ಪ್ರಿಯಾಂಕಾ ವಿರುದ್ಧ ಸೋದರ ವರುಣ್ ಕಣಕ್ಕೆ?

KannadaprabhaNewsNetwork |  
Published : Apr 21, 2024, 02:17 AM ISTUpdated : Apr 21, 2024, 09:19 AM IST
Varun Gandhi

ಸಾರಾಂಶ

ರಾಯ್‌ಬರೇಲಿಯಲ್ಲಿ ವರುಣ್‌ಗಾಂಧಿಯನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಲಖನೌ: ಪೀಲೀಭೀತ್‌ ಟಿಕೆಟ್‌ ವಂಚಿತರಾದ ಬಿಜೆಪಿ ಯುವನಾಯಕ ವರುಣ್‌ ಗಾಂಧಿ ಅವರನ್ನು ಉತ್ತರಪ್ರದೇಶದ ರಾಯ್‌ಬರೇಲಿಯಿಂದ ಕಣಕ್ಕೆ ಇಳಿಸುವ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿಯಿಂದ ಈ ಬಾರಿ ಪ್ರಿಯಾಂಕಾ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಅಲ್ಲಿ ಪ್ರಿಯಾಂಕಾ ವಿರುದ್ಧ ಕಠಿಣ ಪ್ರತಿಸ್ಪರ್ಧಿ ಹಾಕಿದರೆ ಪ್ರಿಯಾಂಕನ್ನು ಹೆಚ್ಚಿನ ಕಡೆಗೆ ಪ್ರಚಾರಕ್ಕೆ ತೆರಳದಂತೆ ಕಟ್ಟಿಹಾಕಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಜೊತೆಗೆ ಕಳೆದ ವರ್ಷ ಅಮೇಠಿಯಲ್ಲಿ ರಾಹುಲ್‌ರನ್ನು ಸೋಲಿಸಿದಂತೆ ಈ ವರ್ಷ ಪ್ರಿಯಾಂಕಾರನ್ನು ಸೋಲಿಸಿದರೆ ಅದು ಕಾಂಗ್ರೆಸ್‌ ಮತ್ತು ಗಾಂಧೀ ಕುಟುಂಬ ಎರಡಕ್ಕೂ ದೊಡ್ಡ ಪೆಟ್ಟು ನೀಡಿದಂತೆ ಆಗಲಿದೆ. ಇದೇ ಕಾರಣಕ್ಕಾಗಿ ವರುಣ್‌ ಹೆಸರನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ಮತ್ತು ಯುಪಿ ಸಿಎಂ ಯೋಗಿ ಸರ್ಕಾರವನ್ನು ಪದೇ ಪದೇ ಟೀಕಿಸಿದ ಕಾರಣಕ್ಕಾಗಿ ವರುಣ್‌ಗೆ ಪೀಲಿಭೀತ್ ಟಿಕೆಟ್‌ ತಪ್ಪಿತ್ತು ಎನ್ನಲಾಗಿತ್ತು. ಆದರೆ ಅವರ ತಾಯಿ ಮನೇಕಾ ಗಾಂಧಿಗೆ ಪಕ್ಷ ಟಿಕೆಟ್‌ ನೀಡಿತ್ತು. ಪುತ್ರನಿಗೆ ಟಿಕೆಟ್‌ ತಪ್ಪಿದ ಬಗ್ಗೆ ಆತನನ್ನೇ ಕೇಳಿ ಎಂದಷ್ಟೇ ಮನೇಕಾ ಹೇಳಿದ್ದರು. ಇನ್ನೊಂದೆಡೆ ತಮಗೆ ಟಿಕೆಟ್‌ ಕೈತಪ್ಪಿದ ಬಗ್ಗೆ ಎಲ್ಲೂ ವರುಣ್‌ ಪಕ್ಷದ ಬಗ್ಗೆ ಅಥವಾ ಪಕ್ಷದ ನಾಯಕರ ಬಗ್ಗೆ ಹೇಳಿಕೆ ನೀಡಿಲ್ಲ.

ಹೀಗಾಗಿ ಅವರನ್ನು ಪ್ರಿಯಾಂಕಾ ವಿರುದ್ಧ ಕಣಕ್ಕಿಳಿಸಲು ಪಕ್ಷ ಉದ್ದೇಶ ಹೊಂದಿರಬಹುದು ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಟಿಕಟ್‌ ತಪ್ಪಿದ ಬಳಿಕ ವರುಣ್‌ ಕಾಂಗ್ರೆಸ್‌ ಅಥವಾ ಸಮಾಜವಾದಿ ಪಕ್ಷ ಸೇರುತ್ತಾರೆ ಎಂದು ಊಹಾಪೋಹ ಹಬ್ಬಿತ್ತಾದರೂ ಅಂಥ ಯಾವುದೇ ಬೆಳವಣಿ ನಡೆದಿಲ್ಲ. ಹೀಗಾಗಿ ರಾಯ್‌ಬರೇಲಿ ಕ್ಷೇತ್ರ ಇದೀಗ ಸಾಕಷ್ಟು ಕುತೂಕಲ ಕೆರಳಿಸಿದೆ. ಒಂದು ವೇಳೆ ಬಿಜೆಪಿ ವರುಣ್‌ಗೆ ಟಿಕೆಟ್‌ ನೀಡಿದರೆ ಅದು ಅಣ್ನ-ತಂಗಿ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌