ನಾಳೆ ಕೃಷಿವಿಜ್ಞಾನಗಳ ವಿವಿಯ 13ನೇ ಘಟಿಕೋತ್ಸವ: ಹನುಮಂತಪ್ಪ

KannadaprabhaNewsNetwork | Published : Feb 28, 2024 2:35 AM

ಸಾರಾಂಶ

ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವವನ್ನು ಫೆ.29 ಗುರುವಾರ ಬೆಳಗ್ಗೆ 11ಕ್ಕೆ ವಿವಿಯ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮಾರಂಭದಲ್ಲಿ 363 ಸ್ನಾತಕ ಪದವಿ, 127 ಸ್ನಾತಕೋತ್ತರ ಹಾಗೂ 26 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ

ರಾಯಚೂರು: ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವವನ್ನು ಫೆ.29 ಗುರುವಾರ ಬೆಳಗ್ಗೆ 11ಕ್ಕೆ ವಿವಿಯ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮಾರಂಭದಲ್ಲಿ 363 ಸ್ನಾತಕ ಪದವಿ, 127 ಸ್ನಾತಕೋತ್ತರ ಹಾಗೂ 26 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ಡಾ.ಎಂ.ಹನುಮಂತಪ್ಪ ತಿಳಿಸಿದರು.

ಸ್ಥಳೀಯ ವಿವಿ ಆವರಣದಲ್ಲಿರುವ ಅಂತರಾಷ್ಟ್ರೀಯ ವಸತಿ ಗೃಹದಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದ ಅಧ್ಯಕ್ಷತೆ ರಾಜ್ಯದ ರಾಜ್ಯಪಾಲ ಹಾಗೂ ವಿವಿ ಕುಲಾಧಿಪತಿ ಡಾ.ಥಾವರ್ ಚಂದ್‌ ಗೆಹ್ಲೋಟ್ ಅವರು ವಹಿಸಲಿದ್ದಾರೆ. ಸಹಕುಲಾಧಿಪತಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮುಖ್ಯಅತಿಥಿಯಾಗಿ ಆಗಮಿಸಲಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ತಾಂತ್ರಿಕತೆ ವಿಭಾಗದ ಉಪ ಮಹಾನಿರ್ದೇಶಕ ಡಾ.ಎಸ್.ಎನ್.ಝಾ ಅವರು ಘಟಿಕೋತ್ಸವದ ಭಾಷಣೆ ಮಾಡಲಿದ್ದಾರೆ. ಸಮಾರಂಭದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಪದವಿ ಪುರಸ್ಕೃತ ವಿದ್ಯಾರ್ಥಿಗಳು, ಗಣ್ಯರು, ಹಿತೈಷಿಗಳು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿರುವರು ಎಂದರು.

13ನೇ ಘಟಿಕೋತ್ಸವದಲ್ಲಿ 363 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಗಳನ್ನೂ, 127 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳನ್ನೂ ಹಾಗೂ 26 ವಿದ್ಯಾರ್ಥಿಗಳಿಗೆ ಡಾಕ್ಟರೇಟ್‌ ಪದವಿಗಳನ್ನೂ ಪ್ರದಾನ ಮಾಡಲಾಗುತ್ತಿದೆ. ಇವರಲ್ಲಿ ವಿದ್ಯಾರ್ಥಿನಿಯರು 144 ಸ್ನಾತಕ ಪದವಿಗಳನ್ನೂ, 67 ಸ್ನಾತಕೋತ್ತರ ಪದವಿಗಳನ್ನೂ ಹಾಗೂ 12 ಡಾಕ್ಟರೇಟ್ ಪದವಿಗಳನ್ನೂ ಹೊಂದುತ್ತಿದ್ದಾರೆ. ಸ್ನಾತಕ ಪದವಿಯಲ್ಲಿ 23 ಚಿನ್ನದ ಪದಕಗಳನ್ನೂ ಮತ್ತು 2 ಸ್ನಾತಕ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನೂ, ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕಗಳನ್ನೂ ಹಾಗೂ 13 ಚಿನ್ನದ ಪದಕಗಳನ್ನು ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೂ ರಾಜ್ಯಪಾಲರೂ ಪ್ರದಾನ ಮಾಡಲಿದ್ದಾರೆ ಎಂದು ವಿವರಿಸಿದರು.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ವಿವಿ, ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಿಷಯಗಳಲ್ಲಿ ಗುಣಮಟ್ಟದ ಶಿಕ್ಷಣ, ಸಮಗ್ರ ಕೃಷಿ ಹಾಗೂ ಉದ್ಯಮ ಅಭಿವೃದ್ಧಿಗೆ ಪೂರಕವಾದ ಸಂಶೋಧನೆ ಮತ್ತು ಸಂಶೋಧನೆಯ ಫಲಿತಾಂಶಗಳನ್ನು ರೈತ ಸಮುದಾಯಕ್ಕೆ ಒದಗಿಸುವುದಲ್ಲದೇ, ಅವುಗಳನ್ನು ಅಳವಡಿಸಲು ವಿಸ್ತರಣಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯವು 2008ರ ನ.22ರಂದು ಸ್ಥಾಪನೆಗೊಂಡು ಹದಿಮೂರು ವರ್ಷಗಳ ಸಾರ್ಥಕ ಸೇವೆಯನ್ನು ರೈತರ ಅಭ್ಯುದಯಕ್ಕಾಗಿ ಮುಡುಪಿಡುವುದರ ಜೊತೆಗೆ ಕೃಷಿ ಹಾಗೂ ಕೃಷಿ ಇಂಜಿನಿಯರಿಂಗ್‌ನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಶೈಕ್ಷಣಿಕ ಕಾರ್ಯಕ್ರಮಗಳ ಪ್ರಗತಿ ಮುಂದುವರೆದಿದೆ. ವಿದ್ಯಾರ್ಥಿಗಳನ್ನು ಮೂಲ ಕೃಷಿ ಹಾಗೂ ಸಂಬಂಧಿತ ಔದ್ಯೋಗಿಕ ಕ್ಷೇತ್ರಗಳಲ್ಲಿ ವೃತ್ತಿಪರರು, ಸೇವಾ ನಿರತರು, ಸಫಲ ಪ್ರಗತಿಪರ ರೈತರು, ಶಿಕ್ಷಣ ತಜ್ಞರು, ಸಂಶೋಧಕರು, ಉತ್ತಮ ಆಡಳಿತಾಧಿಕಾರಿಯಾಗಿರಲು ಸಾರ್ವಜನಿಕ ಹಾಗೂ ಖಾಸಗಿ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ನೆಲೆಗೊಳ್ಳಲು ರೂಪಿಸುವಲ್ಲಿ ವಿಶ್ವವಿದ್ಯಾಲಯವು ಕಾರ್ಯತತ್ಪರವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿವಿ ಕುಲಸಚಿವ ಡಾ.ಎಂ.ವೀರನಗೌಡ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ, ಆಡಳಿತಾಧಿಕಾರಿ ಡಾ.ಜಾಗೃತಿ ದೇಶಮಾನೆ, ಪ್ರಕಟಣಾ ಕೇಂದ್ರದ ಸಂಪಾದಕ ಡಾ.ಯು ಸತೀಶಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article