ಸೋಮರಡ್ಡಿ ಅಳವಂಡಿ
ದಕ್ಷಿಣ ಭಾರತದ ಕುಂಭಮೇಳವೆಂಬ ಖ್ಯಾತಿಯ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ಜ.5ರಂದು ನಡೆಯುವ ಜಾತ್ರೆಯ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಲು 35 ಗ್ರಾಮಗಳಲ್ಲಿ 25 ಟನ್ ಮಾದಲಿ ತಯಾರಿಸಲಾಗುತ್ತಿದೆ.
ಗವಿಸಿದ್ಧೇಶ್ವರ ಗೆಳೆಯರ ಬಳಗದವರು ಕಳೆದ 18 ವರ್ಷಗಳಿಂದ ಶ್ರೀಮಠದ ಜಾತ್ರೆಯ ಮಹಾದಾಸೋಹದಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಾರಂಭದಿಂದಲೂ ದಾಖಲೆ ಪ್ರಮಾಣದ ಮಾದಲಿ ಮಾಡಿ ದಾಸೋಹಕ್ಕೆ ಅರ್ಪಣೆ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ 100 ಕ್ವಿಂಟಲ್ ಮಾದಲಿ ಮಾಡುವ ಮೂಲಕ ರಾಜ್ಯ ವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದ ಈ ತಂಡ ಕ್ರಮೇಣ ಅದರ ಪ್ರಮಾಣ ಹೆಚ್ಚು ಮಾಡುತ್ತಲೇ ಬಂದಿದ್ದು, ಈ ವರ್ಷ 100 ಕ್ವಿಂಟಲ್ ಗೋಧಿ ಮತ್ತು 125 ಕ್ವಿಂಟಲ್ ಬೆಲ್ಲ, ಪುಟಾಣಿ, ಕೊಬ್ಬರಿ, ಗಸಗಸೆ ಸೇರಿದಂತೆ ಬೇಕಾಗುವ ಪದಾರ್ಥ ಬಳಸಿ 25 ಟನ್ ಮಾದಲಿ ತಯಾರಿಸುತ್ತಿದ್ದಾರೆ.35 ಗ್ರಾಮಗಳ ಜನರು ಭಾಗಿ:
ಜಾತ್ರೆ ಮತ್ತು ದಾಸೋಹವೊಂದರಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾದಲಿ ಮಾಡುತ್ತಿರುವುದು ದಾಖಲೆಯೇ ಸರಿ. ನಾಡಿನ ಯಾವ ಮಠಗಳ ಪರಂಪರೆಯಲ್ಲಿಯೂ 25 ಟನ್ ಮಾದಲಿ ಮಾಡಿರುವ ಉದಾಹರಣೆ ಇಲ್ಲ. ಇಷ್ಟಾದರೂ ಸಹ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ನಡೆಯುವ ಮಹಾದಾಸೋಹದಲ್ಲಿನ ಲಕ್ಷಾಂತರ ಭಕ್ತರು ಪ್ರಸಾದ ಸೇವನೆ ಮಾಡುವುದರಿಂದ ಇದು ವಾರದಲ್ಲಿ ಖಾಲಿ ಆಗುತ್ತದೆ. ಉಳಿದಂತೆ ಬೇರೆ ಬೇರೆ ಸಿಹಿ ಪದಾರ್ಥ ನೀಡಲಾಗುತ್ತದೆ.