ಚು.ಆಯೋಗಕ್ಕೆ ಇಬ್ಬರು ಹೊಸ ಆಯುಕ್ತರು: ಎಲ್ಲ ಹುದ್ದೆ ಭರ್ತಿ

KannadaprabhaNewsNetwork | Updated : Mar 15 2024, 11:22 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭ ಆಗಿರುವಾಗ ದಿಢೀರನೆ ಖಾಲಿ ಆಗಿದ್ದ 2 ಚುನಾವಣಾ ಆಯುಕ್ತರ ಹುದ್ದೆಗಳು ಗುರುವಾರ ಭರ್ತಿ ಆಗಿವೆ.

ನವದೆಹಲಿ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭ ಆಗಿರುವಾಗ ದಿಢೀರನೆ ಖಾಲಿ ಆಗಿದ್ದ 2 ಚುನಾವಣಾ ಆಯುಕ್ತರ ಹುದ್ದೆಗಳು ಗುರುವಾರ ಭರ್ತಿ ಆಗಿವೆ. 

ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಐಎಎಸ್‌ ಅಧಿಕಾರಿಗಳಾದ ಸುಖ್ಬೀರ್‌ ಸಂಧು ಮತ್ತು ಜ್ಞಾನೇಶ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

ಆಯುಕ್ತರ ನೇಮಕಕ್ಕೆ ಹೊಸದಾಗಿ ರಚಿತವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಸಮಿತಿ ಮೊದಲ ಬಾರಿ ಸಭೆ ಸೇರಿ ಇವರನ್ನು ನೇಮಕ ಮಾಡಿದೆ.

ಈ ಹಿಂದೆ ಆಯುಕ್ತರಾಗಿದ್ದ ಅನೂಪ್‌ ಚಂದ್ರ ಪಾಂಡೆ ಅವರು ಕಳೆದ ಫೆ.14ರಂದು ನಿವೃತ್ತರಾಗಿದ್ದರೆ, ಇನ್ನೊಬ್ಬ ಆಯುಕ್ತ ಅರುಣ್‌ ಗೋಯಲ್‌ ಅವರು ಕೆಲವೇ ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. 

ಈ ಹಿನ್ನೆಲೆಯಲ್ಲಿ 3 ಸದಸ್ಯರ ಚುನಾವಣಾ ಆಯೋಗದಲ್ಲಿ ಎರಡು ಸ್ಥಾನ ಖಾಲಿ ಉಳಿದಿದ್ದವು. ಲೋಕಸಭೆ ಚುನಾವಣೆಗೂ ಮುನ್ನ ನಡೆದ ಈ ವಿದ್ಯಮಾನವು ಚುನಾವಣೆ ಘೋಷಣೆ ಮೇಲೆ ಪ್ರಶ್ನಾರ್ಥಕ ಚಿಹ್ನೆ ಹುಟ್ಟು ಹಾಕಿದ್ದವು.

ಹೀಗಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಲೋಕಸಭೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರಿದ್ದ ಆಯುಕ್ತರ ನೇಮಕ ಸಮಿತಿ ಮುಂದೆ ಅಂತಿಮವಾಗಿ 6 ಮಂದಿಯ ಹೆಸರು ಪ್ರಸ್ತಾಪವಾಗಿದ್ದವು. 

ಈ ವೇಳೆ ನೇಮಕ ಪ್ರಕ್ರಿಯೆಗೆ ಅಧೀರ್‌ ಅಸಮ್ಮತಿ ಸೂಚಿಸಿದರು. ಆದರೆ ಮೋದಿ ಹಾಗೂ ಶಾ ಸಮ್ಮತಿ ಸೂಚಿಸಿದ ಕಾರಣ ಬಹುಮತ ಆಧರಿಸಿ ಉತ್ತರಾಖಂಡ ಕೇಡರ್‌ನ ಐಎಎಸ್‌ ಅಧಿಕಾರಿ ಸುಖ್ಬೀರ್‌ ಸಂಧು ಮತ್ತು ಕೇರಳ ಕೇಡರ್‌ನ ಜ್ಞಾನೇಶ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಅಧಿಕಾರಿಗಳ ಬಗ್ಗೆ: ಸುಖ್ಬೀರ್‌ ಸಂಧು ಅವರು ಉತ್ತರಾಖಂಡದ ಸರ್ಕಾರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು

ಜ್ಞಾನೇಶ್‌ ಕುಮಾರ್‌ ಅವರು ಸಂಸದೀಯ ವ್ಯವಹಾರಗಳು, ಸಹಕಾರ ಮತ್ತು ಗೃಹ ಖಾತೆಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಅಧೀರ್‌ ಅಸಮಾಧಾನ: ಚುನಾವಣಾ ಆಯುಕ್ತರ ನೇಮಕಾತಿ ಕುರಿತು ಅಸಮಾಧಾನ ಹೊರಹಾಕಿರುವ ಆಯ್ಕೆ ಸಮಿತಿ ಸದಸ್ಯರೂ ಆಗಿರುವ ಲೋಕಸಭೆಯ ಪ್ರತಿಪಕ್ಷ ನಾಯಕರಾಗಿರುವ ಅಧೀರ್‌ ರಂಜನ್‌ ಚೌಧರಿ, ‘ನೇಮಕಾತಿ ಪ್ರಕ್ರಿಯೆಯ ಹಿಂದಿನ ರಾತ್ರಿ ನನಗೆ 212 ನಾಮಾಂಕಿತ ಅಧಿಕಾರಿಗಳ ವಿವರ ನೀಡಲಾಗಿತ್ತು. 

ಕೇವಲ 1 ರಾತ್ರಿಯಲ್ಲಿ 212 ಅಧಿಕಾರಿಗಳ ಪೂರ್ವಾಪರ ಪರಿಶೀಲನೆ ಸಾಧ್ಯವೆ? ಅಲ್ಲದೆ ಸಭೆ ಸೇರುವ ಕೆಲವೇ ಗಂಟೆಗಳ ಮೊದಲು 6 ಮಂದಿಯನ್ನು ಅಂತಿಮ ಶಾರ್ಟ್‌ಲಿಸ್ಟ್‌ಗೆ ಸೇರಿಸಿದ್ದಾಗಿ ತಿಳಿಸಲಾಯಿತು. 

ಈ ಏಕಪಕ್ಷೀಯ ನಡೆಗಳಿಗೆ ನಾನು ಅಸಮ್ಮತಿ ಸೂಚಿಸಿದೆ. ಹೀಗಾಗಿ 3 ಸದಸ್ಯರ ಸಮಿತಿಯಲ್ಲಿ ಬಹುಮತದ ಆಧಾರದಲ್ಲಿ ಚುನಾವಣಾ ಆಯುಕ್ತರ ನೇಮಕಾತಿ ನಡೆದಿದೆ’ ಎಂದು ಆರೋಪಿಸಿದರು.

ಕಳೆದ ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಜಾರಿಗೆ ತಂದಿದ್ದ ಹೊಸ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯಂತೆ ಪ್ರಧಾನಮಂತ್ರಿ ನೇತೃತ್ವದ ಸಮಿತಿ ಸಭೆ ಸೇರಿ ಆಯುಕ್ತರ ಸಮಿತಿ ರಚನೆ ಆಗಿತ್ತು.

Share this article