ಬ್ಯಾಂಕಾಕ್: ಕಳೆದ ವರ್ಷ ಥಾಯ್ಲೆಂಡ್ - ಕಾಂಬೋಡಿಯಾ ಗಡಿ ವಿವಾದದಲ್ಲಿದ್ದ ವಿಷ್ಣುವಿನ ಪ್ರತಿಮೆಯನ್ನು ತೆರವು ಮಾಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಥಾಯ್ಲೆಂಡ್ ಸರ್ಕಾರ ವಿಷ್ಣುವಿನ ಪ್ರತಿಮೆಯಿದ್ದ ಸ್ಥಳದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದೆ.
ಡಿ.22ರಂದು ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ವೇಳೆ, ವಿಷ್ಣುವಿನ ಪ್ರತಿಮೆಯನ್ನು ಕಾಂಬೋಡಿಯಾ ಅಕ್ರಮವಾಗಿ ಸ್ಥಾಪಿಸಿದೆ ಎಂದು ಆರೋಪಿಸಿ, ಥಾಯ್ಲೆಂಡ್ ಧ್ವಂಸಗೊಳಿಸಿತ್ತು. ಆ ಬಳಿಕ ಭಾರತ ಸೇರಿದಂತೆ ಜಾಗತಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಅದೇ ಸ್ಥಳದಲ್ಲಿ ಥಾಯ್ಲೆಂಡ್ ಬುದ್ಧ ಪ್ರತಿಮೆ ಸ್ಥಾಪಿಸಿದೆ. ಇದು ನೈತಿಕತೆಯನ್ನು ಹೆಚ್ಚಿಸುವ ಧಾರ್ಮಿಕ ಚಟುವಟಿಕೆ ಎಂದು ಥಾಯ್ಲೆಂಡ್ ಹೇಳಿದೆ.
ಕೇದಾರನಾಥ: ಹರಿದ್ವಾರ ಬೆನ್ನಲ್ಲೇ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಕೇದಾರನಾಥ ಮತ್ತು ಬದರೀನಾಥ ದೇಗುಲಗಳಿಗೂ ಹಿಂದೂಯೇತರರ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ವಾರಾಂತ್ಯದಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಧಾರವನ್ನು ಅನುಮೋದಿಸಲಾಗುತ್ತದೆ ಎಂದು ಬದರಿ-ಕೇದಾರ ದೇಗುಲ ಸಮಿತಿ ಸೋಮವಾರ ಹೇಳಿದೆ.ಇದರ ಜೊತೆಗೆ ಸಮಿತಿ ಅಧೀನದಲ್ಲಿ ಬರುವ ಗಂಗೋತ್ರಿ ಯಮುನೋತ್ರಿಗಳಿಗೂ ಇದನ್ನು ಅನ್ವಯಿಸಲಾಗುತ್ತದೆ.
‘ಇದು ಶಂಕರಾಚಾರ್ಯರು ಸ್ಥಾಪಿಸಿದ ಕ್ಷೇತ್ರ. ನಿಯಮಾನುಸಾರ ಆಯಾ ಧರ್ಮಗಳ ರಕ್ಷಣೆ ಅಧಿಕಾರ ಆಯಾ ಧಾರ್ಮಿಕ ಕ್ಷೇತ್ರಗಳಿಗಿದೆ. ಕ್ಷೇತ್ರಗಳಲ್ಲಿ ಧಾರ್ಮಿಕ ಶಿಸ್ತು, ಅಧ್ಯಾತ್ಮಿಕ ಪಾವಿತ್ರ್ಯತೆ ಮತ್ತು ಕ್ರಮಬದ್ಧ ತೀರ್ಥಯಾತ್ರೆ ಅನುಭವವನ್ನು ಒದಗಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದರು.ಇದೇ ವೇಳೆ, ಚಳಿಗಾಲದ ಕಾರಣ ಮುಚ್ಚಿರುವ ಬದರೀನಾಥ ದೇಗುಲ ಬಾಗಿಲುಗಳು ಏ.19ರಂದು ಮತ್ತೆ ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೈದರಾಬಾದ್: ಚುನಾವಣಾ ಭರವಸೆ ಈಡೇರಿಕೆಗಾಗಿ ತೆಲಂಗಾಣದಲ್ಲಿ ಬೀದಿನಾಯಿಗಳ ಹತ್ಯೆ ಮುಂದುವರಿದಿದ್ದು, ಇಲ್ಲಿನ ಹನಮಕೊಂಡ ಜಿಲ್ಲೆಯಲ್ಲಿ ಮತ್ತೆ 200 ಶ್ವಾನಗಳನ್ನು ಕೊಲ್ಲಲಾಗಿದೆ. ಈ ಮೂಲಕ ಕಳೆದ 2 ತಿಂಗಳಲ್ಲಿ ರಾಜ್ಯದಲ್ಲಿ ಹತ್ಯೆಗೀಡಾದ ಬೀದಿನಾಯಿಗಳ ಸಂಖ್ಯೆ 1,100ಕ್ಕೆ ಏರಿಕೆಯಾಗಿದೆ.ಕಳೆದ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಅಧಿಕಾರಕ್ಕೆ ಬಂದರೆ ಬೀದಿನಾಯಿಗಳ ಹಾವಳಿ ತಡೆಯುವುದಾಗಿ ಭರವಸೆ ನೀಡಲಾಗಿತ್ತು. ಇದನ್ನು ಈಡೇರಿಸಲು ಸರಪಂಚ, ಜನಪ್ರತಿನಿಧಿಗಳು ಸೇರಿ ಈ ಕೃತ್ಯ ನಡೆಸಿರುವ ಶಂಕೆಯಿದೆ.
ಅಸ್ಸಾಂ ಸಂಸ್ಕೃತಿಗೆ ರಾಗಾ ಅವಮಾನ: ಬಿಜೆಪಿ
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಚಹಾಕೂಟದಲ್ಲಿ ಅತಿಥಿಗಳಿಗೆ ಅಸ್ಸಾಮಿ ಅಂಗವಸ್ತ್ರ ಪಟಕಾ ಧಾರಣೆಯ ಉಡುಪು ಸಂಹಿತೆ ನಿಗದಿಪಡಿಸಲಾಗಿತ್ತು. ಆದರೆ ರಾಹುಲ್ ಗಾಂಧಿ ಅದನ್ನು ಧರಿಸದೇ ಅಸ್ಸಾಮಿ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಇಂದು ಬ್ಯಾಂಕ್ ಮುಷ್ಕರ: ಸೇವೆ ಅಸ್ತವ್ಯಸ್ತ ಸಂಭವ
ನವದೆಹಲಿ: ದೇಶಾದ್ಯಂತ ಸಾರ್ವಜನಿಕ ಬ್ಯಾಂಕುಗಳ ಕಾರ್ಯಾವಧಿಯನ್ನು ವಾರಕ್ಕೆ 5 ದಿನಗಳಿಗೆ ಇಳಿಸುವಂತೆ ಆಗ್ರಹಿಸಿ ಬ್ಯಾಂಕುಗಳ ಮಹಾ ಒಕ್ಕೂಟವು ಜ.27ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ಕೊಟ್ಟಿದೆ. ಇದರ ಪರಿಣಾಮ ಸರ್ಕಾರಿ ಬ್ಯಾಂಕುಗಳ ಕಾರ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಹಣಕಾಸು ಸೇವೆ ಬಾಧಿತ ಆಗುವ ಸಾಧ್ಯತೆ ಇದೆ.
ದೇಶದಲ್ಲಿರುವ 9 ಬ್ಯಾಂಕ್ ನೌಕರರ ಒಕ್ಕೂಟದ ಮಹಾಒಕ್ಕೂಟ (ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್) ಈ ಪ್ರತಿಭಟನೆಗೆ ಕರೆ ಕೊಟ್ಟಿದೆ. ಪರಿಣಾಮ 12 ಸರ್ಕಾರಿ ಬ್ಯಾಂಕುಗಳ ಕೆಲಸದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಮಿಕ್ಕಂತೆ ಆ್ಯಕ್ಸಿಸ್, ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿನಂತಹ ಖಾಸಗಿ ಬ್ಯಾಂಕುಗಳ ಕೆಲಸದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ₹3.60 ಲಕ್ಷ: ನಿನ್ನೆ ₹25000 ಏರಿಕೆ
ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಹಾದಿಯಲ್ಲಿ ಮುಂದುವರೆದಿದ್ದು, ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ. ಕೇಜಿಗೆ 25,000 ರು. ಹೆಚ್ಚಳವಾಗಿ 3.60 ಲಕ್ಷ ರು.ಗೆ ಏರಿದೆ. ಚಿನ್ನದ ಬೆಲೆಯೂ ಇದೇ ಹಾದಿಯಲ್ಲಿದ್ದು, 22 ಕ್ಯಾರಟ್ ಚಿನ್ನ 10 ಗ್ರಾಂಗೆ 1550 ರು. ಜಿಗಿದು 1,48,450 ರು.ಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆಯು 1690 ರು. ಹೆಚ್ಚಳವಾಗಿ 1,61,950 ರು.ಗೆ ಏರಿಕೆಯಾಗಿದೆ. ಜಾಗತಿಕ ಬಿಕ್ಕಟ್ಟು, ಕೈಗಾರಿಕಾ ಬೇಡಿಕೆ, ಪೂರೈಕೆ ಕೊರತೆಯು ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಕಾರಣವಾಗಿದೆ.