ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸಭೆ
ಅಲ್ಲದೆ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆ ರೀತಿಯಲ್ಲಿ ಮಕ್ಕಳ ದಾಖಲಾತಿ ಕುಸಿತವೂ ಸೇರಿ ಶಾಲಾ ಶಿಕ್ಷಣದ ಸಮಸ್ಯೆಗಳೂ ಗಂಭೀರವಾದವಾಗಿದ್ದು ಈ ಬಗ್ಗೆ ಸವಿವರವಾಗಿ ಚರ್ಚಿಸಲು ಒಂದು ದಿನ ವಿಶೇಷ ಕಾಲಾವಕಾಶ ನಿಗದಿಗೆ ವಿವಿಧ ಸದಸ್ಯರು ಮನವಿ ಮಾಡಿದ್ದು, ಇದಕ್ಕೆ ಸ್ಪೀಕರ್ ಸಮ್ಮತಿಸಿದರು.
ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಕಲಾಪ ವೇಳೆ ಮಾಜಿ ಶಿಕ್ಷಣ ಸಚಿವರೂ ಆದ ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್ ಅವರು ಕೇಳಿರುವ ‘ಶಿಕ್ಷಣ ಇಲಾಖೆಯ 10-15 ವರ್ಷಗಳ ಶೈಕ್ಷಣಿಕ ಮಾಹಿತಿ ವಿಶ್ಲೇಷಣಾ ವರದಿಗಳನ್ನು ಅವಲೋಕಿಸಿದಾಗ 15 ವರ್ಷಗಳಲ್ಲಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ 17 ಲಕ್ಷ ಕುಸಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ‘ಹೌದು ಬಂದಿದೆ’ ಎಂದು ಉತ್ತರ ನೀಡಿದ್ದಾರೆ.ಅಲ್ಲದೆ, ದಾಖಲಾತಿ ಕುಸಿತಕ್ಕೆ ಕಾರಣಗಳೇನು ಎಂಬ ಪ್ರಶ್ನೆಗೆ, ಆಂಗ್ಲ ಮಾಧ್ಯಮ ಶಿಕ್ಷಣ, ಕೇಂದ್ರೀಯ ಪಠ್ಯಕ್ರಮದತ್ತ ಪೋಷಕರ ಒಲವು, ಪೋಷಕರ/ವಿದ್ಯಾರ್ಥಿಗಳ ವಲಸೆ ಮತ್ತು ಹೆಚ್ಚು ಸಂಖ್ಯೆಯ ಖಾಸಗಿ ಶಾಲೆಗಳು ರಾಜ್ಯದಲ್ಲಿ ಸ್ಥಾಪನೆಯಾಗುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿರುವುದಕ್ಕೆ ಕಾರಣ ಎಂದು ಸಚಿವರು ಉತ್ತರ ನೀಡಿದ್ದಾರೆ.ಉಳಿದಂತೆ ದಾಖಲಾತಿ ಹೆಚ್ಚು ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತ ಪ್ರಶ್ನೆಗೆ, ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ವಿತರಣಾ ಸೌಲಭ್ಯಗಳ ಜೊತೆಗೆ ತಾವು ಅಧಿಕಾರಕ್ಕೆ ಬಂದ ಬಳಿಕ ಕೈಗೊಂಡಿರುವ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲೂ ಪ್ರತಿ 3 ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಚರ್ಚಿಸುವುದು, ಗ್ರಾಪಂಗೊಂದು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ ಅಲ್ಲಿ ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಒಂದೇ ಕಡೆ ಶಿಕ್ಷಣ ಒದಗಿಸುವ ಗುರಿ ಇದ್ದು, ಸದ್ಯ 900 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. 9500ಕ್ಕೂ ಹೆಚ್ಚು ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮವನ್ನೂ ಆರಂಭಿಸಿರುವುದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಕೈಗೊಂಡಿರುವ ಸುಧಾರಣಾ ಕ್ರಮಗಳು ಸೇರಿ ಅನೇಕ ವಿಚಾರಗಳನ್ನು ಉತ್ತರದಲ್ಲಿ ನೀಡಿದ್ದಾರೆ.