ವಿಜಯನ್‌ ಮೇಲೆ ಇಡಿ, ಇಡಿ ಮೇಲೆ ಸಿಪಿಎಂ ದಾಳಿ!

KannadaprabhaNewsNetwork |  
Published : May 28, 2026, 01:45 AM IST
Pinarayi

ಸಾರಾಂಶ

ಪುತ್ರಿಯ ಸಾಫ್ಟ್‌ವೇರ್‌ ಕಂಪನಿ ಮೇಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಅವರ ಅಳಿಯ ಮೊಹಮ್ಮದ್‌ ರಿಯಾಸ್‌ ಅವರ   10ಕ್ಕೂ ಹೆಚ್ಚು ಕಡೆ ಜಾರಿ ನಿರ್ದೇಶನಾಲಯ (ಇ.ಡಿ.)  ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದೆ.

 ತಿರುವನಂತಪುರಂ: ಪುತ್ರಿಯ ಸಾಫ್ಟ್‌ವೇರ್‌ ಕಂಪನಿ ಮೇಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಅವರ ಅಳಿಯ ಮೊಹಮ್ಮದ್‌ ರಿಯಾಸ್‌ ಅವರ ತಿರುವನಂತಪುರ, ಎರ್ನಾಕುಲಂ, ಕಣ್ಣೂರು, ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದೆ.

ಸುದ್ದಿ ತಿಳಿದು ತಿರುವನಂತಪುರದಲ್ಲಿರುವ ವಿಜಯನ್‌ ಅವರ ಮನೆ ಮುಂದೆ ಜಮಾಯಿಸಿದ್ದ ಸಿಪಿಎಂ ಕಾರ್ಯಕರ್ತರು ಭದ್ರತಾ ಸಿಬ್ಬಂದಿ ಹಾಗೂ ಇ.ಡಿ. ಅಧಿಕಾರಿಗಳಿದ್ದ ವಾಹನಗಳ ಮೇಲೆ ಕಲ್ಲು, ಇಟ್ಟಿಗೆ, ಮೊಟ್ಟೆ ತೂರಾಟ ನಡೆಸಿದ್ದಾರೆ. ಈ ವೇಳೆ ವಾಹನದ ಚಾಲಕ ಗಾಯಗೊಂಡಿದ್ದು, ವಾಹನಕ್ಕೆ ಹಾನಿಯಾಗಿದೆ. 

ವಿಜಯನ್ ಪುತ್ರಿ ವೀಣಾ ಒಡೆತನದ ಎಕ್ಸಾಲಾಜಿಕ್‌ ಸೊಲ್ಯೂಷನ್ಸ್‌ ಪ್ರೈವೇಟ್‌ ಲಿ. ಸಾಫ್ಟ್‌ವೇರ್‌ ಕಂಪನಿಗೆ ಕೊಚ್ಚಿನ್‌ ಮಿನರಲ್ಸ್‌ ಆ್ಯಂಡ್‌ ರೂಟೈಲ್‌ ಲಿ. (ಸಿಎಂಆರ್‌ಎಲ್‌)ಸಂಸ್ಥೆ ಅಕ್ರಮವಾಗಿ ಹಣ ವರ್ಗಾಯಿಸಿದ ಪ್ರಕರಣ ಸಂಬಂಧ ಈ ದಾಳಿ ನಡೆದಿದೆ. ಸಿಎಂಆರ್‌ಎಲ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ತನಿಖೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ. 

ರಾಜಕೀಯ ಸೇಡು: 

ಈ ದಾಳಿಯು ದೇಶಾದ್ಯಂತ ಪ್ರತಿಪಕ್ಷಗಳ ನಾಯಕರನ್ನು ಹೆಡೆಮುರಿಕಟ್ಟುವ ಬಿಜೆಪಿ ಸರ್ಕಾರ ಪ್ರಯತ್ನದ ಭಾಗವಾಗಿದೆ ಎಂದು ಪಿಣರಾಯಿ ವಿಜಯನ್‌ ಆರೋಪಿಸಿದ್ದಾರೆ. ಈ ರೀತಿಯ ದಾಳಿಗಳು ನನ್ನನ್ನಾಗಲಿ ಅಥವಾ ಸಿಪಿಎಂ ಅನ್ನಾಗಲಿ ದುರ್ಬಲಗೊಳಿಸಲು ಸಾಧ್ಯವಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸುತ್ತಾ ಬರಲಾಗಿದೆ. ಈಗ ನನ್ನ ಮೇಲೆ ನಡೆದಿರುವ ದಾಳಿಯೂ ಆ ತಂತ್ರಗಾರಿಕೆಯ ಭಾಗ ಎಂದು ದೂರಿದ್ದಾರೆ.

 ಏನಿದು ಪ್ರಕರಣ? 

ಕೊಚ್ಚಿನ್‌ ಮಿನರಲ್ಸ್‌ ಆ್ಯಂಡ್‌ ರೂಟೈಲ್‌ ಕಂಪನಿಯು ಪಿಣರಾಯಿ ವಿಜಯನ್‌ ಪುತ್ರಿ ಒಡೆತನದ ಎಕ್ಸಾ ಲಾಜಿಕ್‌ ಸೊಲ್ಯೂಷನ್ಸ್‌ ಐಟಿ ಸಂಸ್ಥೆಗೆ 2018-19ರಲ್ಲಿ 1.72 ಕೋಟಿ ರು. ಪಾವತಿಸಿತ್ತು. ಯಾವುದೇ ಸೇವೆ ಬಳಸಿಕೊಳ್ಳದೆಯೂ, ಲಾಜಿಕ್‌ ಸೊಲ್ಯೋಷನ್‌ ಖಾತೆಗೆ ಮತ್ತು ವೀಣಾ ಅವರಿಗೆ ನಗದು ರೂಪದಲ್ಲಿ ಹಣ ಪಾವತಿಸಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಇದು ಲಂಚದ ಹಣವನ್ನು ಬೇರೆ ರೂಪದಲ್ಲಿ ನೀಡಿದ್ದು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

3 ಬಾರಿ ನೀಟ್‌ ಸೋರಿಕೆ ಆದ್ರೂ ಚರ್ಚೆಗೇಕೆ ತಡ? : ಕೇಂದ್ರದ ವಿರುದ್ಧ ಅಣ್ಣಾಮಲೈ ಆಕ್ರೋಶ
ನೀಟ್‌ ಕುರಿತು ಸಮಗ್ರ ಚರ್ಚೆಗೆ ಸಿದ್ಧ : ಸರ್ಕಾರ