ ಅಮ್ಮಂಗೆ ಕಳಿಸ್ತಿದ್ದೆ. ನಾನು ತುಂಬ ಚೆನ್ನಾಗಿ ಕಾಣ್ತಿದ್ರೆ ಅಮ್ಮ ಥೂ ನಾಯಿ ಅಂತೆಲ್ಲ ಬೈಯ್ಯೋದಿತ್ತು.

ಅವರು ಹೋದ ಮೇಲೆ ಬಟ್ಟೆ ಬಗೆಗಿನ ಆಸಕ್ತಿಗಳೆಲ್ಲ ಹೋಗಿದೆ. ಬರೀ ಕುರ್ತಾ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ತಿದ್ದೀನಿ.

- ಹಾಗೆ ನೋಡಿದರೆ ನಟನಾದ ಮೇಲೂ ನನ್ನ ಬ್ಯಾಂಕ್ ಅಕೌಂಟ್ ಜೀರೋ ಇತ್ತು. ಅದು ಎಫೆಕ್ಟ್ ಆಗಿಲ್ಲ. ಸೊನ್ನೆ ಅನ್ನೋದು ಕೂಡ ನನ್ನ ಬದುಕಿನಲ್ಲಿ ಅಂಥ ಪರಿಣಾಮ ಬೀರಿಲ್ಲ. ಆದರೆ ನನ್ನ ಕಣ್ಮುಂದೆಯೇ ಅಮ್ಮ ಮಲಗಿದ್ದ ಐಸಿಯುನಲ್ಲಿ ಎಲ್ಲ ಮೆಷಿನ್‌ಗಳ ಮೀಟರ್‌ಗಳೂ ಏಕಕಾಲದಲ್ಲಿ ಸ್ತಬ್ದವಾದಾಗ, ಏನೂ ಮಾಡಲಾಗದೆ ಅದನ್ನು ನೋಡಲೂ ಆಗದೆ ನಿಂತಿದ್ದೆ. ಆಗ ನನ್ನೊಳಗೆ ಆವರಿಸಿದ ಅಸಹಾಯಕತೆ ವರ್ಣಿಸುವುದು ಕಷ್ಟ. ಅಮ್ಮ ಔಷಧದ ಪರಿಣಾಮ ಕಣ್ಮುಚ್ಚಿ ಮಲಗಿದ್ದರು. ಅವರಿಗೆ ತಾನು ಜಗತ್ತಿನಿಂದ ನಿರ್ಗಮಿಸುತ್ತಿದ್ದೀನಿ ಅನ್ನೋದೂ ಗೊತ್ತಾಗುತ್ತಿರಲಿಲ್ಲ.

ನನಗಿನ್ನೂ ಆ ಹೊತ್ತಿನ ಗಿಲ್ಟ್‌ನಿಂದ ಹೊರಬರಕ್ಕಾಗ್ತಿಲ್ಲ. ನನ್ನ ‘ಪೈಲ್ವಾನ್‌’ ಸಿನಿಮಾ ತನಕವೂ ಥಿಯೇಟರ್‌ನಲ್ಲೇ ಸಿನಿಮಾ ನೋಡ್ತಿದ್ದ ಅಮ್ಮ ಕ್ರಿಕೆಟ್ ಮ್ಯಾಚ್‌ಗೂ ಮಿಸ್‌ ಮಾಡದೇ ಬರೋರು. ಅಮ್ಮಂಗೆ ಸಿನಿಮಾದಲ್ಲಿ ನನ್ನ ಎಂಟ್ರಿ ಬಗ್ಗೆ ಬಹಳ ಕುತೂಹಲ. ಹಿನ್ನೆಲೆಯಲ್ಲಿ ಬಿರುಗಾಳಿ, ಹೈ ಸೌಂಡು, ಬ್ಲಾಸ್ಟ್ ಎಲ್ಲ ಆಗಿ ಎಂಟ್ರಿ ಕೊಟ್ಟರೆ ಬಹಳ ಖುಷಿ. ಮುಕುಂದ ಮುರಾರಿ ಹಾಡು ಅಮ್ಮನ ಫೇವರಿಟ್‌.

- ಅಂಥ ಅಮ್ಮನನ್ನು ಕಳೆದುಕೊಂಡ ಮೇಲೆ ವಿಷಣ್ಣ ಸ್ಥಿತಿಯಲ್ಲಿದ್ದೇನೆ. ಎರಡು ಗಂಟೆಗಿಂತ ಹೆಚ್ಚು ನಿದ್ದೆ ಮಾಡಲು ಸಾಧ್ಯವಾಗ್ತಿಲ್ಲ. ಮಧ್ಯರಾತ್ರಿ ಒಂದು ಗುಡ್‌ನೈಟ್ ಮೆಸೇಜ್ ಬಂದರೂ ಬೆಚ್ಚಿ ಬೀಳ್ತೀನಿ. 87ರ ಅಪ್ಪನಿಗೇನಾಯ್ತೋ ಅನ್ನುವ ದಿಗಿಲದು. ಬಿಗ್‌ಬಾಸ್ ಶೋ ಮಾಡುವಾಗ ಒಮ್ಮೆ ಆಪ್ತರಾದ ಚಂದ್ರಚೂಡ್‌ ಏಕಾಏಕಿ ಬಂದು ಕ್ಯಾಮರ ಹಿಂದೆ ನಿಂತಾಗ ಭಯಬಿದ್ದು ಬ್ರೇಕ್ ತಗೊಂಡು ಅವರ ಬಳಿ ಯಾಕೆ ಬಂದಿದ್ದು ಅಂತ ವಿಚಾರಿಸಿದೆ.

- ಈಗ ನಾನೇ ಮುಂದೆ ನಿಂತು ಏನನ್ನೂ ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ಜಿಮ್‌ಗೆ ರೆಡಿಯಾಗಿ ಹೋಗ್ತೀನಿ, ಅರ್ಧ ಗಂಟೆಗೇ ಏನೂ ಮಾಡಲೇ ವಾಪಾಸ್ ಬರುತ್ತೇನೆ. ಈ ಕಾರಣಕ್ಕೇ ಡಿಸೆಂಬರ್‌ನಲ್ಲಿ ಶುರುವಾಗಬೇಕಿದ್ದ ‘ಬಿಲ್ಲ ರಂಗ ಭಾಷ’ ಶೂಟಿಂಗ್ ಜನವರಿ ಅಂತ್ಯಕ್ಕೆ ಪೋಸ್ಟ್‌ಪೋನ್‌ ಆಗಿದೆ.

- ಇನ್ನು ‘ಮ್ಯಾಕ್ಸ್’ ಸಿನಿಮಾ ವಿಚಾರಕ್ಕೆ ಬರೋದಾದ್ರೆ ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಸಸ್ಪೆಂಡ್‌ ಆಗಿರುವ ಬಹಳ ಗೌರವಾನ್ವಿತ ಪೊಲೀಸ್ ಆಫೀಸರ್‌ ಇನ್ನೇನು ಮರುದಿನ ಮತ್ತೆ ಡ್ಯೂಟಿಗೆ ರಿಪೋರ್ಟ್‌ ಮಾಡಿಕೊಳ್ಳಬೇಕು ಅಂಥಾ ಟೈಮಲ್ಲಿ ಗಂಭೀರ ಸನ್ನಿವೇಶ ಎದುರಾಗುತ್ತದೆ. ಅದನ್ನಾತ ಸರಿಯಾಗಿ ನಿರ್ವಹಿಸದಿದ್ದರೆ ಅನಾಹುತ ಗ್ಯಾರಂಟಿ. ಇಂಥಾ ಸಮಯದಲ್ಲಿ ಆತನ ನಡೆ ಹೇಗಿರುತ್ತೆ ಅನ್ನೋ ಕಥೆ. ಬಹಳ ವೇಗವಾದ ಕಥೆ. ಅದ್ಭುತ ಚಿತ್ರಕಥೆ. ಇಷ್ಟು ವೇಗದ ಕತೆ ಇರೋ ಸಿನಿಮಾವನ್ನು ನಾನು ಈವರೆಗೆ ಮಾಡಿಲ್ಲ.

- ಈ ಒಂದು ರಾತ್ರಿ ಅಂದರೆ ರಾತ್ರಿ 7 ರಿಂದ ಬೆಳಗ್ಗೆ 7ರವರೆಗಿನ ಕಥೆಗೆ 8 ತಿಂಗಳು ಚಿತ್ರೀಕರಣ ಮಾಡಿದ್ದೀವಿ. ಇಲ್ಲಿ ಕಂಟಿನ್ಯುಟಿ ಮ್ಯಾಚ್‌ ಮಾಡೋದೇ ಸವಾಲು. ಏಳೆಂಟು ತಿಂಗಳ ಕಾಲ, ಒಂದು ರಾತ್ರಿ ಇದ್ದ ಹಾಗೆ ಇರಬೇಕು ಅಂದರೆ ಹೇಗಿರುತ್ತೆ ಊಹಿಸಿ. ಅಷ್ಟೇ ಅಲ್ಲ, ಪಾಪರ್ಟಿ, ಡ್ರೆಸ್, ಮೇಕಪ್ ಎಲ್ಲದರಲ್ಲೂ ಕಂಟಿನ್ಯುಟಿ ಇರಬೇಕು. ಅದನ್ನು ನಿರ್ವಹಿಸೋದೆ ಸಮಸ್ಯೆ ಆಗಿತ್ತು.

- ಇದು ಬೆಂಗಳೂರು ಹೊರವಲಯದ ಕಥೆ. ನಿರ್ಮಾಪಕರು ತಮಿಳ್ನಾಡಿನವರಾದ ಕಾರಣ ಮಹಾಬಲಿಪುರಂ ಅವರಿಗೆ ಸಾಕಷ್ಟು ಗೊತ್ತಿತ್ತು. ಅಲ್ಲಿ ಆ್ಯಕ್ಸಿಡೆಂಟ್‌, ಕ್ರ್ಯಾಶ್‌, ಆ್ಯಕ್ಷನ್‌ ಸೀನ್‌ಗಳನ್ನು ಮಾಡಲು ಸಾಕಷ್ಟು ಸ್ಥಳಾವಕಾಶ ಇತ್ತು. ಜನ ಸಂಚಾರ ಕಡಿಮೆ ಇತ್ತು. ಹೀಗಾಗಿ ಬೆಂಗಳೂರಿನ ಕಥೆಯ ಚಿತ್ರೀಕರಣ ಮಹಾಬಲಿಪುರಂನ ರೆಸಾರ್ಟಿನಲ್ಲಾಯ್ತು.

- ನಮ್ಮ ಸಿನಿಮಾ ಕಥೆಯಲ್ಲಿ ಆ ರಾತ್ರಿ ಬಹಳಷ್ಟು ಘಟನೆ ನಡೆಯುತ್ತೆ. ಆದರೂ ಆ ರಾತ್ರಿ ದೀರ್ಘವಾಗಿದೆ ಅಂತನಿಸಲ್ಲ. ಆ ಮಟ್ಟಿನ ತಲ್ಲೀನತೆ, ವೇಗ ಸಿನಿಮಾಕ್ಕಿದೆ.

- ಈ ಶೂಟ್‌ನಲ್ಲಿ ಸಿಕ್ಕಾಪಟ್ಟೆ ಧೂಳಿಗೆ ನೆಬ್ಯುಲೈಸೇಶನ್ ಹಾಕಿಸ್ಕೊಂಡು ಮಲಗಿದ್ದೆ. ಅತ್ತ ಅಮ್ಮನೂ ಆಸ್ಪತ್ರೆಯಲ್ಲಿ ನೆಬ್ಯುಲೈಸೇಶನ್ ಮಾಡಿಸಿಕೊಳ್ತಿದ್ರು. ಅಮ್ಮನಿಗೆ ಈ ಫೋಟೋ ಕಳಿಸಿ, ‘ನೀನೂ ಇಲ್ಲೇ ಬಾ, ನಾನು ನಿಂಗೆ ಕಂಪನಿ ಕೊಡ್ತೀನಿ’ ಅಂತ ತಮಾಷೆ ಮಾಡಿದ್ದೆ.

- ಈ ಸಿನಿಮಾ ಆಗಸ್ಟ್‌ನಲ್ಲಿ ರಿಲೀಸ್‌ ಮಾಡೋ ಸನ್ನಿವೇಶ ಇದ್ದಾಗ ನನಗೆ ಬಹಳ ಉತ್ಸಾಹ ಇತ್ತು. ತಮಿಳು, ತೆಲುಗು ಡಬ್ಬಿಂಗ್ ಎಲ್ಲ ನಾನೇ ಮಾಡಲು ಮುಂದಾಗಿದ್ದೆ. ಯಾವಾಗ ಅದು ಸಿನಿಮಾ ರಿಲೀಸ್ ಮುಂದಕ್ಕೆ ಹೋಯ್ತೋ ಉತ್ಸಾಹ ಜರ್ರನೆ ಇಳಿಯಿತು. ಕನ್ನಡಕ್ಕೆ ಮಾತ್ರ ಡಬ್ಬಿಂಗ್ ಮಾಡ್ತೀನಿ ಅಂದೆ. ತಮಿಳಲ್ಲಿ ಶೇ.80, ತೆಲುಗಿನಲ್ಲಿ ಶೇ.40ರಷ್ಟಾಗಿದ್ದ ಡಬ್ಬಿಂಗ್‌ನ ಕೈಬಿಟ್ಟೆ. ಹಾಗಂತ ಅಸಮಾಧಾನ ಏನಿಲ್ಲ. ಅದು ಅನಿವಾರ್ಯತೆ, ಒಪ್ಪಲೇ ಬೇಕು.

- ಮ್ಯಾಕ್ಸ್‌ ಸ್ಕ್ರಿಪ್ಟ್‌ಗೆ ಕೈ ಬಂದಾಗ ಎರಡು ಆಯ್ಕೆ ಕೊಟ್ಟಿದ್ದರು. ಕಥೆ ತುಂಬ ಚೆನ್ನಾಗಿದೆ ನೋಡಿ, ನಿಮಗಿಷ್ಟವಾದರೆ ವಿಜಯ್‌ ಅವರೇ ನಿರ್ದೇಶನ ಮಾಡ್ತಾರೆ, ಇಲ್ಲಾ ನಿಮಗೆ ಗೊಂದಲ ಇದೆ ಅಂತಾದರೆ ಕಥೆ ಕೊಟ್ಟು ಹೋಗ್ತಾರೆ, ಬೇರೆ ಯಾರ ಕೈಯಲ್ಲಾದರೂ ನೀವು ಸಿನಿಮಾ ಮಾಡಿಸಬಹುದು ಅಂತ. ನನಗೆ ವಿಜಯ್ ಕ್ಲಾರಿಟಿ ಇಷ್ಟ ಆಯ್ತು. ಅವರೇ ಮಾಡಲಿ ಅಂದೆ. ಅವರು ಸಿನಿಮಾ ಬಹಳ ಚೆನ್ನಾಗಿ ಮಾಡಿದರು.

- ದಯಮಾಡಿ ರಕ್ಷಿತ್ ಅಥವಾ ರಿಷಬ್‌ ನನಗೆ ನಿರ್ದೇಶನ ಮಾಡುವ ಬಗ್ಗೆ ಕೇಳಬೇಡಿ. ಅವರು ಚೆನ್ನಾಗಿ ಬೆಳೀತಿದ್ದಾರೆ. ಈ ಸಮಯದಲ್ಲಿ ಅವರ ಮೇಲೆ ಇನ್ನಷ್ಟು ಹೊರೆ ಹೊರಿಸಲಾರೆ. ಆ ಕಾಲ ಬಂದಾಗ ಮಾಡೋಣ. ಅಲ್ಲೀವರೆಗೆ ಸುಮ್ಮನಿರಿ.

- ಹೈ ಬಜೆಟ್‌ ಸಿನಿಮಾ ಟಿಕೆಟ್‌ ದರ ಹೆಚ್ಚಿರುವುದು ತಪ್ಪು ಅನ್ನಲಾಗದು. ಅದು ಫೈವ್‌ ಸ್ಟಾರ್‌ ಹೊಟೇಲಲ್ಲಿ ಕೂತು ತಿಂಡಿ ರೇಟು ಕಮ್ಮಿ ಮಾಡಿ ಅಂದಹಾಗೆ. ಅಷ್ಟು ರೇಟ್‌ ಇಡದಿದ್ದರೆ ಹಾಕಿದ ಬಂಡವಾಳ ವಾಪಸ್ ತೆಗೆಯೋದು ಕಷ್ಟ.

- ಇನ್ನು 18 ತಿಂಗಳಿಗೆ ಎರಡು ಸಿನಿಮಾ ಮಾಡ್ತೀನಿ. ಒಂದು ‘ಬಿಲ್ಲರಂಗಭಾಷ’, ಇನ್ನೊಂದು ಸಿನಿಮಾ ಬಗ್ಗೆ ಇನ್ನೊಮ್ಮೆ ಹೇಳ್ತೀನಿ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಅಕ್ಷಯ್ ಖನ್ನಾಗೆ ಯಶಸ್ಸು ತಲೆಗೇರಿದೆ ಎಂದ ದೃಶ್ಯಂ 3 ನಿರ್ಮಾಪಕ
ಮಾರ್ಕ್‌ ನಂತರ ಮತ್ತಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದೇನೆ : ನವೀನ್‌ ಚಂದ್ರ