ಬಿಹಾರದಲ್ಲಿ ಎನ್‌ಡಿಗೆ ದಾಖಲೆ ಜಯ : ಮೋದಿ ಭವಿಷ್ಯ

KannadaprabhaNewsNetwork |  
Published : Nov 05, 2025, 02:00 AM ISTUpdated : Nov 05, 2025, 05:02 AM IST
pm narendra modi

ಸಾರಾಂಶ

ಕಳೆದ 20 ವರ್ಷಗಳಲ್ಲಿ ಎನ್‌ಡಿಎ ಸಾಧಿಸಿದ ಗೆಲುವಿನ ದಾಖಲೆಯನ್ನು ಮುರಿದು ಐತಿಹಾಸಿಕ ಜಯ ನೀಡುವುದಕ್ಕೆ ಬಿಹಾರದ ಜನತೆ ಮನಸ್ಸು ಮಾಡಿದ್ದಾರೆ. ಆದರೆ ಜಂಗಲ್‌ ರಾಜ್ಯದ ಜನರು ಹೀನಾಯ ಸೋಲು ಕಾಣಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.

ನವದೆಹಲಿ: ಕಳೆದ 20 ವರ್ಷಗಳಲ್ಲಿ ಎನ್‌ಡಿಎ ಸಾಧಿಸಿದ ಗೆಲುವಿನ ದಾಖಲೆಯನ್ನು ಮುರಿದು ಐತಿಹಾಸಿಕ ಜಯ ನೀಡುವುದಕ್ಕೆ ಬಿಹಾರದ ಜನತೆ ಮನಸ್ಸು ಮಾಡಿದ್ದಾರೆ. ಆದರೆ ಜಂಗಲ್‌ ರಾಜ್ಯದ ಜನರು ಹೀನಾಯ ಸೋಲು ಕಾಣಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.

ಬಿಹಾರದ ಬಿಜೆಪಿ ಮಹಿಳಾ ಘಟಕ ಮತ್ತು ಎನ್‌ಡಿಎ ಕಾರ್ಯಕರ್ತರ ಜತೆಗೆ ನಮೋ ಆ್ಯಪ್‌ನಲ್ಲಿ ಸಂವಾದ ನಡೆಸಿದ ಅವರು, ‘ಬಿಹಾರದಲ್ಲಿ ನಡೆದ ಪ್ರತಿ ರ್‍ಯಾಲಿಯೂ ಹಿಂದಿನ ದಾಖಲೆ ಮುರಿಯುತ್ತಿದೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಪಾಲ್ಗೊಂಡಿದ್ದರು. ನಾನು ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಮತ್ತು ಎನ್‌ಡಿಎ ಗೆಲ್ಲುತ್ತದೆ ಅದರಲ್ಲಿಯೂ ಐತಿಹಾಸಿಕ ಗೆಲುವನ್ನೇ ಪಡೆಯಲಿದೆ. ಜಯದ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ಆದರೆ ಹೆಚ್ಚು ಮತದಾನ ನಡೆಯಬೇಕು ಎಂದು ಬಯಸುತ್ತೇನೆ’ ಎಂದು ಹೇಳಿದರು.‘ಜಂಗಲ್‌ ರಾಜ್ಯದವರು ಅತ್ಯಂತ ಕೆಟ್ಟ ಸೋಲನ್ನು ಪಡೆಯುವಾಗ, ಬಿಹಾರದ ಜನರು ಕಳೆದ 20 ವರ್ಷಗಳಲ್ಲಿ ಎನ್‌ಡಿಎ ಸಾಧಿಸಿದ ಗೆಲುವಿನ ದಾಖಲೆಯನ್ನು ಮುರಿಯಲು ಮನಸ್ಸು ಮಾಡಿದ್ದಾರೆ’ ಎಂದರು.

ವಿಪಕ್ಷ ನಾಯಕರನ್ನು ಮನೇಲಿ ಕೂಡಿ ಹಾಕಿ: ಲಲನ್‌ ಸಿಂಗ್‌ ವಿವಾದ

ಪಟನಾ: ‘ಮತದಾನದ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರನ್ನು ಮನೆಯಲ್ಲಿ ಕೂಡಿ ಹಾಕಿ. ಅವರನ್ನು ಹೊರಬಿಡಬೇಡಿ’ ಎಂದು ಬಿಹಾರದ ಮೊಕಾಮಾದಲ್ಲಿನ ಮತದಾರಿಗೆ ಕರೆ ನೀಡಿ ಕೇಂದ್ರ ಸಚಿವ ಹಾಗೂ ಜೆಡಿಯು ನಾಯಕ ಲಲನ್‌ ಸಿಂಗ್ ವಿವಾದಕ್ಕೀಡಾಗಿದ್ದಾರೆ. ಅವರ ವಿರುದ್ಧ ಪ್ರಚೋದಕ ಭಾಷಣ ಕೇಸು ದಾಖಲಿಸಲಾಗಿದೆ.ಮೊಕಾಮಾದಲ್ಲಿ ಮಾಜಿ ಗ್ಯಾಂಗ್‌ಸ್ಟರ್‌ ಅನಂತ ಸಿಂಗ್‌ ಅವರನ್ನು ಚುನಾವಣಾ ಅಖಾಡಕ್ಕಿಳಿಸಿದೆ. ಆದರೆ 3 ದಿನದ ಹಿಂದೆ ಅವರು ಜನ್‌ ಸುರಾಜ್‌ ಕಾರ್ಯಕರ್ತನ ಹತ್ಯೆ ಕೇಸಲ್ಲಿ ಬಂಧಿತರಾಗಿದ್ದಾರೆ. ಇದೇ ಮೊಕಾಮಾದಲ್ಲಿ ಸೋಮವಾರ ಮಾತನಾಡಿದ್ದ ಲಲನ್ ಸಿಂಗ್‌, ‘ಮತದಾನದ ದಿನ ಮೊಕಾಮಾದಲ್ಲಿ ಪ್ರತಿಪಕ್ಷಗಳ ನಾಯಕರನ್ನು ಮನೆಯಲ್ಲಿ ಕೂಡಿ ಹಾಕಿ’ ಎಂದು ಕರೆ ನೀಡಿದ್ದರು.

ಈ ಹೇಳಿಕೆಯನ್ನು ಆರ್‌ಜೆಡಿ ಖಂಡಿಸಿದ್ದು, ‘ಲಲನ್‌ ಸಿಂಗ್ಅ ವರು ಚುನಾವಣಾ ಆಯೋಗವನ್ನು ಬುಲ್ಡೋಜ್‌ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದೆ.

ಮೋದಿಯ ಪದವಿಯೇ ನಕಲಿ: ರಾಹುಲ್‌ ಆರೋಪ 

ಪಟನಾ: ‘ಪ್ರಧಾನಿ ನರೇಂದ್ರ ಮೋದಿ ನಕಲಿ ಪದವಿಯನ್ನು ಹೊಂದಿದ್ದಾರೆ. ಇದಕ್ಕೆ ಅವರಿಗೆ ಶಿಕ್ಷಣದ ಮೇಲಿರುವ ಅಸಡ್ಡೆಯೇ ಕಾರಣ’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು ‘ಪ್ರಾಚೀನ ಕಾಲದಲ್ಲಿ ನಳಂದಾ ಅತ್ಯುತ್ತಮ ವಿಶ್ವವಿದ್ಯಾನಿಲಯವಾಗಿತ್ತು. ಚೀನಾ, ಕೊರಿಯಾ, ಜಪಾನ್ ವಿದ್ಯಾರ್ಥಿಗಳು ಇಲ್ಲಿಗೆ ಕಲಿಯುವುದಕ್ಕೆ ಬರುತ್ತಿದ್ದರು. ಆದರೆ ಪ್ರಧಾನಿಯವರಿಗೆ ಅದರ ಬಗ್ಗೆ ಆಸಕ್ತಿಯಿಲ್ಲ. ಯಾಕೆಂದರೆ ಅವರ ಪದವಿಯೇ ನಕಲಿ’ ಎಂದರು.

ಪ್ರಶ್ನಿಸಬಾರದೆಂದು ರೀಲ್ಸ್‌ಗೆ ಪ್ರೋತ್ಸಾಹ:‘ ಮೋದಿಯವರು ನೀವು (ಯುವಕರು) ರೀಲ್ಸ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ಗಳಿಗೆ ದಾಸರಾಗುವುದನ್ನು ಬಯಸುತ್ತಾರೆ. ಇದು 21ನೇ ಶತಮಾನದ ಹೊಸ ನಶೆ. ಈ ರೀತಿ ಆದರೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂತಹ ಸಮಸ್ಯೆಗಳ ಬಗ್ಗೆ ಯುವಕರು ಸರ್ಕಾರವನ್ನು ಪ್ರಶ್ನಿಸುವುದಿಲ್ಲ. ಪ್ರಧಾನಿಯೂ ಇದನ್ನೇ ಬಯಸುತ್ತಾರೆ’ ಎಂದರು.

ಇದೇ ವೇಳೆ, ‘ ಬಿಹಾರದಲ್ಲಿ ಎನ್‌ಡಿಎ ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಮತಚೋರಿಯಲ್ಲಿ ತೊಡಗಿದ್ದಾರೆ. ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಹಿಂದುಳಿದ, ದಲಿತರ ಪರವಾಗಿರುತ್ತೇವೆ. ರಾಜ್ಯವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಿ, ಚೀನಾ ಕೂಡ ತಿರುಗಿ ನೋಡುವಂತೆ ಮಾಡುತ್ತೇವೆ’ ಎಂದರು.

ಬಿಹಾರ ಮೊದಲ ಹಂತದ ಚುನಾವಣಾ ಪ್ರಚಾರಕ್ಕೆ ತೆರೆ

ಪಟನಾ: ಎನ್‌ಡಿಎ, ಇಂಡಿಯಾ ಕೂಟಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಬಿಹಾರ ವಿಧಾನಸಭೆಯ ಚುನಾವಣೆಯ ಮೊದಲ ಹಂತದ ಚುನಾವಣಾ ಪ್ರಚಾರಕ್ಕೆ ಮಂಗಳವಾರ ಸಂಜೆ 5 ಗಂಟೆಗೆ ತೆರೆ ಬಿದ್ದಿದೆ.ನ.6ರಂದು ಮೊದಲ ಹಂತದಲ್ಲಿ 18 ಜಿಲ್ಲೆಗಳ 121 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ತೇಜಸ್ವಿ ಯಾದವ್‌ ಸೇರಿದಂತೆ ಎನ್‌ಡಿಎ, ಇಂಡಿಯಾ ಕೂಟ ಸೇರಿ 2 ಮೈತ್ರಿಕೂಟಗಳ ನಡುವಿನ ವಾಕ್ಸಮರಕ್ಕೆ ಪ್ರಚಾರ ಸಾಕ್ಷಿಯಾಗಿತ್ತು. ನ.11 ಕ್ಕೆ ಎರಡನೇ ಹಂತ ಮತ್ತು 14ಕ್ಕೆ ಫಲಿತಾಂಶ ಹೊರಬೀಳಲಿದೆ.

PREV
Read more Articles on

Recommended Stories

ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ