ಬಿಹಾರದಲ್ಲಿ ವಿಶ್ವದ ಅತಿದೊಡ್ಡ ಗ್ರಾನೈಟ್‌ ಶಿವಲಿಂಗ

KannadaprabhaNewsNetwork |  
Published : Dec 03, 2025, 01:04 AM IST
ಶಿವಲಿಂಗ | Kannada Prabha

ಸಾರಾಂಶ

ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯ ವಿರಾಟ್ ರಾಮಾಯಣ ದೇವಸ್ಥಾನದಲ್ಲಿ ಬೃಹತ್ ಏಕಶಿಲೆಯ ಗ್ರಾನೈಟ್ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆದಿದೆ. 33 ಅಡಿ ಎತ್ತರ ಮತ್ತು 210 ಮೆಟ್ರಿಕ್ ಟನ್ ತೂಕದ ಈ ಶಿವಲಿಂಗವು ವಿಶ್ವದ ಅತಿದೊಡ್ಡ ಏಕಶಿಲೆಯ ಗ್ರಾನೈಟ್ ಶಿವಲಿಂಗವಾಗಲಿದೆ.

33 ಅಡಿ ಎತ್ತರದ ಬೃಹತ್‌ ಲಿಂಗಪಟನಾ: ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯ ವಿರಾಟ್ ರಾಮಾಯಣ ದೇವಸ್ಥಾನದಲ್ಲಿ ಬೃಹತ್ ಏಕಶಿಲೆಯ ಗ್ರಾನೈಟ್ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆದಿದೆ. 33 ಅಡಿ ಎತ್ತರ ಮತ್ತು 210 ಮೆಟ್ರಿಕ್ ಟನ್ ತೂಕದ ಈ ಶಿವಲಿಂಗವು ವಿಶ್ವದ ಅತಿದೊಡ್ಡ ಏಕಶಿಲೆಯ ಗ್ರಾನೈಟ್ ಶಿವಲಿಂಗವಾಗಲಿದೆ.

ತಮಿಳುನಾಡಿನ ಮಹಾಬಲಿಪುರಂ ಬಳಿಯ ಪಟ್ಟಿಕಾಡು ಪ್ರದೇಶದಲ್ಲಿ 10 ವರ್ಷ ಕಠಿಣ ಶ್ರಮ ಪಟ್ಟು ಒಂದೇ ಗ್ರಾನೈಟ್ ಕಲ್ಲಿನಿಂದ ಶಿವಲಿಂಗ ಕೆತ್ತಲಾಗಿದೆ. ದೊಡ್ಡ ಗಾತ್ರದ ಕಾರಣ, ಶಿವಲಿಂಗವನ್ನು 96 ಚಕ್ರಗಳ ಹೈಡ್ರಾಲಿಕ್ ಟ್ರೇಲರ್‌ನಲ್ಲಿ ಚಂಪಾರಣ್ಯಕ್ಕೆ ಕರೆದೊಯ್ಯಲಾಗಿದೆ. ಈ ಪ್ರಯಾಣವು 20-25 ದಿನ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಏತನ್ಮಧ್ಯೆ, ವಿರಾಟ್ ರಾಮಾಯಣ ದೇವಾಲಯವು 1,080 ಅಡಿ ಉದ್ದ ಮತ್ತು 540 ಅಡಿ ಅಗಲವಿರುತ್ತದೆ. ಇದನ್ನು ಪಟನಾದ ಮಹಾವೀರ ಮಂದಿರ ಟ್ರಸ್ಟ್ ನಿರ್ಮಿಸುತ್ತಿದ್ದು, 22 ದೇವಾಲಯಗಳು, 18 ಗೋಪುರ ಹೊಂದಿರುತ್ತದೆ.

==

ಬಾಂಗ್ಲಾ ಮಾಜಿ ಪ್ರಧಾನಿ ಜಿಯಾ ಆರೋಗ್ಯ ಗಂಭೀರ: ಬ್ರಿಟನ್‌ ವೈದ್ಯರ ಆಗಮನ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಮಂಗಳವಾರ ಬ್ರಿಟನ್‌ನಿಂದ ನುರಿತ ವೈದ್ಯರ ತಂಡ ಢಾಕಾಗೆ ಆಗಮಿಸಿದೆ. ಜೊತೆಗೆ ಜಿಯಾ ಅವರ ವೈದ್ಯಕೀಯ ತಂಡದೊಂದಿಗೆ ಸಮಾಲೋಚನೆ ನಡೆಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ನಡುವೆ ಬ್ರಿಟನ್‌ನಲ್ಲಿ ಸ್ವಯಂ ಗಡೀಪಾರಾಗಿದ್ದ ಪುತ್ರ ಕೂಡ ಬಾಂಗ್ಲಾಗೆ ಮರಳುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಎವರ್‌ಕೇರ್‌ ಹಾಸ್ಪತ್ರೆಯ ಎಝೆಡ್‌ಎಂ ಜಾಹೀದ್‌ ಹೊಸ್ಸೇನ್‌,‘ಬ್ರಿಟನ್‌ನ ನುರಿತ ವೈದ್ಯರ ತಂಡ ಆಗಮಿಸಿದೆ. ಭಾರತ, ಚೀನಾ, ಅಮೆರಿಕ, ಕತಾರ್‌, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದಿಂದಲೂ ವೈದ್ಯಕೀಯ ಸಹಾಯಹಸ್ತ ಬಂದಿದೆ ಎಂದು ತಿಳಿಸಿದರು.ನ.23ರಂದು ಶ್ವಾಸಕೋಶ ಮತ್ತು ಹೃದಯದ ಸೋಂಕಿನಿಂದಾಗಿ ಆಸ್ಪತ್ರೆಗೆ ಸೇರಿದ ಖಲೀದಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಭಾನುವಾರದಿಂದ ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

==

ಮೋದಿ ಮಾತಿಗೆ ಜಾಗತಿಕ ನಾಯಕರ ಲಕ್ಷ್ಯ: ಭಾಗ್ವತ್‌ ಹರ್ಷ

ಭಾರತದ ಶಕ್ತಿ ಪ್ರಕಟವಾಗಿದ್ದಕ್ಕೆ ಇದು ಸಾಧ್ಯ: ಬಣ್ಣನೆ

ಪಿಟಿಐ ಪುಣೆ‘ಇಂದು ಪ್ರಧಾನಿ ನರೇಂದ್ರ ಮೋದಿ ಮಾತಾಡುತ್ತಿದ್ದರೆ ಜಾಗತಿಕ ನಾಯಕರು ಲಕ್ಷ್ಯಗೊಟ್ಟು ಕೇಳುತ್ತಾರೆ. ಭಾರತದ ಶಕ್ತಿ ಪ್ರಕಟವಾಗುತ್ತಿರುವುದಕ್ಕೆ ಮತ್ತು ದೇಶ ತನ್ನ ಸೂಕ್ತ ಸ್ಥಾನವನ್ನು ಕಂಡುಕೊಳ್ಳುತ್ತಿರುವುದಕ್ಕೆ ಇದು ಸಾಧ್ಯವಾಗಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಶ್ಲಾಘಿಸಿದ್ದಾರೆ.

ಆರ್‌ಎಸ್ಎಸ್‌ ಶತಮಾನೋತ್ಸವದ ನಿಮಿತ್ತ ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿಯವರ ಮಾತುಗಳನ್ನು ಜಗತ್ತು ಯಾಕಷ್ಟು ಗಮನವಿಟ್ಟು ಕೇಳುತ್ತಿದೆ? ಏಕೆಂದರೆ, ಎಲ್ಲೆಲ್ಲಿ ಭಾರತದ ಶಕ್ತಿ ಪ್ರಕಟವಾಗಬೇಕಿತ್ತೋ ಅಲ್ಲೆಲ್ಲ ಅದು ಪ್ರಕಟವಾಗಲು ಪ್ರಾರಂಭಿಸಿದೆ. ಇದು ವಿಶ್ವದ ಗಮನವನ್ನು ಸೆಳೆದಿದೆ’ ಎಂದರು.

ಇದೇ ವೇಳೆ ಆರ್‌ಎಸ್‌ಎಸ್‌ ಶತಾಬ್ದಿ ಕುರಿತು ಉಲ್ಲೇಖಿಸಿದ ಅವರು, ‘ಯಾರೂ ಜಯಂತಿ ಅಥವಾ ಶತಮಾನೋತ್ಸವದ ಆಚರಣೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಕೆಲಸ ಮಾಡಬಾರದು. ಸಕಾಲದಲ್ಲಿ ತಮಗೆ ವಹಿಸಿದ ಕೆಲಸವನ್ನು ಪೂರ್ಣಗೊಳಿಸುವ ಗುರಿ ಹೊಂದಿರಬೇಕು. ಇದಕ್ಕಾಗಿ, ಧರ್ಮದಿಂದ ನಾವೆಲ್ಲ ಒಟ್ಟಿಗೆ ಹೆಜ್ಜೆ ಹಾಕಬೇಕು’ ಎಂದು ಕರೆ ನೀಡಿದರು.

==

ಐಐಟಿ ವಿದ್ಯಾರ್ಥಿಗಳಿಗೆ ₹2.8 ಕೋಟಿಗೂ ಅಧಿಕ ಸಂಬಳದ ನೌಕರಿ ಆಫರ್‌

ಪ್ರತಿಷ್ಠಿತ ಕಂಪನಿಗಳಿಂದ ಭರ್ಜರಿ ಪ್ಯಾಕೇಜ್

ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ) ಓದಿರುವ ವಿದ್ಯಾರ್ಥಿಗಳಿಗೆ ಭಾರೀ ಬೇಡಿಕೆ ಬಂದಿದ್ದು, ಡಾ ವಿನ್ಸಿ ಟ್ರೇಡಿಂಗ್, ಎನ್‌.ಕೆ. ಸೆಕ್ಯುರಿಟೀಸ್‌ನಂತಹ ಪ್ರತಿಷ್ಠಿತ ಕಂಪನಿಗಳು ವಾರ್ಷಿಕ 2.8 ಕೋಟಿ ರು.ಗಿಂತಲೂ ಅಧಿಕ ಪ್ಯಾಕೇಜ್ ನೀಡಿ ಉದ್ಯೋಗ ಕೊಡಲು ಮುಂದಾಗಿವೆ.

ಸೋಮವಾರದಿಂದ ಐಐಟಿಗಳಲ್ಲಿ ಕ್ಯಾಂಪಸ್‌ ಪ್ಲೇಸ್‌ಮೆಂಟ್ ಪ್ರಕ್ರಿಯೆ ಆರಂಭವಾಗಿದೆ. ಈ ವರ್ಷ ಡಚ್‌ ಕಂಪನಿಯಾಗಿರುವ ಡಾ ವಿನ್ಸಿ ಟ್ರೇಡಿಂಗ್ ಅತಿ ದೊಡ್ಡ ಮೊತ್ತದ (2.8 ಕೋಟಿ ರು.) ಆಫರ್‌ ನೀಡಿ, ದೆಹಲಿ, ಮುಂಬೈ, ಖರಗಪುರ ಐಐಟಿಗಳಿಂದ ಉದ್ಯೋಗಿಗಳನ್ನು ನಿಯೋಜಿಸಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಓಲಾ, ಎಟರ್ನಲ್, ಎನ್‌ವಿಡಿಯಾ, ಒರ್‍ಯಾಕಲ್ ಸೇರಿ ಹಲವು ಪ್ರತಿಷ್ಠಿತ ಕಂಪನಿಗಳು 30 ಲಕ್ಷ ರು.ಗಳಿಂದ ಹಿಡಿದು ಕೋಟಿ ರು.ಗೂ ಹೆಚ್ಚಿನ ಪ್ಯಾಕೇಜ್‌ಗಳವರೆಗೆ ಆಫರ್‌ ನೀಡಿವೆ ಎಂದು ಕಂಪನಿಗಳು ತಿಳಿಸಿವೆ.

==

ಬೆಟ್ಟಿಂಗ್‌ ಆ್ಯಪ್‌ಗಳ ಪರ ಪ್ರಚಾರ: ನಟಿ ನೇಹಾ ಶರ್ಮಾಗೆ ಇ.ಡಿ. ಬಿಸಿ

ನವದೆಹಲಿ: ‘1ಎಕ್ಸ್‌ಬೆಟ್‌’ ಬೆಟ್ಟಿಂಗ್‌ ಆ್ಯಪ್‌ನ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ಜಾರಿ ನಿರ್ದೇಶನಾಲಯ (ಇ.ಡಿ.), ಆ್ಯಪ್‌ ಪರ ಪ್ರಚಾರ ಮಾಡಿದ್ದಕ್ಕೆ ಮಂಗಳವಾರ ನಟಿ ನೇಹಾ ಶರ್ಮಾ ಅವರ ವಿಚಾರಣೆ ನಡೆಸಿದೆ. ಈ ವೇಳೆ ಪ್ರಚಾರಕ್ಕೆ ಪಡೆದ ಸಂಭಾವನೆ, ಇತರೆ ವ್ಯವಹಾರಗಳ ಕುರಿತು ಮಾಹಿತಿ ಪಡೆದಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಈಗಾಗಲೇ ಮಾಜಿ ಕ್ರಿಕೆಟಿಗರಾದ ಶಿಖರ್‌ ಧವನ್‌ ಮತ್ತು ಸುರೇಶ್‌ ರೈನಾ ಅವರ 11.14 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಜೊತೆಗೆ ಯುವರಾಜ್ ಸಿಂಗ್‌, ರಾಬಿನ್‌ ಉತ್ತಪ್ಪ, ನಟ ಸೋನು ಸೂದ್‌, ಊರ್ವಶಿ ರೌತೇಲಾ, ಮಿಮಿ ಚಕ್ರವರ್ತಿ ಮತ್ತು ಅಂಕುಶ್‌ ಹಜ್ರಾ ಅವರನ್ನು ವಿಚಾರಣೆ ನಡೆಸಿದೆ.

==

ಪಂಚಾಯಿತಿ ಚುನಾವಣೆಗೆ ಕೇರಳ ಬಿಜೆಪಿಯಿಂದ ಸೋನಿಯಾ ಗಾಂಧಿ ಸ್ಪರ್ಧೆ!

ಇಡುಕ್ಕಿ(ಕೇರಳ): ರಾಜ್ಯದಲ್ಲಿ ನಡೆಯಲಿರುವ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ ಮುನ್ನಾರ್‌ನಿಂದ ಸೋನಿಯಾ ಗಾಂಧಿ ಸ್ಪರ್ಧೆಗೆ ಇಳಿದಿದ್ದಾರೆ! ಅದೂ ಬಿಜೆಪಿಯಿಂದ!! ಗಾಬರಿ ಬೇಡ. ಇವರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಅಲ್ಲ, ಬದಲಿಗೆ ಬಿಜೆಪಿಯ ಸೋನಿಯಾ ಗಾಂಧಿ.

ಕಾಂಗ್ರೆಸ್‌ ನಾಯಕರಾದ ದುರೈ ರಾಜ್‌, ತಮ್ಮ ಮಗಳಿಗೆ ಸೋನಿಯಾ ಗಾಂಧಿ ಎಂದು ನಾಮಕರಣ ಮಾಡಿದ್ದರು. ಈ ಮೂಲಕ ತಮ್ಮ ಪಕ್ಷನಿಷ್ಠೆಯನ್ನು ಮೆರೆದಿದ್ದರು. ವಿಪರ್ಯಾಸವೆಂದರೆ ಈ ಸೋನಿಯಾ ಮುಂದೆ ವರಿಸಿದ್ದು ಪಂಚಾಯತ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿಜೆಪಿಯ ಸುಭಾಷ್‌ರನ್ನು. ಬಳಿಕ ಸೋನಿಯಾ ಕೂಡ ಬಿಜೆಪಿ ಸೇರಿಕೊಂಡಿದ್ದು, ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗ ಈ ಕ್ಷೇತ್ರದ ಅಭ್ಯರ್ಥಿಗಳ ಬಲಾಬಲಕ್ಕಿಂತ ಹೆಸರೇ ಕುತೂಹಲ ಮೂಡಿಸಿದೆ. ಸೋನಿಯಾ ವಿರುದ್ಧ ಕಾಂಗ್ರೆಸ್‌ನಿಂದ ಮಂಜುಳಾ ರಮೇಶ್‌ ಎಂಬಾಕೆ ಕಣದಲ್ಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ವಿಷ್ಣು ಆಚಾರಿ ಸೇರಿ ಹಲವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ