ಸಂಡೂರು: ತಾಲೂಕಿನ ಸ್ವಾಮಿಮಲೈ ಅರಣ್ಯ ವಲಯದಲ್ಲಿನ ದೇವದಾರಿ ಅರಣ್ಯ ಪ್ರದೇಶದಲ್ಲಿ 1000 ಹೆಕ್ಟೇರ್ ಪ್ರದೇಶದಲ್ಲಿ ಕೆಐಒಸಿಎಲ್ (ಕುದುರೆಮುಖ ಕಬ್ಬಿಣ ಅದಿರು ಕಂಪನಿ)ಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಅರಣ್ಯ ಪ್ರದೇಶದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.ಈ ಕಂಪನಿಗೆ ಅದಿರು ಸಾಗಾಣಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಅರಣ್ಯ ಪ್ರದೇಶದಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಸರ್ವೆಗೆ ಆಗಮಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ವಿವಿಧ ಸಂಘಟನೆಗಳ ಪ್ರತಿಭಟನಾ ಧರಣಿ ಹಿನ್ನೆಲೆಯಲ್ಲಿ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಿ ಮರಳಿದರು.
ಗಣಿಬಾಧಿತ ಪರಿಸರ ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ, ರೈತ ಸಂಘ, ಜನ ಸಂಗ್ರಾಮ ಪರಿಷತ್, ಕೆಆರ್‌ಎಸ್ ಸಮಿತಿ, ಎಸ್‌ಯುಸಿಐ, ಜನಾಂದೋಲನ ಮಹಾಮೈತ್ರಿ, ಚಾಗನೂರು ಸಿರಿವಾರ ಭೂ ಹೋರಾಟ ಸಮಿತಿ ಮುಂತಾದ ಸಂಘಟನೆಗಳ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಕರೂರು ಮಾಧವರೆಡ್ಡಿ, ಟಿ.ಎಂ. ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ಎಂ.ಎಲ್.ಕೆ. ನಾಯ್ಡು, ಕೆಬಿ ಮೌನೇಶ್, ಜಿ.ಕೆ. ನಾಗರಾಜ, ನೀಲಕಂಠ ದೇಸಾಯಿ, ಕಾಡಪ್ಪ, ಪರಮೇಶಿ, ಮಹಿಳಾ ಸಂಘಟನೆಯ ಡಿ. ನಾಗಲಕ್ಷ್ಮೀ, ರಾಮನಮಲೈನ ಗಂಗಮ್ಮ, ಅಂಚಿನಮನೆ ಗೌರಮ್ಮ, ಚನ್ನಮ್ಮ, ಮುದುಕುಲಪೆಂಟೆ ತಿಪ್ಪಮ್ಮ, ಧನುಂಜಯ, ಸಣ್ಣ ಗಾದೆಪ್ಪ, ಗುರುಮೂರ್ತಿ, ಬೆಣಕಲ್ ನರಸಿಂಹಪ್ಪ, ಅಂಚಿನಮನೆ ರಾಮ, ನಾಯ್ಕರ ನಾಗರಾಜ, ಕಾಶಪ್ಪ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನರು ಭಾಗವಹಿಸಿದ್ದರು.
ಕೆಐಒಸಿಎಲ್ ಕಂಪನಿಯ ಸಿಬ್ಬಂದಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಮೀವುಲ್ಲಾ, ಪ್ರಕಾಶ್, ಸಾದಿಕ್, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಗುರುಸ್ವಾಮಿ, ವೀರಾಂಜನೇಯ, ಜಡಿಯಪ್ಪ, ಸರ್ವೇ ಇಲಾಖೆಯ ಪ್ರಕಾಶ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.