ಕನ್ನಡಪ್ರಭ ವಾರ್ತೆ ಕಲಬುರಗಿ
ಶುಕ್ರವಾರ ಇಲ್ಲಿನ ಕೆ.ಕೆ.ಆರ್.ಟಿ.ಬಿ. ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ 297 ಕೆಪಿಎಸ್ ಶಾಲೆ ಇದ್ದು, ಇದರ ಜೊತೆಗೆ ಈ ವರ್ಷ 500 ಶಾಲೆ ಆರಂಭಿಸಲಾಗುವುದು ಎಂದರು.
ದ್ವಿಭಾಷಾ ಬೋಧನೆ, ವಿಷಯ ಶಿಕ್ಷಕರ ಜೊತೆಗೆ ದೈಹಿಕ, ಸಂಗೀತ ಶಿಕ್ಷಕರು, ಉತ್ತಮ ಮೂಲಸೌಕರ್ಯ, ಶಾಲಾ ಮೈದಾನ ಪರಿಕಲ್ಪನೆ ಒಳಗೊಂಡಿರುವ ಕೆ.ಪಿ.ಎಸ್. ಶಾಲೆಗೆ ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ 3 ವರ್ಷದಲ್ಲಿ ಎರಡು ಗ್ರಾಮ ಪಂಚಾಯತಿಗಳಿಗೆ ತಲಾ ಒಂದರಂತೆ 3,000 ಕೆಪಿಎಸ್ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ದ್ವಿಭಾಷಾ ಬೋಧನೆಯಲ್ಲಿ ಮಕ್ಕಳು, ಪಾಲಕರಿಗೆ ಅವರ ಆಯ್ಕೆಯ ಭಾಷೆಯಲ್ಲಿಯೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.ರಾಜ್ಯದ್ಯಾಂತ ಇರುವ ಆದರ್ಶ ವಿದ್ಯಾಲಯದಲ್ಲಿ 11 ಮತ್ತು 12ನೇ ತರಗತಿ ಬೋಧನೆಗೆ ಈಗಾಗಲೆ ಆದೇಶ ಹೊರಡಿಸಿದೆ. ಗೃಹ ಜ್ಯೋತಿ ಯೋಜನೆಯಡಿ ಕಳೆದ ನವೆಂಬರ್ 1 ರಿಂದ ಶಾಲೆಗಳಿಗೆ ಉಚಿತ ವಿದ್ಯುತ್ ಘೋಷಣೆ ಪರಿಣಾಮ ಸ್ಮಾರ್ಟ್ ಕ್ಲಾಸ್ ನಡೆಯುತ್ತಿದ್ದು, ಗಣಕಯಂತ್ರಗಳು ಮಕ್ಕಳ ಉಪಯೋಗಕ್ಕೆ ಬಂದಿವೆ. ಇದಲ್ಲದೆ ಶಾಲೆಗಳಲ್ಲಿ ನಿರ್ವಹಣಾ ವೆಚ್ಚ 20 ರಿಂದ 40 ಸಾವಿರ ರೂ. ಗಳಿಗೆ ಅನುದಾನ ಹೆಚ್ಚಿಸಿದೆ ಎಂದರು.
10 ಸಾವಿರ ಶಿಕ್ಷಕರ ಭರ್ತಿಗೆ ಚಿಂತನೆ: ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಿ 14 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಂಡಿದ್ದು, ಇದರಲ್ಲಿ 12 ಸಾವಿರ ಜನರು ಈಗಾಗಲೆ ಶಾಲೆಗೆ ಹಾಜರಾಗಿದ್ದಾರೆ. 800-900 ಜನ ವಿವಿಧ ಕಾರಣದಿಂದ ಕೋರ್ಟ್ ಮೊರೆ ಹೋಗಿದ್ದು, ಆ ಸಮಸ್ಯೆ ಸಹ ಶೀಘ್ರ ಬಗೆಹರಿಯಲಿದೆ. 12 ಸಾವಿರ ಪೈಕಿ 3,900 ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗಿದೆ. 43 ಸಾವಿರ ಅತಿಥಿ ಶಿಕ್ಷಕರನ್ನು ಸಹ ಪಡೆದುಕೊಂಡಿದ್ದೇವೆ. ಕ.ಕ. ಭಾಗದಲ್ಲಿ ಕೆ.ಕೆಆರ್.ಡಿ.ಬಿ. ಮಂಡಳಿ 2,618 ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿದ್ದು ಸ್ವಾಗತಾರ್ಹ. ಆಗಾಗ ನಿವೃತ್ತ ಕಾರಣ ಶಿಕ್ಷಕರ ಕೊರತೆ ಹೆಚ್ಚಿರುವುದರಿಂದ, ಈ ವರ್ಷ ಇನ್ನು 10 ಸಾವಿರ ಶಿಕ್ಷಕರ ಭರ್ತಿಗೆ ಚಿಂತನೆ ನಡೆದಿದೆ.
1,975 ಮಾದರಿ ಶಾಲೆ ನಿರ್ಮಾಣ: ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, 2023-24 ಮತ್ತು 2024-25ನೇ ವರ್ಷ ಶೈಕ್ಷಣಿಕ ವರ್ಷವೆಂದು ಘೋಷಿಸಿ ಅಕ್ಷರ ಆವಿಷ್ಕಾರ ಯೋಜನೆಯಡಿ ಶಾಲೆಗಳ ಬಲವರ್ಧನೆಗೆ ಮಂಡಳಿ ಮುಂದಾಗಿದೆ. ಕಲ್ಯಾಣ ಪ್ರದೇಶದಲ್ಲಿ 9,247 ಶಾಲೆಗಳಿದ್ದು, ಇದರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ಮಾಡಲು 2023-24ನೇ ಸಾಲಿಗೆ 1,975 ಶಾಲೆಗಳನ್ನು ಈಗಾಗಲೆ ಗುರುತಿಸಲಾಗಿದೆ. ಮುಂದಿನ 5 ವರ್ಷದಲ್ಲಿ ಹಂತ ಹಂತವಾಗಿ ಪ್ರತಿ ವರ್ಷ 2,000 ರಂತೆ ಉಳಿದ ಶಾಲೆಗಳ ಬಲವರ್ಧನೆಗೆ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ. ಸುಂದರೇಶ ಬಾಬು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಕೆ.ಕೆ.ಆರ್.ಡಿ.ಬಿ. ಮಂಡಳಿ ಅಧೀನ ಕಾರ್ಯದರ್ಶಿ ದಯಾನಂದ ಪಾಟೀಲ ಇದ್ದರು.