ನೆಟ್‌ ಪರೀಕ್ಷೆಯಲ್ಲಿ ವ್ಯಾಪಕ ಅವ್ಯವಹಾರ ಬೆಳಕಿಗೆ

ಸಾರಾಂಶ

ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್‌’ನಲ್ಲಿ ನಡೆದ ವ್ಯಾಪಕ ಅಕ್ರಮಗಳ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷೆ ಸಂಸ್ಥೆ (ಎನ್‌ಟಿಎ) ನಡೆಸಿದ್ದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲೂ (ನೆಟ್‌) ಅಕ್ರಮ ನಡೆದ ಆರೋಪ ಕೇಳಿಬಂದಿದೆ.

ನವದೆಹಲಿ :  ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್‌’ನಲ್ಲಿ ನಡೆದ ವ್ಯಾಪಕ ಅಕ್ರಮಗಳ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷೆ ಸಂಸ್ಥೆ (ಎನ್‌ಟಿಎ) ನಡೆಸಿದ್ದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲೂ (ನೆಟ್‌) ಅಕ್ರಮ ನಡೆದ ಆರೋಪ ಕೇಳಿಬಂದಿದೆ. ಹೀಗಾಗಿ ಜೂ.18ರಂದು ನಡೆದಿದ್ದ ನೆಟ್‌ ಪರೀಕ್ಷೆಯನ್ನು ಮರುದಿನವೇ ರದ್ದುಗೊಳಿಸಿರುವ ಕೇಂದ್ರ ಶಿಕ್ಷಣ ಸಚಿವಾಲಯ ಅಕ್ರಮದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದೆ.

ಪದವಿ ಕಾಲೇಜು/ವಿವಿ ಪ್ರಾಧ್ಯಾಪಕರ ನೇಮಕಕ್ಕೆ ಅರ್ಹತೆ ಸಂಪಾದಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಯುಜಿಸಿ ಪರವಾಗಿ ಎನ್‌ಟಿಎ ಈ ‘ನೆಟ್‌’ ಪರೀಕ್ಷೆಗಳನ್ನು ನಡೆಸುತ್ತದೆ. ಮಂಗಳವಾರ ದೇಶದ ವಿವಿಧ ನಗರಗಳಲ್ಲಿ ನಡೆದ ಈ ಪರೀಕ್ಷೆಗೆ 9 ಲಕ್ಷ ವಿದ್ಯಾರ್ಥಿಗಳು ಕುಳಿತಿದ್ದರು.

ಆದರೆ, ಪೆನ್‌-ಪೇಪರ್ ಮೋಡ್‌ನಲ್ಲಿ ನಡೆದ ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು ಹಾಗೂ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯೂನಿಟ್‌ ಕೆಲವು ಮಾಹಿತಿಗಳನ್ನು ಇದಕ್ಕೆ ಪೂರಕವಾಗಿ ನೀಡಿತ್ತು. ಇದರಲ್ಲಿ, ‘ಪರೀಕ್ಷೆಯ ಪಾವಿತ್ರ್ಯತೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ’ ಎಂದು ಹೇಳಿತ್ತು.

ಹೀಗಾಗಿ ಬುಧವಾರ ರಾತ್ರಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಶಿಕ್ಷಣ ಸಚಿವಾಲಯ, ‘ಪರೀಕ್ಷೆಯ ಪಾವಿತ್ರ್ಯತೆ ಹಾಗೂ ಸಮಗ್ರತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಪರೀಕ್ಷೆ ರದ್ದುಗೊಳಿಸಿ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಹೊಸದಾಗಿ ಪರೀಕ್ಷೆ ನಡೆಸಲಾಗುತ್ತದೆ ಮತ್ತು ದಿನಾಂಕಗಳನ್ನು ಶೀಘ್ರದಲ್ಲೇ ತಿಳಿಸಲಾಗುತ್ತದೆ’ ಎಂದು ಹೇಳಿದೆ.

ನೀಟ್ ತನಿಖೆ:

ಇದೇ ವೇಳೆ, ನೀಟ್‌ ಪರೀಕ್ಷೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವಾಲಯ, ‘ಬಿಹಾರದ ಪಟನಾ ಕೇಂದ್ರದಲ್ಲಿ ಪರೀಕ್ಷೆಯ ನಿರ್ವಹಣೆಯಲ್ಲಿ ಕೆಲವು ಅಕ್ರಮಗಳ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಹಾರ ಪೊಲೀಸರಿಂದ ವಿವರವಾದ ವರದಿಯನ್ನು ಕೇಳಲಾಗಿದೆ. ಈ ವರದಿ ಬಂದ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಈ ವಿಷಯದಲ್ಲಿ ಯಾವುದೇ ವ್ಯಕ್ತಿ/ಸಂಸ್ಥೆ ಭಾಗಿಯಾಗಿರುವುದು ಕಂಡುಬಂದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ’ ಎಂದು ಸಚಿವಾಲಯ ಪುನರುಚ್ಚರಿಸಿದೆ.

ಪ್ರಿಯಾಂಕಾ ಕಿಡಿ:

ನೀಟ್‌ ಬಳಿಕ ನೆಟ್‌ನಲ್ಲೂ ಅಕ್ರಮ ಆರೋಪ ಕೇಳಿ ಬಂದಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ‘ಬಿಜೆಪಿ ಸರ್ಕಾರದ ಇನ್ನೊಂದು ನಿರ್ಲಕ್ಷ್ಯ ಬಯಲಾಗಿದೆ, ಶಿಕ್ಷಣ ಸಚಿವರು ಇದರ ಹೊಣೆ ಹೊರಬೇಕು’ ಎಂದು ಆಗ್ರಹಿಸಿದ್ದಾರೆ.

 

Share this article