ಕರಾವಳಿ ರಾಜ್ಯಗಳಲ್ಲಿ ತೀವ್ರ ಆತಂಕ ಮೂಡಿಸಿದ್ದ ‘ಅರ್ನಬ್‌’ ಚಂಡಮಾರುತ ಬುಧವಾರ ಮುಂಜಾನೆ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ್ದು, ವ್ಯಾಪಕ ಹಾನಿ ಉಂಟುಮಾಡಿದೆ. ಭಾರೀ ತೀವ್ರತೆಯೊಂದಿಗೆ ಚಂಡಮಾರುತ ಅಪ್ಪಳಿಸಿದ ಪರಿಣಾಮ ಲಕ್ಷಾಂತರ ಮರ, ಸಾವಿರಾರು ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ

ಅಮರಾವತಿ: ಕರಾವಳಿ ರಾಜ್ಯಗಳಲ್ಲಿ ತೀವ್ರ ಆತಂಕ ಮೂಡಿಸಿದ್ದ ‘ಅರ್ನಬ್‌’ ಚಂಡಮಾರುತ ಬುಧವಾರ ಮುಂಜಾನೆ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ್ದು, ವ್ಯಾಪಕ ಹಾನಿ ಉಂಟುಮಾಡಿದೆ. ಭಾರೀ ತೀವ್ರತೆಯೊಂದಿಗೆ ಚಂಡಮಾರುತ ಅಪ್ಪಳಿಸಿದ ಪರಿಣಾಮ ಲಕ್ಷಾಂತರ ಮರ, ಸಾವಿರಾರು ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ. ಚಂಡಮಾರುತ ಸಂಬಂಧಿ ಅವಘಡಗಳಿಗೆ ರಾಜ್ಯದಲ್ಲಿ 5 ಜನ ಸಾವನ್ನಪ್ಪಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ.

ರಾಜ್ಯಾದ್ಯಂತ ವಾಹನ, ರೈಲು, ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ವೇಳೆ ನೆರೆಯ ಒಡಿಶಾದಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನಕ್ಕೆ ಅಡ್ಡಿಯಾಗಿದೆ. ಉಳಿದಂತೆ ತಮಿಳುನಾಡು, ಪಶ್ಚಿಮ ಬಂಗಾಳ ಜಾರ್ಜಂಡ್‌ ಮತ್ತು ಛತ್ತೀಸ್‌ಗಢದ ಹಲವು ಪ್ರದೇಶಗಳಲ್ಲೂ ಭಾರೀ ಮಳೆ ಸುರಿಯುತ್ತಿದೆ.

ಮುಂಜಾನೆ ದಾಳಿ:

ಬುಧವಾರ ಮುಂಜಾವು 2 ಗಂಟೆಗೆ ಆಂಧ್ರ ಕರಾವಳಿ ಮೇಲೆ ಆರಂಭವಾದ ಚಂಡಮಾರುತ ಅಪ್ಪಳಿಸುವಿಕೆ ಬೆಳಗಿನ ಜಾವ 8 ಗಂಟೆಯವರೆಗೆ ನಡೆದು ಬಳಿಕ ಆಂಧ್ರಪ್ರದೇಶ ದಾಟಿ ಮುಂದೆ ಸಾಗಿದೆ. ಬಳಿಕ ಅರ್ನಬ್‌ನ ತೀವ್ರತೆ ಇಳಿಕೆ ಕಂಡಿದೆ.

ಭಾರೀ ಮಳೆ:

ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಆಂಧ್ರದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಲಾ 20-26 ಸೆ.ಮೀನವರೆಗೆ ಭಾರೀ ಮಳೆ ಸುರಿದಿದ್ದು ಸಾಮಾನ್ಯ ಜನಜೀವನವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಸಾವಿರಾರು ಜನರು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾರೆ.

13 ಜಿಲ್ಲೆಗಳಿಗೆ ಪ್ರವಾಹ: ಇದೇ ವೇಳೆ 13 ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹದ ಎಚ್ಚರಿಕೆ ನೀಡಿದ್ದು, ತಗ್ಗು ಪ್ರದೇಶಗಳ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.

ಬಿರುಗಾಳಿ ಭೀತಿ:

ಚಂಡಮಾರುತದ ಪ್ರಭಾವದಿಂದ ನ.3ರವರೆಗೆ ಆಂಧ್ರಪ್ರದೇಶದಾದ್ಯಂತ ಭಾರೀ ಮಳೆ ಹಾಗೂ ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಂಟೆಗೆ 50ರಿಂದ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಕರಾವಳಿ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ.

5 ಸಾವು: ಭಾರೀ ಮಳೆಗೆ ಉರುಳಿಬಿದ್ದ ವಿದ್ಯುತ್‌ ತಂತಿ ತಗುಲಿ ಮೂವರು, ಮರ ಬಿದ್ದು ಒಬ್ಬರು ಮತ್ತು ಗೋಡೆ ಕುಸಿದು ಒಬ್ಬರು ಸಾವನ್ನಪ್ಪಿದ್ದಾರೆ.