ಪ್ರತಿಭಟಿಸಿದಾಕ್ಷಣ ಜೆನ್‌ ಝೀಗಳು ದೇಶ ವಿರೋಧಗಳಲ್ಲ: ಭಾಗವತ್‌

Published : Aug 07, 2026, 04:55 AM IST
mohan bhagwat

ಸಾರಾಂಶ

‘ಜೆನ್‌ ಝೀಗಳು (ಯುವಕರು) ಕೂಡಾ ನಮ್ಮವರೇ. ಅವರು ತಮ್ಮ ಕಳವಳಗಳ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆಂದರೆ ಅದನ್ನು ಖಂಡಿತಾ ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಜೆನ್‌ ಝೀಗಳು ಪ್ರತಿಭಟನೆ ನಡೆಸುತ್ತಿದ್ದಾರೆಂದ ಮಾತ್ರಕ್ಕೆ ಅವರು ದೇಶ ವಿರೋಧಿಗಳಾಗುವುದಿಲ್ಲ.

ಮುಂಬೈ: ‘ಜೆನ್‌ ಝೀಗಳು (ಯುವಕರು) ಕೂಡಾ ನಮ್ಮವರೇ. ಅವರು ತಮ್ಮ ಕಳವಳಗಳ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆಂದರೆ ಅದನ್ನು ಖಂಡಿತಾ ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಜೆನ್‌ ಝೀಗಳು ಪ್ರತಿಭಟನೆ ನಡೆಸುತ್ತಿದ್ದಾರೆಂದ ಮಾತ್ರಕ್ಕೆ ಅವರು ದೇಶ ವಿರೋಧಿಗಳಾಗುವುದಿಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಂವಾದದ ಒಂದು ನ್ಯಾಯಸಮ್ಮತ ರೂಪ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರತಿಪಾದಿಸಿದ್ದಾರೆ.

ಗುರುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 2,000 ಜೆನ್ ಝೀ ಮತ್ತು ಜೆನ್ ಆಲ್ಫಾ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಮಾತು ಹೇಳಿದರು.

ಜೆನ್‌ ಝೀ ಪ್ರತಿಭಟನೆ

ನೀಟ್ ಪರೀಕ್ಷಾ ಅಕ್ರಮ ವಿರೋಧಿಸಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜೆನ್‌ ಝೀ ಪ್ರತಿಭಟನೆ, ಅದಕ್ಕೆ ದೇಶವ್ಯಾಪಿ ವ್ಯಕ್ತವಾದ ಪರ- ವಿರೋಧ ಅಭಿಪ್ರಾಯಗಳ ಬೆನ್ನಲ್ಲೇ ಭಾಗವತ್‌ ವ್ಯಕ್ತಪಡಿಸಿದ ಈ ಅಭಿಪ್ರಾಯ ಭಾರೀ ಮಹತ್ವ ಪಡೆದುಕೊಂಡಿದೆ.

‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಂವಾದದ ಒಂದು ನ್ಯಾಯಸಮ್ಮತ ರೂಪ. ಅದು ವಿಭಜನೆಯನ್ನು ಉಂಟುಮಾಡುವ ಬದಲು ಒಮ್ಮತವನ್ನು ಮೂಡಿಸುವಂತಿರಬೇಕು. ವಿವಿಧ ಕಾರಣಗಳಿಂದಾಗಿ ಸಂವಾದದ ಮೂಲಕ ಆತಂಕಗಳಿಗೆ ಸೂಕ್ತ ಸ್ಪಂದನೆ ಸಿಗದಿದ್ದಾಗ, ಜನರು ಪ್ರತಿಭಟನೆಯ ಹಾದಿ ಹಿಡಿಯಬಹುದು. ಆದರೆ, ಇವೆಲ್ಲದರ ಉದ್ದೇಶ ಒಡಕನ್ನು ಉಂಟುಮಾಡುವುದಲ್ಲ, ಬದಲಾಗಿ ಒಮ್ಮತವನ್ನು ಮೂಡಿಸುವುದೇ ಆಗಿದೆ. ಜೆನ್ ಝೀ ಪೀಳಿಗೆಯವರ ಅಹವಾಲುಗಳು ನ್ಯಾಯಯುತವಾಗಿವೆ. ಅವರ ಪ್ರಾಮಾಣಿಕತೆಯನ್ನು ನಾನು ನಂಬುತ್ತೇನೆ. ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ವ್ಯಕ್ತವಾಗುತ್ತಿರುವ ಕಳವಳಗಳು ಸಮಂಜಸವಾಗಿವೆ’ ಎಂದು ಸ್ಪಷ್ಟಪಡಿಸಿದರು.

ನಿಜವಾದ ನಾಯಕತ್ವ:

ಇದೇ ವೇಳೆ ‘ನಿಜವಾದ ನಾಯಕನೆಂದರೆ, ಹಿಂಬದಿಯಿಂದಲೇ ಮುನ್ನಡೆಸುವವನು. ಆತ ವ್ಯವಸ್ಥೆಯ ಒಳಗಿನಿಂದಲೇ ಕಾರ್ಯನಿರ್ವಹಿಸುತ್ತಾನೆ. ನಾಯಕತ್ವವನ್ನು ಕೇವಲ ಜನರ ಮುಂದೆ ನಿಲ್ಲುವುದು, ಭಾಷಣ ಮಾಡುವುದು ಅಥವಾ ಚುನಾವಣೆಗಳಲ್ಲಿ ಗೆಲ್ಲುವುದು ಎಂದು ಪರಿಗಣಿಸಬಾರದು. ನಾನು ನನ್ನನ್ನು ನಾಯಕನಾಗಿ ಭಾವಿಸುವುದಿಲ್ಲ. ಬದಲಿಗೆ ಒಬ್ಬ ಕಾರ್ಯಕರ್ತನೆಂದು ಭಾವಿಸುತ್ತೇನೆ. ನಾಯಕತ್ವದ ಉದ್ದೇಶವು ಜನರನ್ನು ಬೆಳಕಿನೆಡೆಗೆ ಕೊಂಡೊಯ್ಯುವುದು, ನಾಯಕರನ್ನು ಸೃಷ್ಟಿಸುವುದೇ ಹೊರತು, ಕೇವಲ ತಾನೊಬ್ಬನೇ ಮುನ್ನಡೆಯುವುದಲ್ಲ. ನಾಯಕತ್ವವು ನಾಯಕರನ್ನು ಸೃಷ್ಟಿಸುವಂತಿರಬೇಕು’ ಎಂದು ಪ್ರತಿಪಾದಿಸಿದರು.

ಸಲಿಂಗಿಗಳ ಬಾಳ್ವೆಗೆ ಸಮ್ಮತಿ ಅಗತ್ಯ: ‘ಎಲ್‌ಜಿಬಿಟಿಕ್ಯುಐಎ+ ವ್ಯಕ್ತಿಗಳು ನಾವು ಸೇರಿದ ಸಮಾಜದ ಭಾಗವೇ ಆಗಿದ್ದಾರೆ ಎಂದು ಸಂಘವು ಸತತವಾಗಿ ಪ್ರತಿಪಾದಿಸುತ್ತಾ ಬಂದಿದೆ. ಜೊತೆಗೆ, ನಮ್ಮ ಸಮಾಜದಲ್ಲಿ ಅವರನ್ನು ಅಳವಡಿಸಿಕೊಳ್ಳುವ ಸಂಪ್ರದಾಯವಿದೆ. ಸಲಿಂಗ ವಿವಾಹವಲ್ಲ, ಬದಲಿಗೆ ಸಲಿಂಗ ಸಂಗಾತಿಗಳು ಒಟ್ಟಿಗೆ ವಾಸಿಸಲು ಸಾಧ್ಯವಾಗುವಂತಹ ಯಾವುದಾದರೂ ವ್ಯವಸ್ಥೆಯನ್ನು ನಾವು ರೂಪಿಸಬೇಕಿದೆ. ಅದಕ್ಕಾಗಿ ಕಾನೂನನ್ನು ರೂಪಿಸಬಹುದು ಮತ್ತು ಸಮಾಜವು ಅದನ್ನು ಒಪ್ಪಿಕೊಳ್ಳಬಹುದು’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

2028ರಿಂದ ವೆಹಿಕಲ್‌ ಟು ವೆಹಿಕಲ್‌ ಸಂವಹನ ವ್ಯವಸ್ಥೆ ಕಡ್ಡಾಯ ಜಾರಿ
2,000 ರು,ಗಿಂತ ಮೇಲ್ಪಟ್ಟ ಯುಪಿಐ ಪಾವತಿಗಳ ಮೇಲೆ ಶುಲ್ಕ ಸಂಭವ