1000 ಖಾತೆಗೆ ಒಂದೇ ಪಾನ್‌: ಪೇಟಿಎಂ ಬ್ಯಾಂಕ್‌ ಗೋಲ್ಮಾಲ್‌

KannadaprabhaNewsNetwork | Updated : Feb 05 2024, 08:15 AM IST

ಸಾರಾಂಶ

ಇತ್ತೀಚೆಗಷ್ಟೇ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ನಿರ್ಬಂಧಕ್ಕೆ ಒಳಗಾಗಿದ್ದ ಪೇಟಿಯಂ ಬ್ಯಾಂಕ್‌, 1000ಕ್ಕೂ ಹೆಚ್ಚು ಖಾತೆ ತೆರೆಯಲು ಕೇವಲ 1 ಪಾನ್‌ ಕಾರ್ಡ್‌ ಸಂಖ್ಯೆಯನ್ನೇ ಅನುಮೋದಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

ಮುಂಬೈ: ಇತ್ತೀಚೆಗಷ್ಟೇ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ನಿರ್ಬಂಧಕ್ಕೆ ಒಳಗಾಗಿದ್ದ ಪೇಟಿಯಂ ಬ್ಯಾಂಕ್‌, 1000ಕ್ಕೂ ಹೆಚ್ಚು ಖಾತೆ ತೆರೆಯಲು ಕೇವಲ 1 ಪಾನ್‌ ಕಾರ್ಡ್‌ ಸಂಖ್ಯೆಯನ್ನೇ ಅನುಮೋದಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. 

ಈ ಕಾರಣಕ್ಕಾಗಿಯೇ ಬ್ಯಾಂಕ್‌ನ ವಹಿವಾಟಿನ ಮೇಲೆ ಆರ್‌ಬಿಐ ನಿರ್ಬಂಧ ಹೇರಿತು ಎಂದು ಮೂಲಗಳು ತಿಳಿಸಿವೆ.

ಹೀಗೆ ತೆರೆಯಲಾದ ಬ್ಯಾಂಕ್‌ ಖಾತೆಗಳಲ್ಲಿ ಭಾರೀ ಪ್ರಮಾಣದ ಹಣ ಚಲಾವಣೆಯಾಗಿದೆ. ಇದು ಅಕ್ರಮ ಹಣ ವರ್ಗಾವಣೆಯ ಪ್ರಮುಖ ಮೂಲವಾಗಿರಬಹುದು ಎನ್ನುವ ಕಾರಣಕ್ಕಾಗಿ ಬ್ಯಾಂಕ್‌ ಮೇಲೆ ಆರ್‌ಬಿಐ ಕಠಿಣ ಕ್ರಮ ಜಾರಿಗೊಳಿಸಿತು ಎನ್ನಲಾಗಿದೆ.

ಏನೇನು ಅಕ್ರಮ ಬೆಳಕಿಗೆ?
ಸಾವಿರಾರು ಬಳಕೆದಾರರ ಸರಿಯಾದ ಗುರುತೇ ಇಲ್ಲದೇ ಅವರ ಹೆಸರಿನಲ್ಲಿ ಖಾತೆಗಳನ್ನು ತೆರೆಯಲಾಗಿದೆ. ಇನ್ನು 1000ಕ್ಕೂ ಹೆಚ್ಚು ಖಾತೆಗಳಿಗೆ 1 ಪಾನ್‌ ಕಾರ್ಡ್‌ ಸಂಖ್ಯೆ ಬಳಸಿರುವುದು ಕೂಡಾ ಕಂಡುಬಂದಿದೆ. 

ಜೊತೆಗೆ ಗ್ರಾಹಕರ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಪರಿಶೀಲನೆಯನ್ನು ಸೂಕ್ತವಾಗಿ ನಡೆಸದೇ ಇರುವುದು ಬೆಳಕಿಗೆ ಬಂದಿದೆ. 

ಕೆಲವು ಖಾತೆಗಳಲ್ಲಿ ನಡೆದ ದೊಡ್ಡಮಟ್ಟದ ಹಣಕಾಸಿನ ವ್ಯವಹಾರಗಳ ಬಗ್ಗೆ ಗ್ರೂಪ್‌ನ ಒಳಗೆ ಮತ್ತು ಸಹಯೋಗಿಗಳ ಪಾಲುದಾರರ ಜೊತೆ ಮಾಹಿತಿ ಹಂಚಿಕೊಂಡಿಲ್ಲ. ಈ ವ್ಯವಹಾರ ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಿರುವ ಸಾಧ್ಯತೆ ಇದೆ.

ಇದರ ಜೊತೆಗೆ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಮತ್ತು ಅದರ ಮಾತೃಸಂಸ್ಥೆಯಾದ ಒನ್‌ 97 ಕಮ್ಯುನಿಕೇಷನ್‌ ನಡುವಿನ ನಂಟು ಸರ್ಕಾರದ ನಿಯಮಗಳಿಗೆ ಅನ್ವಯವಾಗಿಲ್ಲ.

 ಪೇಟಿಎಂ ಆ್ಯಪ್‌ ಮೂಲಕವೇ ಹಣದ ವರ್ಗಾವಣೆ ನಡೆಸಿರುವುದು ಗ್ರಾಹಕರ ಮಾಹಿತಿ ಸೋರಿಕೆಯ ಸಾಧ್ಯತೆಗೆ ಕಾರಣವಾಗಿದೆ ಎಂಬ ಅಂಶಗಳು ಆರ್‌ಬಿಐ ನಡೆಸಿದ ಪರಿಶೀಲನೆ ವೇಳೆ ಕಂಡುಬಂದಿತ್ತು. 

ಈ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಯ್ತು ಎಂದು ಮೂಲಗಳು ತಿಳಿಸಿವೆ.ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ಜಾರಿ ನಿರ್ದೇಶನಾಲಯ (ಇ.ಡಿ), ಪ್ರಧಾನ ಮಂತ್ರಿ ಕಚೇರಿ ಹಾಗೂ ಗೃಹ ವ್ಯವಹಾರಗಳ ಸಚಿವಾಯಲಕ್ಕೆ ಆರ್‌ಬಿಐ ತನ್ನ ವರದಿಯನ್ನು ಕಳುಹಿಸಿದೆ. 

ಇನ್ನು ‘ಪೇಟಿಎಂ ಪ್ರಕರಣದಲ್ಲಿ ಯಾವುದೇ ಅಕ್ರಮಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ದೊರೆತರೆ ಇ.ಡಿಯು ಪೇಟಿಎಂ ವಿರುದ್ಧ ತನಿಖೆ ಆರಂಭಿಸಲಿದೆ’ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

Share this article