ಯಲಬುರ್ಗಾ: ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಸಕ ಬಸವರಾಜ ರಾಯರಡ್ಡಿ ಹೊಸದಾಗಿ ೧೨ ವಸತಿ ನಿಲಯ ಮಂಜೂರು ಮಾಡಿಸಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಕುಕನೂರು ತಾಲೂಕಾಧ್ಯಕ್ಷ ಸಂಗಮೇಶ ಗುತ್ತಿ ಹೇಳಿದರು.
ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ೧೨ ವಸತಿ ನಿಲಯ ಮಂಜೂರಾಗಿದ್ದು, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕಾಲಾವಧಿಯಲ್ಲಿ ಒಟ್ಟು ೫೫ ಹಾಸ್ಟೆಲ್ ಕಾರ್ಯ ನಿರ್ವಹಿಸುತ್ತಿದ್ದು, ಅವು ಸ್ವಂತ ಕಟ್ಟಡ ಕೂಡ ಹೊಂದಿವೆ. ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ₹೧೯೦೦ ಭರಿಸಲಾಗುತ್ತಿದ್ದು, ಪ್ರತಿವರ್ಷ ಒಟ್ಟು ₹ ೧೫.೪೨ ಕೋಟಿ ಖರ್ಚು ಮಾಡಲಾಗುತ್ತಿದೆ. ಒಟ್ಟು ೬೭೦೦ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆಯುತ್ತಿದ್ದಾರೆ.ಇಡೀ ರಾಜ್ಯದಲ್ಲಿ ಇಷ್ಟೊಂದು ವಸತಿ ಸೌಲಭ್ಯವಿರುವ ಕ್ಷೇತ್ರ ಎಲ್ಲಿಯೂ ಇಲ್ಲ.ರಾಯರಡ್ಡಿ ಇಚ್ಛಾಶಕ್ತಿಯಿಂದ ಈ ಕಾರ್ಯ ಮಾಡಲಾಗಿದೆ ಎಂದರು.
ನಾಲ್ಕು ದಶಕಗಳಿಂದ ಆಗದಷ್ಟು ಕೆಲಸ ಕೇವಲ ಎರಡೂವರೆ ವರ್ಷದಲ್ಲಿ ಆಗಿವೆ. ಬಡ ವಿದ್ಯಾರ್ಥಿಗಳ ಜೀವನದ ಆಶಾಕಿರಣವಾಗಿ ರಾಯರಡ್ಡಿ ಅವರು ೨೦೦೦ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಒಂದೇ ವರ್ಷದಲ್ಲಿ ೧೮ ವಸತಿ ನಿಲಯ ಮಂಜೂರು ಮಾಡಿಸಿದ್ದು, ಇದು ಐತಿಹಾಸಿಕ ದಾಖಲೆಯಾಗಿದೆ. ಮಂಜೂರಾದ ವಸತಿ ನಿಲಯಗಳಿಗೆ ಕಟ್ಟಡ ಮತ್ತು ಹುದ್ದೆ ಕೂಡ ಸೃಷ್ಟಿಸಲಾಗಿದೆ. ಇದು ಬಡ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಎಂದರು.ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆಗಳ ವಸತಿ ನಿಲಯಗಳ ಸಂಖ್ಯೆ ಏರಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ತಳಕಲ್, ತಳಬಾಳ, ಪಿಜಿ ಸೆಂಟರ್, ಗುನ್ನಾಳ, ಬಿಎಸ್ಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ಮಂಜೂರಾಗಿದ್ದು, ಇದರ ಲಾಭ ಪಡೆಯಲಿದ್ದಾರೆ ಎಂದರು.
ತಹಸೀಲ್ದಾರ್ ಪ್ರಕಾಶ ನಾಶಿ ಮಾತನಾಡಿದರು.ಈ ಸಂದರ್ಭ ಕುಕನೂರು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಸಂತೋಷ ಪಾಟೀಲ್, ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್, ತಳಕಲ್ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ವಿರೂಪಾಕ್ಷಪ್ಪ ಬಾಗೋಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ, ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಡಾ. ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಹಂಪಯ್ಯಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಜಕ್ಕಲಿ, ಪುನೀತ ಕೊಪ್ಪಳ ಸೇರಿದಂತೆ ಮತ್ತಿತರರು ಇದ್ದರು.==