ಮತದಾರ ನೋಂದಣಿ, ರದ್ದತಿಗೆ ಇನ್ನು ಇ-ದೃಢೀಕರಣ ಕಡ್ಡಾಯ

KannadaprabhaNewsNetwork |  
Published : Sep 25, 2025, 01:00 AM ISTUpdated : Sep 25, 2025, 04:48 AM IST
ಬಿಹಾರ | Kannada Prabha

ಸಾರಾಂಶ

  ಚುನಾವಣಾ ಆಯೋಗ ಮುಂದಾಗಿದೆ ಹಾಗೂ ಹೆಸರು ಸೇರಿಸಲು ಹಾಗೂ ತೆಗೆಸಲು ಇ-ಪರಿಶೀಲನೆ (ಇ-ದೃಢೀಕರಣ) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ಆಧಾರ್‌ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ಮತದಾರರು ನೀಡುವುದು ಕಡ್ಡಾಯ 

 ನವದೆಹಲಿ :  ಕರ್ನಾಟಕದ ಆಳಂದದಲ್ಲಿ ಕೆಲ ಮತದಾರರ ಹೆಸರುಗಳನ್ನು ಅಕ್ರಮವಾಗಿ ಮತಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಸಮಸ್ಯೆಯ ಪರಿಹಾರಕ್ಕೆ ಚುನಾವಣಾ ಆಯೋಗ ಮುಂದಾಗಿದೆ ಹಾಗೂ ಹೆಸರು ಸೇರಿಸಲು ಹಾಗೂ ತೆಗೆಸಲು ಇ-ಪರಿಶೀಲನೆ (ಇ-ದೃಢೀಕರಣ) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 

ಇದಕ್ಕಾಗಿ ಆಧಾರ್‌ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ಮತದಾರರು ನೀಡುವುದು ಕಡ್ಡಾಯವಾಗಲಿದೆ. ಆನ್‌ಲೈನ್‌ನಲ್ಲಿ ಫಾರ್ಂ 7 ಬಳಸಿ ಹೆಸರು ತೆಗೆಸಲಾಗುತ್ತದೆ. ಇದರಲ್ಲಿ ವ್ಯಕ್ತಿಯೊಬ್ಬನ ಹೆಸರು ಅಥನಾ ದೂರವಾಣಿ ಸಂಖ್ಯೆಯನ್ನು ಇನ್ಯಾರೋ ನಮೂದಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇತ್ತು. ಇದಕ್ಕೆ ತಡೆ ಒಡ್ಡಲು ಈಗ ನಿರ್ಧರಿಸಲಾಗಿದೆ. ಇದರ ಬದಲು ನೋಂದಾಯಿತ ಸಂಖ್ಯೆಗೆ ಇನ್ನು ಮುಂದೆ ಒಟಿಪಿ ಕಳಿಸಲಾಗುವುದು. ಅದನ್ನು ಹಾಕಿದ ಬಳಿಕವಷ್ಟೇ ಪ್ರಕ್ರಿಯೆಯನ್ನು ಮುಂದುವರೆಸಲು ಸಾಧ್ಯವಾಗಲಿದೆ. 

ಈ ವ್ಯವಸ್ಥೆಯನ್ನು ಕಳೆದ ವಾರವೇ ಜಾರಿ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.ಈ ಬಗ್ಗೆ ಮಾಹಿತಿ ನೀಡಿರುವ ಆಯೋಗವು, ‘ಇ-ಪರಿಶೀಲನಾ ವ್ಯವಸ್ಥೆ ಜಾರಿಗೂ ಆಳಂದದಲ್ಲಿ ನಡೆದಿದೆ ಎನ್ನಲಾದ ಮತಪಟ್ಟಿ ಅಕ್ರಮಕ್ಕೂ ಸಂಬಂಧವಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

ಆಳಂದದಲ್ಲಿ 6018 ಮತದಾರರ ಹೆಸರು ಅಳಿಸಲು 2023ರಲ್ಲಿ ಅರ್ಜಿಗಳು ಬಂದಿದ್ದವು. ಇನ್ಯಾರದ್ದೋ ಹೆಸರನ್ನು ಇನ್ಯಾರೋ ಅರ್ಜಿ ಸಲ್ಲಿಸಿದ್ದರು. ಇವುಗಳಲ್ಲಿ 24 ಮಾತ್ರ ಅಸಲಿ ಎಂದು ಗೊತ್ತಾಗಿತ್ತು. ಬಳಿಕ ಇದರ ಸಿಐಡಿ ತನಿಖೆಗೆ ಕರ್ನಾಟಕ ಸರ್ಕಾರ ಆದೇಶಿಸಿತ್ತು.

ಅಧಿಕಾರಕ್ಕೆ ಬಂದರೆ ಮೀಸಲು ಮೇಲಿನ ಶೇ.50ರ ಮಿತಿ ರದ್ದು: ರಾಗಾ

ಪಟನಾ: ‘ ಒಂದು ವೇಳೆ ದೇಶದಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಮೇಲಿನ ಶೇ.50ರಷ್ಟು ಮಿತಿಯನ್ನು ತೆಗೆಯುತ್ತೇವೆ’ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.ಬಿಹಾರದಲ್ಲಿ ‘ ಹಿಂದುಳಿದ ವರ್ಗದವರ ನ್ಯಾಯ ನಿರ್ಣಯ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಮೇಲೆ ಸದ್ಯ ಇರುವ ಶೇ.50ರ ಮಿತಿಯನ್ನು ತೆಗೆದು ಹಾಕುತ್ತೇವೆ. 25 ಕೋಟಿ ರು.ಗಿಂತ ಹೆಚ್ಚಿನ ಮೌಲ್ಯದ ಎಲ್ಲಾ ಸರ್ಕಾರಿ ಗುತ್ತಿಗೆಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಾವು ಶೇ.50ರಷ್ಟು ಮೀಸಲು ನೀಡುತ್ತೇವೆ. ಜತೆಗೆ ಖಾಸಗಿ ಸಂಸ್ಥೆಗಳಲ್ಲಿಯೂ ಆರ್ಥಿಕ ಹಿಂದುಳಿದವರಿಗೆ ಶೇ.50ರ ಮೀಸಲಾತಿ ಒದಗಿಸುತ್ತೇವೆ’ ಎಂದರು.

ಬಿಹಾರ ಚುನಾವಣೆಯಿಂದ ಮೋದಿ ಸರ್ಕಾರ ಪತನ ಆರಂಭ: ಖರ್ಗೆ 

ಪಟನಾ: ‘ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಿಂದಲೇ ಮೋದಿ ಸರ್ಕಾರದ ಪತನದ ದಿನಗಳು ಆರಂಭವಾಗಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ.

ಬಿಹಾರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ (ಸಿಡಬ್ಲುಸಿ) ಮಾತನಾಡಿದ ಖರ್ಗೆ ‘ಬಿಹಾರದ ಮಾದರಿಯಲ್ಲಿಯೇ ಈಗ ದೇಶಾದ್ಯಂರ ಲಕ್ಷಾಂತರ ಜನರ ಮತ ಹಕ್ಕು ಕಸಿಯಲು ಪಿತೂರಿ ನಡೆಸಲಾಗುತ್ತಿದೆ. ಈ ವರ್ಷ ನಡೆಯಲಿರುವ ಬಿಹಾರ ಚುನಾವಣೆ ಈ ರಾಜ್ಯದಲ್ಲಿ ಮಾತ್ರ ಮಹತ್ವದ ಮೈಲಿಗಲ್ಲು ಆಗುವುದಿಲ್ಲ. ದೇಶಕ್ಕೂ ಪ್ರಮುಖವಾಗಲಿದೆ. ಕೇಂದ್ರದ ಪತನಕ್ಕೆ ಕ್ಷಣಗಣನೆ ಮತ್ತು ಮೋದಿ ಸರ್ಕಾರದ ಭಷ್ಟ ಆಡಳಿತ ಅಂತ್ಯವನ್ನು ಸೂಚಿಸುತ್ತದೆ’ ಎಂದರು.

ಮೋದಿ ಸ್ನೇಹಿತನಿಂದ ಸಂಕಷ್ಟ : ಇದೇ ವೇಳೆ ಅಮೆರಿಕದ ಎಚ್‌1ಬಿ ವೀಸಾ ದರ ಹೆಚ್ಚಳದ ಬಗ್ಗೆಯೂ ಖರ್ಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮನ್ನು ಆತ್ಮ ಸ್ನೇಹಿತರು ಎಂದು ಪರಸ್ಪರ ಹೇಳಿಕೊಳ್ಳುತ್ತಾರೆ. ಈ ಸ್ನೇಹಿತರಿಂದಲೇ ಇಂದು ದೇಶ ಸಂಕಷ್ಟಕ್ಕೆ ಸಿಲುಕಿದೆ ಎಂದರು.

ಮತಪಟ್ಟಿ ಪರಿಷ್ಕರಣೆ, ಮತಗಳವು ವಿರುದ್ಧ ಸಿಡಬ್ಲುಸಿ ನಿರ್ಣಯ 

ಪಟನಾ :  ‘ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಒಂದು ಪಿತೂರಿಯಾಗಿದೆ ಹಾಗೂ ಪ್ರಜಾಸತ್ತೆಗೆ ದೊಡ್ಡ ಬೆದರಿಕೆ ಆಗಿದೆ. ಇದು ಅಧಿಕಾರಕ್ಕೆ ಅಂಟಿಕೊಳ್ಳಲು ಬಿಜೆಪಿಯ ಟೂಲ್‌ಕಿಟ್‌ನಿಂದ ಮತ್ತೊಂದು ಕೊಳಕು ತಂತ್ರ’ ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ (ಸಿಡಬ್ಲುಸಿ) ಬುಧವಾರ ಗೊತ್ತುವಳಿ ಪಾಸು ಮಾಡಿದೆ.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ 2 ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇದರಲ್ಲಿ ಒಂದು ಮತಪಟ್ಟಿ ಪರಿಷ್ಕರಣೆ, ಇನ್ನೊಂದು ಗೊತ್ತುವಳಿಯಲ್ಲಿ ಬಿಹಾರದ ಮತದಾರರಿಗೆ ಮಾಡಲಾದ ಮನವಿ. ಇದರಲ್ಲಿ, ‘ಜನರು ತಮ್ಮ ಮತದ ಶಕ್ತಿಯನ್ನು ಗುರುತಿಸಬೇಕು. ಆ ಪ್ರಕಾರ ಮತ ಹಾಕಬೇಕು’ ಎಂದು ಕರೆ ನೀಡಲಾಗಿದೆ.ಮತಗಳವು ವಿರುದ್ಧ ಸೆಣಸು:

ಆ ನಿರ್ಣಯದಲ್ಲಿ, ‘ಮತಚೋರಿ ಮತ್ತು ಮತದಾರರ ಪಟ್ಟಿಯಲ್ಲಿರುವ ಅಕ್ರಮಗಳು ಪ್ರಜಾಪ್ರಭುತ್ವದ ಅಡಿಪಾಯದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಅಲುಗಾಡಿಸಿವೆ. ಮತಗಳವಿನ ಲಜ್ಜೆಗೇಡಿ ಕೃತ್ಯವನ್ನು ಬಹಿರಂಗಪಡಿಸಿ ಪ್ರಜಾಪ್ರಭುತ್ವ ನಾಶದ ಪ್ರಯತ್ನಗಳ ವಿರುದ್ಧ ರಾಹುಲ್ ಗಾಂಧಿ ಧೈರ್ಯದಿಂದ ಹೋರಾಡಿದ್ದಾರೆ. ಬಹುಮತ ಸೃಷ್ಟಿಗಾಗಿ ಬಿಜೆಪಿ ಬಳಸಿದ ವ್ಯವಸ್ಥಿತ ಮತ್ತು ಉದ್ದೇಶಪೂರ್ವಕ ಪಿತೂರಿಯನ್ನು ಬಹಿರಂಗಪಡಿಸಿದ್ದಾರೆ. ಕದ್ದ ಜನಾದೇಶಗಳು ಮತ್ತು ನಕಲಿ ಮತದಾರರ ಪಟ್ಟಿಗಳ ಮೇಲೆ ನಿರ್ಮಿಸಲಾದ ಸರ್ಕಾರಕ್ಕೆ ಯಾವುದೇ ನೈತಿಕ ಅಥವಾ ರಾಜಕೀಯ ನ್ಯಾಯಸಮ್ಮತತೆ ಇಲ್ಲ’ ಎಂದು ಕಿಡಿಕಾರಲಾಗಿದೆ.ಜತೆಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ‘ಪ್ರಜಾಸತ್ತಾತ್ಮಕ ಹೊಣೆಗಾರಿಕೆ ಇರದ ಕಾರಣ, ಸರ್ಕಾರಕ್ಕೆ ನಿರುದ್ಯೋಗ, ರೈತರ ಆತ್ಮಹತ್ಯೆಗಳು, ಹಣದುಬ್ಬರ, ಕಳಪೆ ಆರೋಗ್ಯ ಸೇವೆ, ಹಾಳಾದ ಶಿಕ್ಷಣ ಮತ್ತು ಮೂಲಸೌಕರ್ಯಗಳ ಬಗ್ಗೆ ಕಾಳಜಿ ವಹಿಸುವ ಬಾಧ್ಯತೆ ಇಲ್ಲವಾಗಿದೆ. ಕಾರಣ, ಸಮಾಜದ ಬಗ್ಗೆ ಕಾಳಜಿ ವಹಿಸದೆಯೂ ವಂಚನೆಯ ಮೂಲಕ ಅಧಿಕಾರದಲ್ಲಿ ಇರಬಹುದು ಎಂದು ಅದಕ್ಕೆ ತಿಳಿದಿದೆ’ ಎಂದು ಕುಟುಕಿದೆ.

ಮತಪಟ್ಟಿ ತಿರುಚಲು ಪರಿಷ್ಕರಣೆ: ಬಿಹಾರದಲ್ಲಿ ನಡೆದ ಮತಪಟ್ಟಿಯ ತೀವ್ರ ಪರಿಷ್ಕರಣೆಯ ಬಗ್ಗೆಯೂ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ‘ಬಿಹಾರದಲ್ಲಿ ಮತಪಟ್ಟಿಯನ್ನು ತಿರುಚಲು ಮತ್ತು ಅಧಿಕಾರದಲ್ಲಿ ಉಳಿಯಲು ಬಿಜೆಪಿ ಬಳಸಿಕೊಂಡಿರುವ ಕೊಳಕು ತಂತ್ರವಿದು. ಬಡವರು, ಕಾರ್ಮಿಕರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವುದೇ ಅವರ ಗುರಿ. ಕಾರಣ ಆ ವರ್ಗದವರೆಲ್ಲಾ ಎನ್‌ಡಿಎ ಅನ್ನು ರಾಜ್ಯದಿಂದ ಹೊರದಬ್ಬಲು ಬಯಸುತ್ತಿದ್ದಾರೆ’ ಎಂದು ನಿರ್ಣಯ ಖಂಡಿಸಿದೆ.

ಇದೇ ವೇಳೆ, ಕಾಂಗ್ರೆಸ್‌ ಸಂತಿತ್ತಿನ ಹೊರಗೆ ಹಾಗೂ ಒಳಗೆ ನಮ್ಮ ಮೂಲಭೂತ ಸಾಂವಿಧಾನಿಕ ಹಕ್ಕುಗಳ ರಕ್ಷಣೆ, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ, ಪ್ರತಿಯೊಬ್ಬ ನಾಗರಿಕರಿಗೂ ಕಲ್ಯಾಣ ಸೌಲಭ್ಯಗಳ ನ್ಯಾಯಯುತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಹೋರಾಟ ಮುಂದುವರೆಸುವುದಾಗಿ ಹೇಳಿದೆ.ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಮುಂದಿನ 1 ತಿಂಗಳಲ್ಲಿ ರಾಹುಲ್‌ ಗಾಂಧಿ ಮತಚೋರಿಗೆ ಸಂಬಂಧಿಸಿದ ಹೈಡ್ರೋಜನ್‌ ಬಾಂಬ್‌, ಮಿನಿ ಹೈಡ್ರೋಜನ್‌ ಬಾಂಬ್‌, ಪ್ಲುಟೋನಿಯಂ ಬಾಂಬ್‌ ಸ್ಫೋಟಿಸಲಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಪತನ ಮತ್ತು ಮಹಾಘಟಬಂಧನದ ಪದಾರೋಹಣಕ್ಕೆ ಕ್ಷಣಗಣನೆ ಆರಂಭವಾಗಿದೆ’ ಎಂದರು.

PREV
Read more Articles on

Recommended Stories

ಪಹಲ್ಗಾಂ ಉಗ್ರರಿಗೆ ನೆರವು ನೀಡಿದ ಓರ್ವ ಬಂಧನ
ಹಾರುವ ಶವಪೆಟ್ಟಿಗೆ ಮಿಗ್‌ 21 ನಾಳೆ ನಿವೃತ್ತಿ