ಕನ್ನಡಪ್ರಭ ವಾರ್ತೆ ಮಂಡ್ಯ
ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಮಂಡ್ಯ-ಮೇಲುಕೋಟೆ ರಸ್ತೆ ಅಭಿವೃದ್ಧಿಗೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿವಳ್ಳಿ ಗ್ರಾಮದಲ್ಲಿ ೧೨ ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮೈಸೂರು-ಬೆಂಗಳೂರು ಹೆದ್ದಾರಿ ರಸ್ತೆ ಮಾಡುವ ವೇಳೆ ಗಣಿ ಸಾಮಗ್ರಿಗಳನ್ನು ಟಿಪ್ಪರ್‌ಗಳ ಮೂಲಕ ಸಾಗಿಸಿದ ವೇಳೆ ಈ ರಸ್ತೆಯಲ್ಲಿ ಹಳ್ಳ-ಗುಂಡಿಗಳು ನಿರ್ಮಾಣವಾದವು. ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದಿದ್ದ ದಿಲೀಪ್ಪ ಬಿಲ್ಡ್‌ಕಾನ್ ಕಂಪನಿ ರಸ್ತೆಯನ್ನು ದುರಸ್ತಿಪಪಡಿಸಬೇಕಿತ್ತು. ಅವರು ರಸ್ತೆ ನಿರ್ಮಾಣ ಮಾಡದಿದ್ದರಿಂದ ಈ ಭಾಗದ ಸಾರ್ವಜನಿಕರು ಸಂಚಾರಕ್ಕೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿಪಡಿಸುವಂತೆ ಸಾರ್ವಜನಿಕರು ಪ್ರತಿದಿನ ಕರೆಗಳನ್ನು ಮಾಡುತ್ತಿದ್ದರು ಎಂದರು.
ರಸ್ತೆ ದುರಸ್ತಿ ಸಂಬಂಧ ಸರ್ಕಾರದ ಗಮನಸೆಳೆದಾಗ ಒಂದು ವರ್ಷದ ಹಿಂದೆ ಎರಡು ಕೋಟಿ ಅನುದಾನ ಬಿಡುಗಡೆ ಮಾಡಿತು. ಆದರೆ ೨ ಕೋಟಿ ರು. ಅನುದಾನ ಗುಂಡಿ ಮುಚ್ಚಲು ಸಾಲುವುದಿಲ್ಲವೆಂದು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಹೋರಾಟ ನಡೆಸಿದ್ದರಿಂದ ಹೆಚ್ಚುವರಿಯಾಗಿ ೫ ಕೋಟಿ ರು. ಹಣ ಬಿಡುಗಡೆಯಾಗಿದೆ ಎಂದರು.ತಾತ್ಕಾಲಿಕವಾಗಿ ಜನರ ಸುಗಮ ಸಂಚಾರಕ್ಕೆ ಮಂಡ್ಯದಿಂದ ಮೇಲುಕೋಟೆವರೆಗೆ ರಸ್ತೆ ಕಾಮಗಾರಿಯನ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಇಲ್ಲಿಗೆ ಕರೆತಂದು ರಸ್ತೆಯನ್ನು ತೋರಿಸಿ ನಾಲ್ಕು ಪಥದ ರಸ್ತೆಯನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಲಾಗುವುದು. ಆ ಕೆಲಸ ಇನ್ನೂ ಒಂದೆರಡು ವರ್ಷ ತಡವಾಗುವುದರಿಂದ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಬೊಮ್ಮೇಗೌಡರ ಕಾಲದಿಂದಲೂ ಎಚ್.ಡಿ.ಚೌಡಯ್ಯ ಹೀಗೆ ಹಲವಾರು ಮಂದಿ ಈ ಭಾಗದಲ್ಲಿ ರಾಜಕೀಯವಾಗಿ ಹೊರಹೊಮ್ಮಿದ್ದಾರೆ. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗೆಯೇ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರು ಅತ್ಯುತ್ತಮ ನಾಯಕರಾಗಿ ಬೆಳವಣಿಗೆ ಕಂಡು ಜನಪ್ರಿಯ ಶಾಸಕರಾಗಿದ್ದಾರೆ. ಯಾವುದೇ ಎಡರು-ತೊಡರುಗಳನ್ನು ಲೆಕ್ಕಿಸದೆ ಪ್ರಾಮಾಣಿಕವಾಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದು ಪ್ರಶಂಸಿಸಿದರು.ಶಿವಳ್ಳಿ ಗ್ರಾಪಂ ಅಧ್ಯಕ್ಷೆ ಉಮಾ, ಕಾಂಗ್ರೆಸ್ ಮುಖಂಡರಾದ ರವಿಗೌಡ, ಆತ್ಮಾನಂದ, ಮೈಸೂರು ಸಕ್ಕರೆಯ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮು, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಕೆ.ನಾಗರಾಜು, ರೈತ ಸಂಘದ ಮುಖಂಡ ಮರಿಚೆನ್ನೇಗೌಡ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್, ಚಂದ್ರು ಶಿವಳ್ಳಿ, ಕೀರ್ತಿ ಸಿಂಗ್ರಿಗೌಡ ಇತರರಿದ್ದರು.