- ಅಣ್ಣಾಡಿಎಂಕೆ ಕೂಟ-ಡಿಎಂಕೆ ಕೂಟ- ವಿಜಯ್ ಪಕ್ಷಗಳ ನಡುವೆ ತ್ರಿಕೋನ ಕದನ ನಿರೀಕ್ಷೆ
---
ತಮಿಳುನಾಡು ವಿಧಾನಸಭೆ ಚುನಾವಣೆ ಏಕಹಂತದಲ್ಲಿ ಏ.23ರಂದು ನಡೆಯಲಿದ್ದು, ಮೇ 4ಕ್ಕೆ ಫಲಿತಾಂಶ ಬರಲಿದೆ. ಈವರೆಗೆ ಅಣ್ಣಾಡಿಎಂಕೆ-ಡಿಎಂಕೆ ನೇರ ಸ್ಪರ್ಧೆಗೆ ಕಾರಣವಾಗುತ್ತಿದ್ದ ಚುನಾವಣೆಗೆ ಈ ಬಾರಿ ಬಿಜೆಪಿ, ನಟ ವಿಜಯ್ ಟಿವಿಕೆ ಪಕ್ಷಗಳೂ ಪ್ರಮುಖವಾಗಿ ಪ್ರವೇಶಿಸಿವೆ. ಕುತೂಹಲ ಕೆರಳಿಸಿರುವ ಈ ಚುನಾವಣಾ ಫಲಿತಾಂಶ ಏನಾಗಬಹುದು ಎಂಬ ಕಿರು ವಿಶ್ಲೇಷಣೆ ಇಲ್ಲಿದೆ.--
--
ಒಟ್ಟು ಕ್ಷೇತ್ರ 234/ಬಹುಮತಕ್ಕೆ 118
ಡಿಎಂಕೆ133
ಕಾಂಗ್ರೆಸ್18
ವಿಸಿಕೆ5
--
* ತ್ರಿಕೋನ ಕದನದಲ್ಲಿ ಗೆಲ್ಲುವವರಾರು?1. ಡಿಎಂಕೆ+ಕಾಂಗ್ರೆಸ್ ಕೂಟಡಿಎಂಕೆ, ಕಾಂಗ್ರೆಸ್, ಎಡರಂಗಗಳು ಸೇರಿ ಹಲವು ಬಿಜೆಪಿ ವಿರೋಧಿ ಪಕ್ಷಗಳು ಒಟ್ಟಾಗಿ ತಮಿಳುನಾಡು ಚುನಾವಣಾ ಅಖಾಡಕ್ಕೆ ಇಳಿದಿವೆ. ಡಿಎಂಕೆ ಬಹುಪಾಲು ಸ್ಥಾನಗಳಲ್ಲಿ (164) ಸ್ಪರ್ಧಿಸಲಿದ್ದು, ಮೈತ್ರಿಕೂಟದ ಇತರ ಎಲ್ಲಾ ಪಾಲುದಾರರಿಗೆ 70 ಸ್ಥಾನಗಳನ್ನು ಒದಗಿಸಲಿದೆ. ಇದರಲ್ಲಿ ಕಾಂಗ್ರೆಸ್ 28, ವಿಸಿಕೆ 8, ಡಿಎಂಡಿಕೆ 10, ಸಿಪಿಐ ಮತ್ತು ಸಿಪಿಎಂ ತಲಾ 5 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ತಮಿಳರ ಸ್ವಾಭಿಮಾನ ರಕ್ಷಣೆ ಅಜೆಂಡಾದೊಂದಿಗೆ ಡಿಎಂಕೆ ಮುನ್ನುಗ್ಗುತ್ತಿದೆ.
2. ಅಣ್ಣಾಡಿಎಂಕೆ+ಬಿಜೆಪಿ ಕೂಟಎಐಎಡಿಎಂಕೆ-ಬಿಜೆಪಿ-ಪಿಎಂಕೆಎ ಹಾಗೂ ಎಂಎಂಕೆ ಈ ಚುನಾವಣೆಯಲ್ಲಿ ಒಟ್ಟಾಗಿ ಕಣಕ್ಕಿಳಿದಿವೆ. ಎಐಎಡಿಎಂಕೆ 167 ಸ್ಥಾನದಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ 27, ಪಿಎಂಕೆ 18 ಹಾಗೂ ಎಎಂಎಂಕೆ 11 ಸ್ಥಾನ ಹಂಚಿಕೊಂಡಿವೆ. ಡಿಎಂಕೆ ವಿರುದ್ಧದ ಆಡಳಿತ ವಿರೋಧಿ ಅಲೆ ನೆಚ್ಚಿಕೊಂಡಿವೆ. ಏಕಾಂಗಿಯಾಗಿ ಬಹುಮತ ಪಡೆದರೆ ಏಕಾಂಗಿಯಾಗಿ ಸರ್ಕಾರ ರಚಿಸುತ್ತೇವೆ ಎಂದು ಅಣ್ಣಾಡಿಎಂಕೆ ನೇತಾರ ಎಡಪ್ಪಾಡಿ ಕೆ. ಪಳನಿಸ್ವಾಮಿ ಈ ಹಿಂದೆ ಹೇಳಿದ್ದರು. ಹೀಗಾಗಿ ಚುನಾವಣೆ ನಂತರ ಮೈತ್ರಿ ಹೀಗೆಯೇ ಇರಲಿದೆಯೇ ಎಂಬುದನ್ನು ಹೇಳುವುದು ಕಷ್ಟ.
3. ನಟ ವಿಜಯ್ ಅವರ ಟಿವಿಕೆಇದೇ ಮೊದಲ ಬಾರಿ ನಟ ವಿಜಯ್ ಅವರ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ಚುನಾವಣಾ ಕಣಕ್ಕಿಳಿದಿದೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಕಣಕ್ಕಿಳಿದಿದೆ. ವಿಜಯ್ ಅವರು ತಮ್ಮ ಪಕ್ಷ ಡಿಎಂಕೆ, ಅಣ್ಣಾ ಡಿಎಂಕೆ ಹಾಗೂ ಬಿಜೆಪಿಗೆ ಪರ್ಯಾಯ ಎಂದಿದ್ದಾರೆ. ಆದರೆ ನಟನನ್ನು ನೋಡಲು ರ್‍ಯಾಲಿಗಳಿಗೆ ಬರುವ ಜನರು ಅವರಿಗೆ ಮತ ಹಾಕುವರೆ ಎಂಬುದೇ ಪ್ರಶ್ನೆ. ಅಲ್ಲದೆ ಸಮೀಕ್ಷೆಗಳು ವಿಜಯ್ ಪಕ್ಷ 10ರ ಅಂಕಿ ದಾಟದು ಎಂದಿವೆ. ಆದ್ದರಿಂದ ವಿಜಯ್ ಮೋಡಿ ಮಾಡುತ್ತಾರಾ ಇಲ್ಲವಾ ಎಂಬುದು ಕುತೂಹಲಕರ.
--* ಸಿಎಂ ಸ್ಥಾನದ ಮೇಲೆ ಇವರ ಕಣ್ಣು
1. ಎಂ.ಕೆ. ಸ್ಟಾಲಿನ್ಡಿಎಂಕೆ ಹಿರಿಯ ನೇತಾರ ಎಂ.ಕರುಣಾನಿಧಿ ಅವರ ಪುತ್ರ ಎಂ.ಕೆ. ಸ್ಟಾಲಿನ್ ಹಾಲಿ ಮುಖ್ಯಮಂತ್ರಿ. 2021ರಲ್ಲಿ ಸಿಎಂ ಆದ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚೆನ್ನೈ ಮೇಯರ್ ಆಗಿ, 8 ಬಾರಿ ಶಾಸಕರಾಗಿ ಅವರು ಕೆಲಸ ಮಾಡಿದವರು. ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ಡಿಎಂಕೆಯನ್ನು ಮತ್ತೆ ಗೆಲ್ಲಿಸುವ ಭರವಸೆಯೊಂದಿಗೆ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.2. ಎಡಪ್ಪಾಡಿ ಕೆ. ಪಳನಿಸ್ವಾಮಿ
ಜಯಲಲಿತಾ ನಿಧನಾನಂತರ ಪನ್ನೀರಸೆಲ್ವಂ ಜತೆಜತೆಗೇ ಅಣ್ಣಾ ಡಿಎಂಕೆ ನೇತೃತ್ವ ವಹಿಸಿಕೊಂಡ ನಾಯಕ ಇವರು. 2017ರಿಂದ 21ರವರೆಗೆ ಸಿಎಂ ಆಗಿದ್ದರು. ಪ್ರಸ್ತುತ ವಿರೋಧ ಪಕ್ಷದ ನಾಯಕ. ಈಗ ತವರು ಕ್ಷೇತ್ರವಾದ ಎಡಪ್ಪಾಡಿಯಿಂದ ಸ್ಪರ್ಧಿಸಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಪ್ರದೇಶದ ಪ್ರಬಲ ರಾಜಕೀಯ ವ್ಯಕ್ತಿಯಾಗಿರುವ ಪಳನಿಸ್ವಾಮಿ 1989 ರಿಂದ ಈ ಕ್ಷೇತ್ರವನ್ನು ಹಲವು ಬಾರಿ ಗೆದ್ದಿದ್ದಾರೆ.3. ವಿಜಯ್
ವಿಜಯ್ ಇದೇ ಮೊದಲ ಬಾರಿ ರಾಜಕೀಯ ಪಕ್ಷ ಪ್ರವೇಶಿಸಿ ಟಿವಿಕೆ ಪಕ್ಷ ಸ್ಥಾಪಿಸಿದವರು. ಸಿಎಂ ಆಗುವ ಆಸೆ ಹೊಂದಿರುವ ಅವರು ಮೊದಲ ಬಾರಿಯೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ತಮ್ಮನ್ನು ತಾವು ತಮಿಳುನಾಡಿನ ಹಾಲಿ ರಾಜಕಾರಣಿಗಳಿಗೆ ಪರ್ಯಾಯ ನಾಯಕ ಎಂದು ಬಿಂಬಿಸಿಕೊಂಡಿದ್ದಾರೆ. ಪ್ರಸ್ತುತ ಪೆರಂಬೂರು ಹಾಗೂ ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.--
* ಚುನಾವಣಾ ವಿಷಯಗಳುದಕ್ಷಿಣ-ಉತ್ತರ ತಾರತಮ್ಯ, ಹಿಂದಿ ಅಜೆಂಡಾ, ಎಸ್ಐಆರ್, ಕ್ಷೇತ್ರ ಮರುವಿಂಗಡಣೆ. ಇವು ಈ ಬಾರಿಯ ತಮಿಳುನಾಡು ಚುನಾವಣೆಯ ಪ್ರಮುಖ ಅಜೆಂಡಾಗಳು. ಡಿಎಂಕೆ ಕೂಟದ ಪಕ್ಷಗಳು ಕೇಂದ್ರದ ಮೋದಿ ಸರ್ಕಾರ ದಕ್ಷಿಣ-ಉತ್ತರ ತಾರತಮ್ಯ ಮಾಡುತ್ತಿದೆ. ಹಿಂದಿ ಅಜೆಂಡಾ ಹೇರುತ್ತಿದೆ. ಮತದಾರ ಪಟ್ಟಿ ಪರಿಷ್ಕರಿಸಿ ಬಿಜೆಪಿ ವಿರೋಧಿಗಳ ಹೆಸರು ಅಳಿಸಿ ಹಾಕಿಸಿದೆ. ಕ್ಷೇತ್ರ ಮರುವಿಂಗಡಣೆಯಲ್ಲಿ ತಮಿಳುನಾಡಿನ ಪಾಲನ್ನು ನ್ಯಾಯಯುತವಾಗಿ ಹೆಚ್ಚಿಸದೇ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸುತ್ತಿವೆ. ಆದರೆ ಅಣ್ಣಾಡಿಎಂಕೆ ಹಾಗೂ ಬಿಜೆಪಿ, ‘ಡಿಎಂಕೆ ಹಿಂದೂ ವಿರೋಧಿ ಹಾಗೂ ಪರಿವಾರವಾದದ ಪಕ್ಷ’ ಎಂದು ಆರೋಪಿಸುತ್ತಿದೆ.
==* ಗ್ಯಾರಂಟಿ ಮಳೆ
ಕರ್ನಾಟಕದ ರೀತಿ ತಮಿಳುನಾಡಿನಲ್ಲೂ ಎಲ್ಲ ಪಕ್ಷಗಳು ಬಹುತೇಕವಾಗಿ ಮಹಿಳೆಯರಿಗೆ 2000 ರು.ನಿಂದ 2500 ರು.ವರೆಗೆ ನೀಡುವ ಗೃಹಲಕ್ಷ್ಮಿಯಂಥ ಮಾಸಿಕ ಸಹಾಯಧನ ಸೇರಿದಂತೆ ಅನೇಕ ಉಚಿತ ಗ್ಯಾರಂಟಿ ಭರವಸೆಗಳನ್ನು ನೀಡಿವೆ.--
* ಸಮೀಕ್ಷೆಗಳು ಹೇಳೋದೇನು?ಲೋಕಪೋಲ್ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಡಿಎಂಕೆ ಮೈತ್ರಿಕೂಟವು 234 ಕ್ಷೇತ್ರಗಳಲ್ಲಿ 181-189 ಸ್ಥಾನಗಳನ್ನು ಗಳಿಸಲಿದ್ದು, ಶೇ. 40.1 ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಎಐಎಡಿಎಂಕೆ 38–42 ಹಾಗೂ ಟಿವಿಕೆ 8–10 ಸ್ಥಾನ ಪಡೆಯಬಹುದು ಎಂದು ಲೋಕ್‌ಪೋಲ್ ಸಮೀಕ್ಷೆ ಹೇಳಿದೆ. ವೋಟ್ ವೈಬ್ ನಡೆಸಿದ ಅಭಿಪ್ರಾಯ ಸಂಗ್ರಹದ ಪ್ರಕಾರ ಡಿಎಂಕೆ ಮೈತ್ರಿಕೂಟ 113ರಿಂದ 123 ಸ್ಥಾನ, ಎಐಎಡಿಎಂಕೆ ಮೈತ್ರಿಕೂಟ 106 ರಿಂದ 116, ವಿಜಯ್ ಅವರ ಟಿವಿಕೆ 2 ರಿಂದ 8 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಈ ರೀತಿ ಭಿನ್ನ ಅಭಿಪ್ರಾಯಗಳನ್ನು ಸಮೀಕ್ಷೆಗಳು ವ್ಯಕ್ತ ಮಾಡಿವೆ.
--* ಕರ್ನಾಟಕ ರಾಜಕಾರಣಿಗಳ ಮಿಂಚು
ತಮಿಳುನಾಡು ಕರ್ನಾಟಕದ ಪಕ್ಕದ ರಾಜ್ಯ. ಕಾವೇರಿ ವಿವಾದ ಉಭಯ ರಾಜ್ಯಗಳ ನಡುವೆ ಇದೆ. ಆದರೂ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ತಮಿಳುನಾಡಿಗೆ ಹೋಗಿ ಕಾಂಗ್ರೆಸ್-ಡಿಎಂಕೆ ಕೂಟದ ಪರ ಪ್ರಚಾರ ಮಾಡಿದ್ದಾರೆ.