ಕೆನರಾ (ಸಿಂಡಿಕೇಟ್) ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ವೆಂಕಟೇಶ ಮಜ್ಜಿಗುಡ್ಡಾ ಅವರಿಂದ ನಡೆದ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳ ತಂಡ ಮುಂದಾಗಿದೆ.
ಅಂಕೋಲಾ:
ಇಲ್ಲಿನ ಕೆನರಾ (ಸಿಂಡಿಕೇಟ್) ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ವೆಂಕಟೇಶ ಮಜ್ಜಿಗುಡ್ಡಾ ಅವರಿಂದ ನಡೆದ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳ ತಂಡ ಮುಂದಾಗಿದೆ.ಸೋಮವಾರದಿಂದ ತನಿಖೆ ಕೈಗೊಳ್ಳಲು ಮುಂದಾಗಿರುವ ಸಿಐಡಿ ತಂಡ ಬ್ಯಾಂಕ್‌ಗೆ ಪ್ರಥಮವಾಗಿ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಿದೆ. ಫೆ. 21, 2024ರಂದು ದೂರು ನೀಡಿರುವ ಪ್ರಸ್ತುತ ಕೆನರಾ ಬ್ಯಾಂಕ್ ಮ್ಯಾನೇಜರ್ ಪ್ರತೀಕ್ಷಾ ಕಾರೆ ಅವರಿಂದ ಸಮಗ್ರ ವಿವರಣೆ ಪಡೆದು ವಿಚಾರಣೆಗೆ ಮುಂದಾಗಲಿದೆ.ಸಿಐಡಿಯ ಡಿವೈಎಸ್ಪಿ ಸೇರಿದಂತೆ 8 ಸಿಬ್ಬಂದಿಗಳ ತಂಡ ತನಿಖಾ ಕಾರ್ಯ ಕೈಗೊಳ್ಳಲಿದೆ ಎಂದು ಆಪ್ತ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. ಈ ಅಪರಾತಪರಾ ಪ್ರಕರಣದಲ್ಲಿ ಕೇವಲ ಮ್ಯಾನೇಜರ್ ಅಷ್ಟೇ ಪಾಲ್ಗೊಳ್ಳದೆ, ಇನ್ನು ಮೂವರು ಕಿರಿಯ ಸಿಬ್ಬಂದಿ ಸಹ ಭಾಗಿಯಾಗಿದ್ದಾರೆ ಎಂಬ ಆರೋಪವು ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಸಹ ಸಿಐಡಿ ತಂಡ ವಿಚಾರಣೆಗೆ ಒಳಪಡಿಸುತ್ತದೆ ಎಂಬ ಮಾಹಿತಿ ಗೊತ್ತಾಗಿದೆ. ಹಾಗೆ ವಂಚನೆಗೊಳಗಾದ 50 ಸ್ವ-ಸಹಾಯ ಸಂಘದ ಮಹಿಳೆಯರಿಂದಲೂ ಹೇಳಿಕೆ ಪಡೆದುಕೊಳ್ಳಲಿದೆ.ಬ್ಯಾಂಕಿನಲ್ಲಿ ಅಪರಾತಪರಾ ಮಾಡಿದ ಹಣವನ್ನು ತನ್ನ ಮಾವ, ಪತ್ನಿ ಹಾಗೂ ಇನ್ನಿತರ ಖಾತೆಗೆ ವರ್ಗಾವಣೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಪ್ರಕರಣವೇನು?ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡಿ, ಅದನ್ನು ಸಂಘದವರು ಮರು ಪಾವತಿ ಮಾಡಿದರೂ ಸಹ, ದಾಖಲೆಗಳಲ್ಲಿ ನಮೂದಿಸದೇ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾಗಿದ್ದ ವೆಂಕಟೇಶ ಮಜ್ಜಿಗಡ್ಡಾ ನಮಗೆ ಮೋಸ ಮಾಡಿದ್ದಾರೆ ಎಂದು ಸಂಘದ ಮಹಿಳೆಯರು ಇವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹಾಗೆ ಬ್ಯಾಂಕಿನ ಇತರೆ ಸಿಬ್ಬಂದಿಗಳ ಐಡಿ ಬಳಸಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ವಂಚಿಸಿರುವ ಬಗ್ಗೆ ದೂರು ಕೇಳಿ ಬಂದಿತ್ತು. ಇದರಲ್ಲಿ ಕೆನರಾ ಬ್ಯಾಂಕಿಗೆ ಸಂಬಂಧಿಸಿದಂತೆ ₹ 1.94 ಕೋಟಿ ದುರುಪಯೋಗಗೊಂಡಿದೆ ಎಂದು ಮ್ಯಾನೇಜರ್ ಪ್ರತೀಕ್ಷಾ ಕಾರೆ ಪೊಲೀಸ್ ದೂರು ದಾಖಲಿಸಿದ್ದರು. ಮಣಿಪಾಲದ ಕೆನರಾ ಬ್ಯಾಂಕ್‌ನಿಂದ ಆಗಮಿಸಿದ ತನಿಖಾ ತಂಡ ಇಲಾಖಾ ವಿಚಾರಣೆ ನಡೆಸಿತ್ತು. ಈ ವೇಳೆ ವೆಂಕಟೇಶ ಮಜ್ಜಿಗಡಾ ಬ್ಯಾಂಕಿನಲ್ಲಿ ಅವ್ಯವಹಾರ ಮಾಡಿರುವುದು ಸಾಬೀತಾದ ಹಿನ್ನಲೆ ಅವರ ಮೇಲೆ ಬ್ಯಾಂಕ್ ಕಾಯ್ದೆಯಡಿ ದೋಷಾರೋಪಣ ಪಟ್ಟಿಯನ್ನು ಕೆನರಾ ಬ್ಯಾಂಕಿನ ರಾಜ್ಯ ಮುಖ್ಯ ಅಧಿಕಾರಿಗಳಿಗೆ ಸಲ್ಲಿಸಿದ್ದರು.ವರದಿ ಸಂಪೂರ್ಣ ಅವಲೋಕಿಸಿದ ಆರ್‌ಬಿಐ ಮುಖ್ಯ ಅಧಿಕಾರಿ ವೆಂಕಟೇಶ ಮಜ್ಜಿಗಡ್ಡಾ ಅವರನ್ನು ಸೇವೆಯಿಂದಲೇ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದರು.
ಸಿಐಡಿಗೆ ಹಸ್ತಾಂತರಬ್ಯಾಂಕಿನಲ್ಲಿ ₹ 1.94 ಕೋಟಿ ಅವ್ಯವಹಾರವಾಗಿದ್ದರಿಂದ ಈ ಪ್ರಕರಣ ಅಂಕೋಲಾ ಪೊಲೀಸರ ಕೈ ತಪ್ಪಿ ಸಿಐಡಿ ವಿಭಾಗಕ್ಕೆ ಹಸ್ತಾಂತರವಾಗಿದೆ. ₹ 1 ಕೋಟಿ ಒಳಗೆ ಇದ್ದರೆ ಸ್ಥಳೀಯ ಪೊಲೀಸರೇ ತನಿಖೆ ನಡೆಸಲು ಸಾಧ್ಯವಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.