ಪ್ಲಾಸ್ಟಿಕ್‌ಗೆ ವಾರ್ಷಿಕ ೨೦ ಸಾವಿರ ಜಾನುವಾರುಗಳು ಬಲಿ: ಕೆ.ಟಿ.ಹನುಮಂತು ಕಳವಳ

KannadaprabhaNewsNetwork |  
Published : Jul 19, 2025, 01:00 AM IST
೧೮ಕೆಎಂಎನ್‌ಡಿ-೨ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ವತಿಯಿಂದ ಮಂಡ್ಯ ತಾಲೂಕಿನ ಕೆ. ಗೌಡಗೆರೆ ಗ್ರಾಮದಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತ ಪ್ರಪಂಚ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತ ಪ್ರಬಂಧ ಸ್ಫರ್ಧೆ ವಿಜೇತರಿಗೆ ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಪ್ಲಾಸ್ಟಿಕ್ ಇಡೀ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಜಾನುವಾರುಗಳು ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಿವೆ. ಜಲಚರ ಜೀವಿಗಳು ಸಹ ಪ್ಲಾಸ್ಟಿಕ್‌ನ್ನು ತಿಂದು ಲಕ್ಷಾಂತರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿವೆ. ಸಮುದ್ರದ ನೀರಿನ ಮೇಲೆ ತೆಲುವಂತಹ ಪ್ಲಾಸ್ಟಿಕ್‌ಅನ್ನು ಮೀನುಗಳೆಂದು ಭ್ರಮಿಸಿ ತಿನ್ನುವ ೫ ರಿಂದ ೬ ಲಕ್ಷ ಪಕ್ಷಿಗಳು ಸಹ ಪ್ರತಿ ವರ್ಷ ಮೃತಪಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ಲಾಸ್ಟಿಕ್ ಎಂಬ ಪೆಡಂಭೂತದಿಂದ ಪ್ರತಿ ವರ್ಷ ೨೦ ಸಾವಿರಕ್ಕೂ ಹೆಚ್ಚು ಜಾನುವಾರುಗಳು, ಲಕ್ಷಾಂತರ ಜೀವಿಗಳು ಬಲಿಯಾಗುತ್ತಿವೆ ಎಂದು ಸೌತ್ ಮಲ್ಟಿಪಲ್ ಕೌನ್ಸಿಲ್ ಅಲಯನ್ಸ್ ಆಫ್ ಇಂಟರ್‌ನ್ಯಾಷನಲ್ ಸಂಸ್ಥೆ ಉಪಾಧ್ಯಕ್ಷ ಕೆ.ಟಿ. ಹನುಮಂತು ಆತಂಕ ವ್ಯಕ್ತಪಡಿಸಿದರು.

ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ವತಿಯಿಂದ ತಾಲೂಕಿನ ಕೆ. ಗೌಡಗೆರೆ ಗ್ರಾಮದಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತ ಪ್ರಪಂಚ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತ ಪ್ರಬಂಧ ಸ್ಫರ್ಧೆ ವಿಜೇತರಿಗೆ ಅಭಿನಂದನೆ, ಗಿಡ ನೆಡುವ ಕಾರ್ಯಕ್ರಮ ಮತ್ತು ಬ್ಯಾಡ್‌ಸೆಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಡೀ ವಿಶ್ವವೇ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವಂತಹ ಸಂಕಲ್ಪ ಮಾಡಬೇಕು. ಹಾಗಾದಾಗ ಮಾತ್ರ ಪ್ಲಾಸ್ಟಿಕ್‌ನ್ನು ಭೂಮಿತಿಯಿಂದ ತೊಲಗಿಸಲು ಸಾಧ್ಯ. ರಾಷ್ಟ್ರದಲ್ಲಿ ಪ್ರಧಾನಿ ಮೋದಿಯವರು ೨೦೨೨ರಲ್ಲಿ ಏಕಬಳಕೆ ಪ್ಲಾಸ್ಟಿಕ್ ಉಪಯೋಗಿಸುವಂತಿಲ್ಲ ಎಂದು ನಿರ್ಬಂಧಿಸಿದ್ದರು. ಆದರೆ ಸಿಕ್ಕಿಂ ಎಂಬ ಸಣ್ಣ ರಾಜ್ಯ ೧೯೯೮ರಲ್ಲೇ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಮಾಡಿತ್ತು. ಆ ರಾಜ್ಯದ ನಾಲ್ಕೈದು ಗ್ರಾಮಗಳಲ್ಲಿ ಶೇ. ೧೦೦ರಷ್ಟು ಪ್ಲಾಸ್ಟಿಕ್ ಬಳಕೆ ಮಾಡುತ್ತಲೇ ಇಲ್ಲ ಎಂದು ತಿಳಿಸಿದರು.

ಪ್ಲಾಸ್ಟಿಕ್ ಇಡೀ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಜಾನುವಾರುಗಳು ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಿವೆ. ಜಲಚರ ಜೀವಿಗಳು ಸಹ ಪ್ಲಾಸ್ಟಿಕ್‌ನ್ನು ತಿಂದು ಲಕ್ಷಾಂತರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿವೆ. ಸಮುದ್ರದ ನೀರಿನ ಮೇಲೆ ತೆಲುವಂತಹ ಪ್ಲಾಸ್ಟಿಕ್‌ಅನ್ನು ಮೀನುಗಳೆಂದು ಭ್ರಮಿಸಿ ತಿನ್ನುವ ೫ ರಿಂದ ೬ ಲಕ್ಷ ಪಕ್ಷಿಗಳು ಸಹ ಪ್ರತಿ ವರ್ಷ ಮೃತಪಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್ ಎಷ್ಟೆಲ್ಲಾ ಅವಾಂತರ ಮಾಡುತ್ತಿವೆ ಎಂದರೆ ಸಾವಿರಾರು ವರ್ಷಗಳು ಹೋದರೂ ಕೊಳೆಯುವುದಿಲ್ಲ. ಮಣ್ಣು, ಗಾಳಿ, ನೀರಿನಲ್ಲೂ ಏನೂ ಮಾಡಲಾಗದು. ಬೆಂಕಿಯಲ್ಲಿ ಮಾತ್ರ ಬೇಯುತ್ತವೆ. ಆದರೆ ಇದು ಅತ್ಯಂತ ಅಪಾಯಕಾರಿ. ಇಡೀ ವಾತಾವರಣವನ್ನು ಕಲುಷಿತಗೊಳಿಸುತ್ತವೆ. ೧೦ ರಿಂದ ೧೫ ರೀತಿಯ ರಾಸಾಯನಿಕಗಳು ಎಲ್ಲ ಜೀವಿಗಳ ಮೇಲೂ ಹಾನಿಯುಂಟು ಮಾಡುತ್ತವೆ ಎಂದು ಎಚ್ಚರಿಸಿದರು.

ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಭೂಮಿಯಿಂದ ಹೊಡೆದೊಡಿಸಬೇಕು. ಇಡೀ ವಿಶ್ವವನ್ನೇ ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎಂಬುದು ನಮ್ಮ ಸಂಸ್ಥೆಯ ಸಂಕಲ್ಪ. ಹಾಗಾಗಿ ಮೊದಲು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಶಾಲಾ- ಕಾಲೇಜು ಹಂತಗಳಲ್ಲಿ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ ಎಂದು ಹೇಳಿದರು.

ಪ್ಲಾಸ್ಟಿಕ್‌ಅನ್ನು ಒಳ್ಳೆಯ ಉದ್ದೇಶ ಇಟ್ಟುಕೊಂಡು ಕಂಡುಹಿಡಿಯಲಾಯಿತು. ಆದರೆ ಇಂದು ವಿಶ್ವವನ್ನೇ ಕಾಡುತ್ತಿದೆ. ಎಲ್ಲೇ ಹೋದರೂ ಪ್ಲಾಸ್ಟಿಕ್. ಭಾರತದಲ್ಲಿ ಪ್ರತಿ ವರ್ಷ ೧೦ ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಂಸ್ಥೆಯ ೨ನೇ ಉಪ ಗೌರ್ನರ್ ಚಂದ್ರಶೇಖರ್ ಮಾತನಾಡಿ, ಲಯನ್ಸ್ ಸಂಸ್ಥೆಯಿಂದ ಪರಿಸರ ಸಂರಕ್ಷಣೆ, ಕ್ಯಾನ್ಸರ್ ಬಗ್ಗೆ ಜಾಗೃತಿ, ವೃದ್ಧಾಶ್ರಮ, ಅನಾಥಾಶ್ರಮಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಶಾಲೆಗಳಿಗೆ ಬ್ಯಾಂಡ್‌ಸೆಟ್ ನೀಡುವುದು. ಪ್ಲಾಸ್ಟಿಕ್ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ಕೇವಲ ಮೂವರಿಗೆ ಮಾತ್ರ ಬಹುಮಾನ ನೀಡಲಾಗುತ್ತಿದೆ. ಆದರೆ ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಇದರ ಪರಿಣಾಮಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಅಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಎಚ್.ಜೆ. ಸುರೇಶ್, ಜಿಲ್ಲಾ ರಾಯಭಾರಿ ಅಪ್ಪಾಜಿ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಡೇವಿಡ್, ಎಸ್‌ಡಿಎಂಸಿ ಅಧ್ಯಕ್ಷ ಸ್ವಾಮಿ, ಶಿಕ್ಷಕರಾದ ಜಯಚಂದ್ರ, ರಾಮಕೃಷ್ಣ ಇತರರಿದ್ದರು. ಇದೇ ವೇಳೆ ಗಿಡಗಳನ್ನು ನೆಡಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರನ್ನು ಸನ್ಮಾನಿಸಲಾಯಿತು.

PREV

Latest Stories

ಧರ್ಮಸ್ಥಳ ಗ್ರಾಮ ಕೇಸ್‌: ಇಬ್ಬರು ಐಪಿಎಸ್‌ಗಳು ಎಸ್‌ಐಟಿಯಿಂದ ಔಟ್‌?
ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ