ಪಿಟಿಐ ಚಂಡೀಗಢ
ಚರ್ಚೆ ನಡೆಯುವಾಗ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿಬಿಡುತ್ತಾರೆ, ಹೀಗಾಗಿ ಅವರ್‍ಯಾರೂ ಹೊರಗೆ ಹೋಗದಂತೆ ಸದನದ ಒಳಗಿನಿಂದ ಬೀಗ ಹಾಕಿ ಎಂದು ಸ್ಪೀಕರ್ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಬೀಗ- ಕೀಲಿ ನೀಡಿದ ಘಟನೆ ಸೋಮವಾರ ನಡೆದಿದೆ.
ಇದು ವಿಧಾನಸಭೆ ಅಧಿವೇಶನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.ಮಾ.1ರಂದು ಪಂಜಾಬ್ ವಿಧಾನಸಭೆಯನ್ನು ಉದ್ದೇಶಿಸಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಭಾಷಣ ಮಾಡುವ ವೇಳೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು.
ರಾಜ್ಯಪಾಲರು ಪೂರ್ಣವಾಗಿ ಭಾಷಣ ಓದದೆ ಮಂಡಿಸಲಾಗಿದೆ ಎಂದು ಹೇಳಿದ್ದರು. ವಿಪಕ್ಷಗಳ ಈ ವರ್ತನೆ ಬಗ್ಗೆ ಚರ್ಚೆ ಆಗಬೇಕು ಎಂದು ಮುಖ್ಯಮಂತ್ರಿ ಸೋಮವಾರ ಆಗ್ರಹಿಸಿದರು.
ಅದಕ್ಕೆ ಮನ್ನಣೆ ನೀಡಿದ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರು, ಸದನದ ಆರಂಭದಲ್ಲಿ ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆಯನ್ನು ರದ್ದುಗೊಳಿಸಿ ಚರ್ಚೆಗೆ ಅವಕಾಶ ಮಾಡಿಕೊಡುವ ಮೂಲಕ ಸಂಪ್ರದಾಯ ಉಲ್ಲಂಘಿಸಿದರು.
ಈ ವೇಳೆ ಸ್ಪೀಕರ್ ಅವರಿಗೆ ಲಕೋಟೆಯಲ್ಲಿ ಬೀಗ ಹಾಗೂ ಕೀಲಿಯನ್ನು ಹಸ್ತಾಂತರಿಸಿದ ಭಗವಂತ ಮಾನ್, ಚರ್ಚೆ ಆರಂಭವಾದರೆ ವಿಪಕ್ಷಗಳು ಸಭಾತ್ಯಾಗ ಮಾಡಿಬಿಡುತ್ತವೆ.
ಅವರು ಹೊರಹೋಗದಂತೆ ಬೀಗ ಜಡಿಯಿರಿ ಎಂದು ಮನವಿ ಮಾಡಿದರು. ಇದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿ ಕೋಲಾಹಲ ಉಂಟಾಯಿತು.
ಬಳಿಕ ಸ್ಪೀಕರ್ ಕಲಾಪವನ್ನು ಮುಂದೂಡಿದರು. ಇದಾದ ಬಳಿಕವೂ ಆಪ್ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು.