ಕೇರಳದಾದ್ಯಂತ ಶಾಲೆಗಳಲ್ಲಿ ವಾಟರ್‌ ಬೆಲ್‌ ಸ್ಕೀಂ ಆರಂಭ!

KannadaprabhaNewsNetwork | Updated : Feb 18 2024, 02:24 PM IST

ಸಾರಾಂಶ

ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆ ತಪ್ಪಿಸಲು ಕೇರಳ ಸರ್ಕಾರ ಕ್ರಮ ಕೈಗೊಂಡಿದ್ದು, ಕೇರಳದಾದ್ಯಂತ ಶಾಲೆಗಳಲ್ಲಿ ವಾಟರ್‌ ಬ್ರೇಕ್‌ ನೀಡಲು ಸೂಚಿಸಿದೆ.

ತಿರುವನಂತಪುರಂ: ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ತಡೆಯಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಮಕ್ಕಳು ಹೆಚ್ಚು ನೀರು ಕುಡಿಯುವಂತೆ ಮಾಡಲು ಈ ಹಿಂದೆ ಕೆಲವು ಪ್ರದೇಶಗಳಲ್ಲಿ ‘ವಾಟರ್‌ ಬೆಲ್‌’ ವ್ಯವಸ್ಥೆ ಜಾರಿ ಮಾಡಿದ್ದ ಕೇರಳ ಸರ್ಕಾರ ಇದೀಗ ಈ ಯೋಜನೆಯನ್ನು ರಾಜ್ಯದ ಎಲ್ಲ ಶಾಲೆಗಳಲ್ಲೂ ಜಾರಿ ಮಾಡಲು ಮುಂದಾಗಿದೆ.

ಫೆ.20ರಿಂದ ರಾಜ್ಯದ ಎಲ್ಲ ಶಾಲೆಗಳಲ್ಲೂ ಈ ಯೋಜನೆ ಜಾರಿಯಾಗಲಿದೆ. ಈ ಪ್ರಕಾರ ಎಲ್ಲಾ ಶಾಲೆಗಳಲ್ಲಿ ಬೆಳಿಗ್ಗೆ 10.30 ಮತ್ತು ಮಧ್ಯಾಹ್ನ 2.30 ಕ್ಕೆ ಎರಡು ಬಾರಿ ಬೆಲ್ ಬಾರಿಸಲಾಗುತ್ತದೆ. ಆಗ ತಲಾ 5 ನಿಮಿಷಗಳ ಕಾಲ ನೀರು ಕುಡಿಯಲು ಮಕ್ಕಳಿಗೆ ಸಮಯಾವಕಾಶ ನೀಡಲಾಗುತ್ತದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೇರಳ ಶಿಕ್ಷಣ ಇಲಾಖೆ ‘ಹೆಚ್ಚಿನ ತಾಪಮಾನದ ಹಿನ್ನೆಲೆಯಲ್ಲಿ ನಾವು 2019 ರಲ್ಲಿ ಮೊದಲ ಬಾರಿಗೆ ಕೆಲವು ಪ್ರದೇಶಗಳಲ್ಲಿನ ಶಾಲೆಗಳಲ್ಲಿ ವಾಟರ್‌ ಬೆಲ್‌ ವ್ಯವಸ್ಥೆ ಜಾರಿಗೆ ತಂದೆವು. 

ಇದನ್ನು ನೋಡಿ ಕರ್ನಾಟಕ, ತೆಲಂಗಾಣದಂತಹ ರಾಜ್ಯಗಳು ಅದನ್ನು ಜಾರಿಗೆ ತಂದವು. ಇದೀಗ ತಾಪಮಾನ ಹೆಚ್ಚುತ್ತಿರುವುದರಿಂದ ರಾಜ್ಯದಾದ್ಯಂತ ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸುತ್ತಿದ್ದೇವೆ’ ಎಂದಿದೆ. 

ಶಾಲೆಗಳಲ್ಲಿ ವಾಟರ್‌ ಬೆಲ್‌ ಕಲ್ಪನೆ ಪರಿಚಯಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ. ಏನಿದು ವಾಟರ್‌ ಬೆಲ್‌ಬೇಸಿಗೆಯಲ್ಲಿ ತಾಪಮಾನ ಹೆಚ್ಚಳದಿಂದ ನಿರ್ಜಲೀಕರಣ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 

ಇದನ್ನು ತಡೆಯಲು ಹೆಚ್ಚು ನೀರು ಕುಡಿಯುವುದು ಒಳ್ಳೆಯದು. ದಿನದಲ್ಲಿ ಕಾಲ ಕಾಲಕ್ಕೆ ನೀರು ಕುಡಿದರೆ ದೇಹವು ಹೈಡ್ರೆಟೆಡ್ ಆಗಿರುತ್ತದೆ. ಶಾಲಾ ಸಮಯದಲ್ಲಿ ಮಕ್ಕಳು ಸಾಕಷ್ಟು ನೀರು ಸೇವಿಸುವಂತೆ ನೋಡಿಕೊಳ್ಳುವುದು ಅಗತ್ಯ. 

ಹೀಗಾಗಿ ಮಕ್ಕಳು ಶಾಲೆಯಲ್ಲಿದ್ದ ವೇಳೆ ಆಗಾಗ ಬೆಲ್‌ ಮಾಡಲಾಗುತ್ತದೆ. ಈ ಬೆಲ್‌ ಮಾಡಿದ ಕೂಡಲೇ ಮಕ್ಕಳೆಲ್ಲ ನೀರು ಕುಡಿಯಬೇಕು. ಮಕ್ಕಳಿಗೆ ಹೆಚ್ಚು ನೀರು ಕುಡಿಯುವುದನ್ನು ನೆನಪಿಸಲೆಂದೇ ಈ ಯೋಜನೆ ಜಾರಿ ಮಾಡಲಾಗಿದೆ.

Share this article