ಲಖನೌ : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ದ್ವಿಪೌರತ್ವ ಹೊಂದಿದ್ದಾರೆ ಎಂಬ ಆರೋಪಕ್ಕೆ ತನಿಖೆಯ ಅಗತ್ಯವಿದೆ ಎಂದಿರುವ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ, ಈ ಬಗ್ಗೆ ಎಫ್‌ಐಆರ್ ದಾಖಲಿಸಬೇಕು. ಉತ್ತರ ಪ್ರದೇಶ ಸರ್ಕಾರವು ತಾನೇ ತನಿಖೆ ನಡೆಸಬೇಕು ಅಥವಾ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ರವಾನಿಸಬೇಕು ಎಂದು ಶುಕ್ರವಾರ ಆದೇಶಿಸಿದೆ.
ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ವಿಶೇಷ ಸಂಸದ/ಶಾಸಕ ವಿಶೇಷ ನ್ಯಾಯಾಲಯದ 2026ರ ಜ.28ರ ಆದೇಶ ಪ್ರಶ್ನಿಸಿ ಕರ್ನಾಟಕದ ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ। ಸುಭಾಷ್ ವಿದ್ಯಾರ್ಥಿ ಅವರ ಪೀಠವು ಈ ಆದೇಶ ನೀಡಿದೆ.ಆರಂಭದಲ್ಲಿ ರಾಯ್ ಬರೇಲಿಯ ವಿಶೇಷ ಸಂಸದ/ಶಾಸಕ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಆದರೆ, ಅರ್ಜಿದಾರರ ಕೋರಿಕೆಯ ಮೇರೆಗೆ, ಹೈಕೋರ್ಟು 2025ರ ಡಿ.17 ರಂದು ಪ್ರಕರಣವನ್ನು ಲಖನೌಗೆ ವರ್ಗಾಯಿಸಿತ್ತು. ನಂತರ ಲಖನೌ ಸಂಸದ/ಶಾಸಕ ನ್ಯಾಯಾಲಯವು 2026ರ ಜ.28ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತೀರ್ಪು ನೀಡಲು ವಿಶೇಷ ನ್ಯಾಯಾಲಯವು ಸಮರ್ಥವಾಗಿಲ್ಲ ಎಂದು ಈ ಹಿಂದೆ ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅದು ಈಗ ಎಫ್‌ಐಆರ್ ದಾಖಲಿಸಲು ಆದೇಶಿಸಿದೆ.
ಏನಿದು ಪ್ರಕರಣ?:‘ರಾಹುಲ್ ಭಾರತ ಮತ್ತು ಬ್ರಿಟನ್, ಎರಡೂ ದೇಶಗಳ ಪೌರತ್ವ ಹೊಂದಿದ್ದಾರೆ. ನನ್ನ ಬಳಿ ದಾಖಲೆ ಮತ್ತು ಬ್ರಿಟಿಷ್ ಸರ್ಕಾರದ ಇಮೇಲ್‌ಗಳಿದ್ದು, ಅವು ರಾಹುಲ್ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂದು ಸಾಬೀತುಪಡಿಸುತ್ತವೆ. ಇದರಿಂದಾಗಿ ಅವರು ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಥವಾ ಲೋಕಸಭಾ ಸದಸ್ಯರಾಗುವ ಅರ್ಹತೆ ಕಳೆದುಕೊಂಡಿದ್ದಾರೆ’ ಎಂದು ಶಿಶಿರ್ ಆರೋಪಿಸಿದ್ದರು.
ಹೀಗಾಗಿ ರಾಹುಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಅಧಿಕೃತ ರಹಸ್ಯ ಕಾಯ್ದೆ, ವಿದೇಶಿಗರ ಕಾಯ್ದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಿ, ಎಫ್‌ಐಆರ್ ದಾಖಲಿಸಿ ವಿವರವಾದ ತನಿಖೆ ನಡೆಸುವಂತೆ ಕೋರಿದ್ದರು.