ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 4 - 1 ದಿನವೂ ಕಳಪೆ ಗಾಳಿ ಇಲ್ಲ : ವರದಿ

KannadaprabhaNewsNetwork |  
Published : Nov 05, 2025, 02:00 AM ISTUpdated : Nov 05, 2025, 05:20 AM IST
Mysuru

ಸಾರಾಂಶ

ಅಕ್ಟೋಬರ್‌ ತಿಂಗಳ ದೇಶದ ಸ್ವಚ್ಛ (ವಾಯುಮಾಲಿನ್ಯ ರಹಿತ) ಹಾಗೂ ಅತಿ ಕಲುಷಿತ (ವಾಯು ಮಾಲಿನ್ಯಪೀಡಿತ) ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಕರ್ನಾಟಕದ 4 ನಗರಗಳು ಟಾಪ್‌ 10 ಸ್ವಚ್ಛ ನಗರಗಳಲ್ಲಿ ಸ್ಥಾನ ಪಡೆದಿವೆ. ಮೈಸೂರು, ಕೊಪ್ಪಳ, ಚಿಕ್ಕಮಗಳೂರು ಹಾಗೂ ಯಾದಗಿರಿ- ಇವೇ ಆ 4 ರಾಜ್ಯದ ಮಾಲಿನ್ಯರಹಿತ ನಗರಗಳು.

 ನವದೆಹಲಿ :  ಅಕ್ಟೋಬರ್‌ ತಿಂಗಳ ದೇಶದ ಸ್ವಚ್ಛ (ವಾಯುಮಾಲಿನ್ಯ ರಹಿತ) ಹಾಗೂ ಅತಿ ಕಲುಷಿತ (ವಾಯು ಮಾಲಿನ್ಯಪೀಡಿತ) ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಕರ್ನಾಟಕದ 4 ನಗರಗಳು ಟಾಪ್‌ 10 ಸ್ವಚ್ಛ ನಗರಗಳಲ್ಲಿ ಸ್ಥಾನ ಪಡೆದಿವೆ. ಮೈಸೂರು, ಕೊಪ್ಪಳ, ಚಿಕ್ಕಮಗಳೂರು ಹಾಗೂ ಯಾದಗಿರಿ- ಇವೇ ಆ 4 ರಾಜ್ಯದ ಮಾಲಿನ್ಯರಹಿತ ನಗರಗಳು.

ಮೇಘಾಲಯದ ಶಿಲ್ಲಾಂಗ್‌ ಅಕ್ಟೋಬರ್‌ ತಿಂಗಳ ಅತಿ ಸ್ವಚ್ಛ (ಮಾಲಿನ್ಯರಹಿತ) ನಗರವಾದರೆ, ಹರ್ಯಾಣದ ಧರುಹೇರಾ ಅತ್ಯಂತ ವಾಯುಮಾಲಿನ್ಯಪೀಡಿತ ನಗರವಾಗಿ ಗುರುತಿಸಿಕೊಂಡಿದೆ.

ನಿರಂತರ ವಾಯುಗುಣಮಟ್ಟ ಮೇಲ್ವಿಚಾರಣಾ ಕೇಂದ್ರ (ಸಿಎಎಕ್ಯುಎಂಎಸ್‌) ಅಂಕಿ-ಅಂಶ ಆಧರಿಸಿ ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರ (ಸಿಆರ್‌ಇಎ) ಮಂಗಳವಾರ ದೇಶದ 249 ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಶಿಲ್ಲಾಂಗ್‌ನಲ್ಲಿ ಪಿಎಂ2.5 (2.5 ಮೈಕ್ರೋಮೀಟರ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಸೂಕ್ಷ್ಮ ಕಣಗಳು) 10ರ ಒಳಗೆ ವರದಿಯಾಗಿದ್ದು, ಅಗ್ರಸ್ಥಾನ ಪಡೆದಿದೆ.

ಉಳಿದಂತೆ ಕರ್ನಾಟಕದ 4, ತಮಿಳುನಾಡಿನ 3, ಮೇಘಾಲಯ, ಸಿಕ್ಕಿಂ, ಛತ್ತೀಸ್‌ಗಢದ 1 ನಗರಗಳು ಟಾಪ್‌ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿವೆ.

 ರಾಜ್ಯದ 4 ನಗರಗಳು:

ಕಳೆದ ತಿಂಗಳ ದೇಶದ ಟಾಪ್‌ 10 ಮಾಲಿನ್ಯ ರಹಿತ ನಗರಗಳ ಪೈಕಿ ಮೈಸೂರು, ಕೊಪ್ಪಳ, ಚಿಕ್ಕಮಗಳೂರು, ಯಾದಗಿರಿ ಗುರುತಿಸಿಕೊಂಡಿವೆ.

ತಿಂಗಳ ಎಲ್ಲಾ (31) ದಿನ ಮೈಸೂರಿನ ವಾಯುಗುಣಮಟ್ಟ ಅತ್ಯುತ್ತಮ ಆಗಿತ್ತು. ಕೊಪ್ಪಳದಲ್ಲಿ 27 ದಿನಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದ್ದು, ಪೈಕಿ 26 ದಿನ ಸ್ವಚ್ಛ ಗಾಳಿ, ಒಂದು ದಿನ ತೃಪ್ತಿಕರ ವಾಯುಗುಣಮಟ್ಟ ವರದಿಯಾಗಿತ್ತು. ಚಿಕ್ಕಮಗಳೂರಿನಲ್ಲಿ 30ರ ಪೈಕಿ 28 ದಿನ ಉತ್ತಮ ಹಾಗೂ 2 ದಿನ ತೃಪ್ತಿಕರ ವಾಯುಗುಣಮಟ್ಟ ಇತ್ತು. ಯಾದಗಿರಿಯಲ್ಲಿ 31ರ ಪೈಕಿ 25 ದಿನ ಗಾಳಿಯ ಗುಣಮಟ್ಟ ಒಳ್ಳೆಯದಿತ್ತು ಹಾಗೂ 6 ದಿನ ತೃಪ್ತಿಕರವಾಗಿತ್ತು ಎಂದು ವರದಿ ಹೇಳಿದೆ. ಈ ನಗರಗಳಲ್ಲಿ ಒಂದು ದಿನವೂ ಕಳಪೆ ಹವಾಮಾನ ವರದಿಯಾಗಿಲ್ಲ. 

ಅತಿಕಳಪೆ ಗಾಳಿ:

ಅಕ್ಟೋಬರ್‌ ತಿಂಗಳಲ್ಲಿ ಹರ್ಯಾಣದ ಧರುಹೇರಾ ನಗರದ ವಾಯು ಗುಣಮಟ್ಟ ಅತಿ ಕಳಪೆಯಾಗಿದ್ದು,  ಪಿಎಂ2.5 - 123ರಷ್ಟಿತ್ತು. ಬಳಿಕದ ಸ್ಥಾನಗಳಲ್ಲಿ ರೋಹ್ಟಕ್, ಗಾಜಿಯಾಬಾದ್, ನೋಯ್ಡಾ, ಬಲ್ಲಬ್ಗಢ್ ಬರುತ್ತವೆ. ದೆಹಲಿ ಈ ಪಟ್ಟಿಯಲ್ಲಿ 107 ಪಿಎಂ2.5 ರೊಂದಿಗೆ 6ನೇ ಸ್ಥಾನದಲ್ಲಿದೆ.

ಟಾಪ್‌- 10 ಸ್ವಚ್ಛ ನಗರಗಳ ಪಟ್ಟಿ

1. ಶಿಲ್ಲಾಂಗ್‌ (ಮೇಘಾಲಯ)

2. ಗ್ಯಾಂಗ್ಟಕ್‌ (ಸಿಕ್ಕಿಂ)

3. ಮೈಸೂರು (ಕರ್ನಾಟಕ)

4. ಕುಂಜೆಮುರಾ (ಛತ್ತೀಸ್‌ಗಢ)

5. ನಾಗಪಟ್ಟಿಣಂ (ತ.ನಾಡು)

6. ಕೊಪ್ಪಳ (ಕರ್ನಾಟಕ)

7. ಚಿಕ್ಕಮಗಳೂರು (ಕರ್ನಾಟಕ)

8. ಯಾದಗಿರಿ (ಕರ್ನಾಟಕ)

9. ತಿರುನೆಲ್ವೇಲಿ (ತ.ನಾಡು)

10. ಪೆರುಂದುರೈ (ತ.ನಾಡು)

PREV
Read more Articles on

Recommended Stories

ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ