ದಾಳಿಕೋರ ಸಹ-ಪೈಲಟ್‌ಗೆ ಅಲ್‌-ಖೈದಾ ಉಗ್ರರ ನಂಟು

KannadaprabhaNewsNetwork |  
Published : Oct 04, 2026, 02:00 AM IST
ಪೈಲಟ್‌  | Kannada Prabha

ಸಾರಾಂಶ

ನಡು ಆಗಸದಲ್ಲಿ ಫ್ಲೈದುಬೈ ವಿಮಾನ ಹೈಜಾಕ್‌ ಮಾಡಿ ಅದನ್ನು ಪತನಗೊಳಿಸಲು ಯತ್ನಿಸಿದ ಒಮಾನಿ ಪೈಲಟ್‌ನದ್ದು ಭಯೋತ್ಪಾದನಾ ಕೃತ್ಯ ಎಂದು ಘಟನೆ ಕುರಿತು ತನಿಖೆ ನಡೆಸಿದ್ದ ಯುಎಇ ಸರ್ಕಾರ ಹೇಳಿದೆ.

- ಒಮಾನಿ ಪೈಲಟ್‌ನದ್ದು ಉಗ್ರ ದಾಳಿ: ಯುಎಇ

-----

‘ಉಗ್ರ’ ಪೈಲಟ್‌

ಫೋಟೋ, ಹೆಸರು

ಇದೀಗ ಬಹಿರಂಗ

ಫ್ಲೈದುಬೈ ವಿಮಾನ ಪತನಕ್ಕೆ ಯತ್ನಿಸಿದ ಒಮಾನ್‌ ಮೂಲದ ಪೈಲಟ್‌ನನ್ನು ಹಮಾಮ್‌ ಅಲ್‌-ಹಮಾಮಿ (29) ಎಂದು ಗುರುತಿಸಲಾಗಿದೆ. ಜೊತೆಗೆ ಆತನ ಫೋಟೋವನ್ನು ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ.

==

ನವದೆಹಲಿ: ನಡು ಆಗಸದಲ್ಲಿ ಫ್ಲೈದುಬೈ ವಿಮಾನ ಹೈಜಾಕ್‌ ಮಾಡಿ ಅದನ್ನು ಪತನಗೊಳಿಸಲು ಯತ್ನಿಸಿದ ಒಮಾನಿ ಪೈಲಟ್‌ನದ್ದು ಭಯೋತ್ಪಾದನಾ ಕೃತ್ಯ ಎಂದು ಘಟನೆ ಕುರಿತು ತನಿಖೆ ನಡೆಸಿದ್ದ ಯುಎಇ ಸರ್ಕಾರ ಹೇಳಿದೆ. ಜೊತೆಗೆ ವಿಮಾನದೊಳಗೆ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಛರ್‌ ಮೇಲೆ ದಾಳಿ ನಡೆಸಿದ ಒಮಾನಿ ಪೈಲಟ್‌ಗೆ ಅಲ್‌ಖೈದಾ ನಂಟಿರುವ ಬಗ್ಗೆ ಸುಳಿವು ಸಿಕ್ಕಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ದಾಳಿಕೋರ ಪೈಲಟ್‌ ಹೆಸರು ಹಮಾಮ್‌ ಅಲ್‌-ಹಮಾಮಿ (29) ಎಂದು ಬಹಿರಂಗವಾಗಿದ್ದು, ‘ಇಸ್ರೇಲ್‌ನಲ್ಲಿ ವಿಮಾನವನ್ನು ಪತನ ಮಾಡಲು ಬಯಸಿದ್ದೆ. ಈ ಮೂಲಕ, ಮತ್ತೊಮ್ಮೆ 9/11 ರೀತಿಯ ಕೃತ್ಯಕ್ಕೆ ಮುಂದಾಗಿದ್ದೆ’ ಎಂದು ಒಪ್ಪಿಕೊಂಡಿರುವುದಾಗಿ ಇಸ್ರೇಲ್‌ನ ಮಾಧ್ಯಮವೊಂದು ಹೇಳಿದೆ.

ಉಗ್ರ ಕೃತ್ಯ:

ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ವಿಮಾನವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಭಾಗವಾಗಿಯೇ ಹಮಾಮ್‌ ಭಾರತೀಯ ಪೈಲಟ್‌ ಮೇಲೆ ಸಣ್ಣ ಕೊಡಲಿ (ತುರ್ತು ಸಂದರ್ಭದಲ್ಲಿ ಗಾಜು ಒಡೆಯಲು ಇರುವ ಕೊಡಲಿ) ಯಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಇದು ಉಗ್ರ ಕೃತ್ಯ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಯುಇಎನ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಹಮಾಮ್‌ ಏಕಾಂಗಿಯಾಗಿ ದಾಳಿಗೆ ಮುಂದಾಗಿದ್ದನೇ ಅಥವಾ ಆತನ ಹಿಂದೆ ಬೇರಾರಾದರೂ ಇದ್ದಾರೆಯೇ ಎಂಬ ಕುರಿತು ಯುಎಇ ತನಿಖಾಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ

ಅಲ್‌-ಖೈದಾ ನಂಟು:

ಹಮಾಮ್‌, ತಾನು ಇಸ್ರೇಲ್‌ ಸಂಸ್ಥೆಗೆ ಸೇರಿದ್ದ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತಿದ್ದ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದ. ಅದರ ಕೊನೆಯಲ್ಲಿ, ಲಾಡೆನ್‌ ಸಾವಿನ ಬಳಿಕ ಅಲ್‌ಖೈದಾದ ಚುಕ್ಕಾಣಿ ಹಿಡಿದ ಅಲ್‌ ಜವಾಹಿರಿಯ ಫೋಟೋ ಹಾಗೂ 2009ರಲ್ಲಿ ಅಮೆರಿಕದಲ್ಲಿ ಆತ್ಮಾಹುತಿ ದಾಳಿ ಮೂಲಕ 7 ಸಿಐಎ ಅಧಿಕಾರಿಗಳು ಸೇರಿ 9 ಜನರ ಸಾವಿಗೆ ಕಾರಣವಾಗಿದ್ದ ಅಲ್‌-ಬಲಾವಿಯ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು. ಇನ್ನೊಂದು ಪೋಸ್ಟ್‌ನಲ್ಲಿ, ಮುಸಲ್ಮಾನರ ಪವಿತ್ರ ಸ್ಥಳಗಳಾದ ಮಕ್ಕಾ, ಮದೀನಾ ಮತ್ತು ಜೆರುಸಲೆಂನ ಎಐ ಸೃಷ್ಟಿತ ಫೋಟೋ ಹಾಗೂ ಅದರೊಂದಿಗೆ ಅವಮಾನವನ್ನು ತಿರಸ್ಕರಿಸುವ, ಸಾವಿಗೆ ಹೆದರದಿರುವ ಮತ್ತು ಘನತೆಯನ್ನು ರಕ್ಷಿಸಿಕೊಳ್ಳುವ ಕುರಿತ ಕವಿತೆಯನ್ನು ಹಂಚಿಕೊಂಡಿದ್ದು ಕಂಡುಬಂದಿದೆ. ಸದ್ಯ ಆ ಖಾತೆಗಳು ಡಿಲೀಟ್‌ ಆಗಿವೆ. ಇದು ಆತನಿಗೆ ಅಲ್‌ಖೈದಾ ಉಗ್ರ ನಂಟಿರುವುದು ಸುಳಿವು ನೀಡಿದೆ ಎಂದು ಸಿಎನ್‌ಎನ್‌ ಸುದ್ದಿವಾಹಿನಿ ವರದಿ ಮಾಡಿದೆ.

ಸಿರಿಯಾದಲ್ಲಿ ತೀವ್ರವಾದದತ್ತ:

ಹಮಾಮ್‌ ತಂದೆ ಒಮಾನ್‌ನವರ ಒಮಾನ್‌ನವನಾದರೂ ಸಿರಿಯಾದಲ್ಲಿ ಹಲವು ವರ್ಷಗಳನ್ನು ಕಳೆದಿದ್ದ ಹಾಗೂ ಅಲ್ಲೇ ಆತ ತೀವ್ರವಾದದತ್ತ ವಾಲಿದ್ದ ಎನ್ನಲಾಗಿದೆ. ಅಲ್ಲಿದ್ದಾಗಲೇ ಆತ ಅಲ್‌-ಖೈದಾದ ಪ್ರಮುಖರನ್ನು ಭೇಟಿಯಾಗಿದ್ದ ಎಂಬ ಅನುಮಾನವಿದೆ. ಇದಕ್ಕೆ ಪುರಾವೆಯೆಂಬಂತೆ, ಆತ ದಿನವಿಡೀ ನಮಾಜ್‌ ಮಾಡುತ್ತಿದ್ದ ಹಾಗೂ ಮಹಿಳೆಯರೊಂದಿಗೆ ಕೈಕುಲುಕುತ್ತಿರಲಿಲ್ಲ ಎಂದು ಸಹೋದ್ಯೋಗಿಗಳು ಹೇಳಿದ್ದರು.

ಸ್ತ್ರೀದ್ವೇಷಿಯೂ ಆಗಿದ್ದ:

2022ರಲ್ಲಿ ಹಮಾಮ್‌ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ‘ನನ್ನನ್ನು ಮದುವೆಯಾಗುವವಳು ಸದಾ ನಿಕಾಬ್‌ ತೊಟ್ಟಿರಬೇಕು ಮತ್ತು ದುಡಿಯಲು ಹೊರಹೋಗಬಾರದು ಎಂಬ ಷರತ್ತುಗಳಿಂದಾಗಿ, ನನಗಾಗಿ ಹೆಣ್ಣು ಹುಡುಕಲು ನನ್ನಮ್ಮ ತುಂಬಾ ಹೆಣಗಾಡಿದ್ದಳು. ಕೊನೆಗೆ ನಾನು ಪೈಲಟ್‌ ಎಂದು ತಿಳಿದಾಗ ಕೆಲವರು ಹೆಣ್ಣು ಕೊಡಲು ಒಪ್ಪಿದ್ದರು’ ಎಂದು ಬರೆದಿದ್ದ. ಇನ್ನೊಂದರಲ್ಲಿ, ‘ಗಂಡಸರು ಮತ್ತು ಹೆಂಗಸರು ಒಟ್ಟಿಗೆ ಕೆಲಸ ಮಾಡುವ ಸ್ಥಳಗಳಲ್ಲಿ ಎಷ್ಟೋ ಗೌರವಾನ್ವಿತ, ಧಾರ್ಮಿಕ ಮನೋಭಾವದ ಯುವತಿಯರು ಹಾಳಾಗಿದ್ದಾರೆ ಮತ್ತು ಕುತಂತ್ರಕ್ಕೆ ಬಲಿಯಾಗಿದ್ದಾರೆ’ ಎಂದು ವಾದಿಸಿದ್ದ.

==

- ಒಮಾನಿ ಪೈಲಟ್‌ ಹಮಾಮ್‌ ನಡೆಸಿದ್ದು ಭಯೋತ್ಪಾದಕ ದಾಳಿ: ಯುಎಇ- ಕೈಗೊಡಲಿ ಬಳಸಿ ಭಾರತೀಯ ಪೈಲಟ್‌ ಮೇಲೆ ಮೇಲೆ ಭೀಕರ ದಾಳಿ- ತೀವ್ರವಾದಿ ಜತೆ ಸ್ತ್ರೀದ್ವೇಷಿ, ಇದಕ್ಕೆ ಒಮಾನ್‌ ಏರ್‌ಲೈನ್ಸ್‌ನಿಂದ ಔಟ್‌- ಫ್ಲೈಟ್‌ ಪತನಕ್ಕೆ ಯತ್ನಿಸಿದ್ದೆ ಎಂದು ಪೈಲಟ್‌ ತಪ್ಪೊಪ್ಪಿಗೆ: ಮಾಧ್ಯಮ ವರದಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದಿಲ್ಲೀಲು ಮೊಳಗಿದ ಸಿಇಸಿ ವಿರುದ್ಧ ಘರ್ಜನೆ
ಈಗ ಫ್ರಾನ್ಸಲ್ಲೂ ಜೆನ್‌ಝೀ ದಂಗೆ!