ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳ ಸಹಭಾಗಿತ್ವದೊಂದಿಗೆ ಬರಲಿವೆ ಭಾರತ್‌ ಅಣು ರಿಯಾಕ್ಟರ್‌ :

KannadaprabhaNewsNetwork |  
Published : Jul 24, 2024, 12:20 AM ISTUpdated : Jul 24, 2024, 07:10 AM IST
ನ್ಯೂಕ್ಲಿಯರ್ | Kannada Prabha

ಸಾರಾಂಶ

ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಈಡೇರಿಸುವುದರ ಜತೆಗೆ ಶುದ್ಧ ಇಂಧನ ಒದಗಿಸಲು ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳ ಸಹಭಾಗಿತ್ವದೊಂದಿಗೆ ದೇಶದಲ್ಲಿ ಸಣ್ಣ ಹಾಗೂ ಮಾಡ್ಯುಲರ್‌ ಅಣು ರಿಯಾಕ್ಟರ್‌ಗಳನ್ನು ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದೆ.

ನವದೆಹಲಿ:  ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಈಡೇರಿಸುವುದರ ಜತೆಗೆ ಶುದ್ಧ ಇಂಧನ ಒದಗಿಸಲು ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳ ಸಹಭಾಗಿತ್ವದೊಂದಿಗೆ ದೇಶದಲ್ಲಿ ಸಣ್ಣ ಹಾಗೂ ಮಾಡ್ಯುಲರ್‌ ಅಣು ರಿಯಾಕ್ಟರ್‌ಗಳನ್ನು ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದೆ.

ವಿಕಸಿತ ಭಾರತದಡಿ ಅಣು ಇಂಧನ ಅತ್ಯಂತ ಮುಖ್ಯವಾದ ಇಂಧನವಾಗಿರಲಿದೆ. ಹೀಗಾಗಿ ಸರ್ಕಾರ ಖಾಸಗಿ ಪಾಲುದಾರಿಕೆಯೊಂದಿಗೆ ಭಾರತ್‌ ಸಣ್ಣ ರಿಯಾಕ್ಟರ್‌ಗಳನ್ನು ಸ್ಥಾಪಿಸಲಿದೆ. ಭಾರತ್‌ ಸಣ್ಣ ಮಾಡ್ಯುಲರ್‌ ರಿಯಾಕ್ಟರ್‌ಗಳ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ನಡೆಸಲಿದೆ. ಅಣು ಇಂಧನಕ್ಕಾಗಿ ಹೊಸ ತಂತ್ರಜ್ಞಾನಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಿದೆ. ಮಧ್ಯಂತರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದ ಸಂಶೋಧನೆ ಮತ್ತು ಅಭಿವೃದ್ಧಿ ನಿಧಿಯನ್ನು ಇದಕ್ಕಾಗಿ ಒದಗಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಭಾರತ್‌ ರಿಯಾಕ್ಟರ್‌ನಿಂದ ಲಾಭ ಏನು?

ಸಾಂಪ್ರದಾಯಿಕ ದೊಡ್ಡ ಅಣು ರಿಯಾಕ್ಟರ್‌ಗಳಂತೆ ಸಣ್ಣ ರಿಯಾಕ್ಟರ್‌ಗಳ ಸ್ಥಾಪನೆಗೆ ಹೆಚ್ಚು ಬಂಡವಾಳ ಹೂಡಬೇಕಿಲ್ಲ. ಈ ರಿಯಾಕ್ಟರ್‌ ಸ್ಥಾಪನೆ ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ. ದೊಡ್ಡ ರಿಯಾಕ್ಟರ್‌ಗೆ ಹೋಲಿಸಿದರೆ ಇವು ಅಧಿಕ ಸುರಕ್ಷಿತ. ಸಣ್ಣ ರಿಯಾಕ್ಟರ್‌ಗಳನ್ನು ಕಾರ್ಖಾನೆಗಳಲ್ಲಿ ಉತ್ಪಾದನೆ ಮಾಡಿ, ಸ್ಥಾಪನೆ ಮಾಡುವ ಸ್ಥಳಕ್ಕೆ ಸಾಗಣೆ ಮಾಡಬಹುದು. ಅತ್ಯಂತ ಸಣ್ಣ ಪ್ರದೇಶಗಳಲ್ಲೂ ಅಥವಾ ಅತ್ಯಂತ ಕಡಿಮೆ ವಿದ್ಯುತ್‌ ಅಗತ್ಯವಿರುವ ಸ್ಥಳದಲ್ಲೂ ಇವನ್ನು ಸ್ಥಾಪಿಸಬಹುದು.--

ಹೆಚ್ಚು ಕ್ಷಮತೆಯ ಉಷ್ಣ

ವಿದ್ಯುತ್ ಸ್ಥಾವರ ಸ್ಥಾಪನೆ

ಹೆಚ್ಚು ಕ್ಷಮತೆ ಹೊಂದಿದ ಅತ್ಯಾಧುನಿಕ ಅಲ್ಟ್ರಾ ಸೂಪರ್‌ ಕ್ರಿಟಿಕಲ್‌ (ಎಸ್‌ಯುಎಸ್‌ಸಿ) ಉಷ್ಣ ವಿದ್ಯುತ್‌ ಸ್ಥಾವರಗಳಿಗಾಗಿ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಕೆಲಸ ಮುಗಿದಿದೆ. ಎನ್‌ಟಿಪಿಸಿ ಹಾಗೂ ಬಿಎಚ್‌ಇಎಲ್‌ ಜಂಟಿ ಸಹಭಾಗಿತ್ವದಲ್ಲಿ ಈ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು 800 ಮೆಗಾವ್ಯಾಟ್‌ ಸಾಮರ್ಥ್ಯದ ಪೂರ್ಣ ಪ್ರಮಾಣದ ವಿದ್ಯುತ್‌ ಸ್ಥಾವರವನ್ನು ಸ್ಥಾಪಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಹಣಕಾಸು ನೆರವನ್ನು ಸರ್ಕಾರ ಒದಗಿಸಲಿದೆ ಎಂದು ನಿರ್ಮಲಾ ಹೇಳಿದ್ದಾರೆ.

ಉದ್ದಿಮೆಗಳಿಗೆ ಶುದ್ಧ ಇಂಧನ

ಹಿತ್ತಾಳೆ, ಸೆರಾಮಿಕ್‌ ಸೇರಿದಂತೆ 60 ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆ ಕ್ಲಸ್ಟರ್‌ಗಳು ಶುದ್ಧ ಇಂಧನಕ್ಕೆ ಹೊರಳಿಕೊಳ್ಳಲು ಹಾಗೂ ಇಂಧನ ಕ್ಷಮತೆ ಕ್ರಮಗಳನ್ನು ಅಳವಡಿಸಿಕೊಳ್ಳಲು ಹಣಕಾಸು ನೆರವು ಒದಗಿಸಲಾಗುತ್ತದೆ. ಮುಂದಿನ ಹಂತದಲ್ಲಿ 100 ಕ್ಲಸ್ಟರ್‌ಗಳಲ್ಲಿ ಇದೇ ಯೋಜನೆ ಜಾರಿಗೆ ತರಲಾಗುತ್ತದೆ.

ಪಿಎಂ ಸೂರ್ಯ ಘರ್‌ ಇಂಧನ ಯೋಜನೆ ಹಿಟ್‌

ದೇಶದ 1 ಕೋಟಿ ಮನೆಗಳು ಪ್ರತಿ ತಿಂಗಳು 300 ಯುನಿಟ್‌ ಉಚಿತ ವಿದ್ಯುತ್‌ ಪಡೆಯುವುದನ್ನು ಸಾಕಾರಗೊಳಿಸಲು ಮನೆಯ ಸೂರಿನ ಮೇಲೆ ಸೌರ ಫಲಕ ಅಳವಡಿಸುವ ಪ್ರಧಾನಮಂತ್ರಿ ಸೂರ್ಯ ಘರ್‌ ಉಚಿತ ವಿದ್ಯುತ್‌ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆ ಯೋಜನೆಗೆ ಗಮನಾರ್ಹ ಪ್ರತಿಕ್ರಿಯೆ ಬಂದಿದೆ. 1.28 ಕೋಟಿ ನೋಂದಣಿಗಳು ಆಗಿದ್ದು, 14 ಲಕ್ಷ ಅರ್ಜಿಗಳು ಬಂದಿವೆ. ಯೋಜನೆಗೆ ಮತ್ತಷ್ಟು ಉತ್ತೇಜನ ನೀಡಲಾಗುತ್ತದೆ ಎಂದು ನಿರ್ಮಲಾ ವಿವರಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ