ಧರ್ಮನಿಂದೆ: ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂಕೋರ್ಟ್‌ ಛೀಮಾರಿ

KannadaprabhaNewsNetwork | Updated : Mar 05 2024, 08:44 AM IST

ಸಾರಾಂಶ

ತಮಿಳುನಾಡು ಡಿಎಂಕೆ ಸಚಿವ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆಗೆ ಸುಪ್ರೀಂಕೋರ್ಟ್ ಸೋಮವಾರ ಛೀಮಾರಿ ಹಾಕಿದೆ ಹಾಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಉಲ್ಲಂಘಿಸಿದ್ದೀರಿ.

ಪಿಟಿಐ ನವದೆಹಲಿ

ಸಚಿವರಾಗಿದ್ದಾಗ ನೀವು ನಿಮ್ಮ ಹೇಳಿಕೆಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಅರಿವಿರಬೇಕು’ ಎಂದು ಕಿಡಿಕಾರಿದೆ.

ತಮ್ಮ ಹೇಳಿಕೆಗಳ ಕುರಿತಂತೆ ವಿವಿಧ ಕೋರ್ಟುಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಒಗ್ಗೂಡಿಸಿ ಒಂದೇ ಕಡೆ ವಿಚಾರಣೆ ನಡೆಸುಂತೆ ಉದಯನಿಧಿ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ನೀವು ಆರ್ಟಿಕಲ್ 19(1)(ಎ) (ಸಂವಿಧಾನದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಅಡಿಯಲ್ಲಿ ನಿಮ್ಮ ಹಕ್ಕನ್ನು ದುರುಪಯೋಗ ಮಾಡಿಕೊಂಡಿದ್ದೀರಿ. 

ನೀವು ಹೇಳಿದ್ದಕ್ಕೆ ಆಗುವ ದುಷ್ಪರಿಣಾಮ ಗೊತ್ತಿಲ್ಲವೇ? ನೀವು ಸಾಮಾನ್ಯನಲ್ಲ. ನೀವು ಮಂತ್ರಿ. ಇದರ ಪರಿಣಾಮಗಳನ್ನು ನೀವು ತಿಳಿದುಕೊಳ್ಳಬೇಕು’ ಎಂದು ಹೇಳಿತು ಮತ್ತು ಮಾರ್ಚ್ 15ಕ್ಕೆ ವಿಚಾರಣೆ ಮುಂದೂಡಿತು.

ಉದಯನಿಧಿ 2023ರ ಸೆಪ್ಟೆಂಬರ್‌ನಲ್ಲಿ ಸಮ್ಮೇಳನವೊಂದರಲ್ಲಿ ಮಾತನಾಡುತ್ತಾ, ‘ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಮತ್ತು ಅದನ್ನು ಕೊರೋನಾ, ಮಲೇರಿಯಾ ಹಾಗೂ ಡೆಂಘೀ ರೋಗದಂತೆ ನಿರ್ಮೂಲನೆ ಮಾಡಬೇಕು’ ಎಂದು ಹೇಳಿದ್ದರು. ಇದರ ವಿರುದ್ಧ ದೇಶದ ವಿವಿಧ ಕಡೆ ಪ್ರಕರಣ ದಾಖಲಾಗಿದ್ದವು.

Share this article