;Resize=(412,232))
ಮುಂಬೈ: ಇತ್ತೀಚೆಗೆ ಐಪಿಒ ಬಿಡುಗಡೆ ಮಾಡಿದ್ದ ರಿಲಯನ್ಸ್‌ನ ಜಿಯೋ ಪ್ಲಾಟ್‌ಫಾರ್ಮ್, ಬುಧವಾರ ಮುಂಬೈ ಷೇರುಪೇಟೆಯಲ್ಲಿ ಶೇ.27ರಷ್ಟು ಭಾರೀ ಏರಿಕೆಯೊಂದಿಗೆ ಲಿಸ್ಟಿಂಗ್ ಆಗಿದೆ. ಈ ಮೂಲಕ ಮೊದಲ ದಿನವೇ ಭಾರತದ 2ನೇ ಅತ್ಯಂತ ಮೌಲ್ಯಯುತ ಕಂಪನಿ ಎಂಬ ದಾಖಲೆಗೆ ಪಾತ್ರವಾಗಿದೆ.
ಕಂಪನಿ ತಲಾ 1119 ರು.ನಂತೆ ನೀಡಿದ್ದ ಷೇರುಗಳು, ಬುಧವಾರ ಶೇ.27ರಷ್ಟು ಏರಿಕೆ ಕಂಡು 1417 ರು.ಗೆ ಲಿಸ್ಟ್ ಆಗಿದೆ. ಈ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯ ದಿನದ ಆರಂಭದಲ್ಲಿ 13 ಲಕ್ಷ ಕೋಟಿ ರು.ಗೆ ತಲುಪಿ, ದೇಶದ 2ನೇ ಅತ್ಯಂತ ಮೌಲ್ಯಯುತ ಕಂಪನಿ ಎಂಬ ಹಿರಿಮೆಗೆ ಪಾತ್ರವಾಯಿತು. ವಿಶೇಷವೆಂದರೆ, 15.94 ಲಕ್ಷ ಕೋಟಿ ರು. ಮಾರುಕಟ್ಟೆ ಬಂಡವಾಳದೊಂದಿಗೆ ಜಿಯೋದ ಮಾತೃ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ದೇಶದ ನಂ.1 ಮೌಲ್ಯಯುತ ಕಂಪನಿ ಎಂಬ ಹಿರಿಮೆ ಹೊಂದಿದೆ.
ಮೊದಲ ದಿನವೇ ಷೇರು ಮೌಲ್ಯ ಶೇ.23ರಷ್ಟು ಏರಿಕೆ ಕಂಡ ಕಾರಣ, ಮೊದಲ ದಿನವೇ ಉತ್ತಮ ಏರಿಕೆ ಕಂಡಿದ್ದ ಎಲ್‌ಐಸಿ, ಹ್ಯುಂಡೈ ಮೋಟಾರ್ಸ್, ಪೇಟಿಎಂ ಮತ್ತು ಎನ್‌ಎಸ್‌ಸಿ ಹೊಂದಿದ್ದ ದಾಖಲೆಗಳನ್ನು ಜಿಯೋ ಮುರಿದಿದೆ. ಚಿಲ್ಲರೆ ಹೂಡಿಕೆದಾರರಿಗೆ ಕನಿಷ್ಠ 12 ಷೇರುಗಳ ಒಂದು ಲಾಟ್ ಅನ್ನು ನೀಡಲಾಗಿದ್ದು, ಅದರನ್ವಯ ಪ್ರತಿ 1 ಲಾಟ್ ಖರೀದಿ ಮಾಡಿದವರಿಗೆ ಅಂದಾಜು 3000 ರು. ನಷ್ಟು ಮೊದಲ ದಿನವೇ ಲಾಭವಾಗಿದೆ.
ಜಿಯೋ ಭಾರತದ 2ನೇ ಅತ್ಯಂತ ಮೌಲ್ಯಯುತ ಕಂಪನಿ ಎಂಬ ದಾಖಲೆಗೆ ಪಾತ್ರವಾದ ಬೆನ್ನಲ್ಲೇ, ಇದುವರೆಗೂ ಭಾರತದ ಟಾಪ್ 5 ಕಂಪನಿಗಳ ಪಟ್ಟಿಯಲ್ಲಿ ಟಾಟಾ ಗ್ರೂಪ್ ಪಟ್ಟಿಯಿಂದ ಹೊರಬಿದ್ದಿದೆ. ಇದೀಗ ರಿಲಯನ್, ಜಿಯೋ, ಭಾರ್ತಿ ಏರ್‌ಟೆಲ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಮೊದಲ 5 ಸ್ಥಾನ ಪಡೆದಿವೆ.
ಕಣ್ಣೀರಿಟ್ಟ ಮುಕೇಶ್ ಅಂಬಾನಿ:
ಜಿಯೋ ಷೇರುಗಳು ಲಿಸ್ಟ್ ಆದ ಬಳಿಕ ನಡೆದ ಕಾರ್ಯಕ್ರಮದಲ್ಲಿ ತಮ್ಮ ಮೂರೂ ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಅಂಬಾನಿ ವೇದಿಕೆ ಏರಿ ಮಾತನಾಡುವ ವೇಳೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಆನಂದಬಾಷ್ಪ ಹರಿಸಿದ್ದು ಎಲ್ಲರ ಗಮನ ಸೆಳೆಯಿತು.
15 ದಿನ ಮೊದಲೇ ವೇತನ:
ಜಿಯೋ ಭರ್ಜರಿ ಲಿಸ್ಟಿಂಗ್ ಬೆನ್ನಲ್ಲೇ ರಿಲಯನ್ಸ್ ಸಿಬ್ಬಂದಿಗೂ ಕಂಪನಿ ಸಿಹಿ ನೀಡಿದೆ. ಎಲ್ಲಾ ಸಿಬ್ಬಂದಿಗಳಿಗೂ 15 ದಿನ ಮೊದಲೇ ವೇತನ ನೀಡಲಾಗಿದೆ. ವಾರ್ಷಿಕ ಬೋನಸ್ ಅನ್ನು ಅವಧಿಗೆ ಮುನ್ನವೇ ಅಂದರೆ ಬುಧವಾರವೇ ವಿತರಿಸಲಾಗಿದೆ. ಜೊತೆಗೆ ಬುಧವಾರ ಇಲ್ಲಲಿನ ರಿಲಯನ್ಸ್ ಕಾರ್ಪೊರೆಟ್ ಪಾರ್ಕ್‌ನಲ್ಲಿ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೆ ಭರ್ಜರಿ ಔತಣ ಕೂಟ ಆಯೋಜಿಸಲಾಗಿತ್ತು. ಅಲ್ಲದೆ ದೇಶಾದ್ಯಂತ ಪ್ರಮುಖ ದೇಗುಲಗಳಲ್ಲಿ ಬುಧವಾರ ವಿಶೇಷ ಪೂಜೆ, ಪ್ರಸಾದ ವಿತರಣೆಯನ್ನು ಕಂಪನಿ ಹಮ್ಮಿಕೊಂಡಿತ್ತು. ಅಲ್ಲದೆ ವಿವಿಧ ರಾಜ್ಯಗಳಲ್ಲಿ ಯಾತ್ರಾರ್ಥಿಗಳಿಗೆ ಮತ್ತು ಸ್ಥಳೀಯ ಜನರಿಗೆ ಸಮುದಾಯ ಭೋಜನ ಕೂಟ ಆಯೋಜಿಸಲಾಗಿತ್ತು
2ನೇ ಮೌಲ್ಯಯುತ ಕಂಪನಿ ಹೇಗೆ
- ತಲಾ ₹1119ರಂತೆ ಷೇರುಗಳನ್ನು ಬಿಡುಗಡೆ ಮಾಡಿದ್ದ ಜಿಯೋ ಪ್ಲಾಟ್‌ಫಾರಂ
- ಬುಧವಾರ ಶೇ.27ರಷ್ಟು ಏರಿಕೆ ಕಂಡು 1417 ರು.ಗೆ ಲಿಸ್ಟ್ ಆದ ಷೇರುಗಳು
- ಕಂಪನಿಯ ಮಾರುಕಟ್ಟೆ ಮೌಲ್ಯ ದಿನದ ಆರಂಭದಲ್ಲಿ 13 ಲಕ್ಷ ಕೋಟಿ ರು.ಗೆ
- ಈ ಮೂಲಕ ದೇಶದ 2ನೇ ಅತ್ಯಂತ ಮೌಲ್ಯಯುತ ಕಂಪನಿ ಎಂಬ ಹಿರಿಮೆ
- 15.94 ಲಕ್ಷ ಕೋಟಿ ರು. ಮೌಲ್ಯದ ರಿಲಯನ್ಸ್ ಇಂಡಸ್ಟ್ರೀಸ್ ದೇಶದ ನಂ.1