ಕನ್ನಡಪ್ರಭ ವಾರ್ತೆ ದಾಂಡೇಲಿ
ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ ಎರಡನೇ ವಾರದಲ್ಲಿ ಉದ್ಯಮನಗರಿ ದಾಂಡೇಲಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ದಾಂಡೇಲಿ ಹಾಗೂ ಅಂಕೋಲಾ ತಾಲೂಕಿನ ಕಸಾಪ ಅಧ್ಯಕ್ಷರು ತಮ್ಮ ತಾಲೂಕಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆತಿಥ್ಯ ನೀಡುವಂತೆ ಮನವಿ ಮಾಡಿದ್ದರು. ಸಭೆಯಲ್ಲಿ ಚರ್ಚೆ ನಡೆದು ಅಂತಿಮವಾಗಿ ದಾಂಡೇಲಿ ತಾಲೂಕಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ.
ದಂಡಕಾರಣ್ಯವೆಂದೇ ಭೂಪಟಲದಲ್ಲಿ ಗುರುತಿಸಲ್ಪಟ್ಟಿರುವ ದಾಂಡೇಲಿ ಉದ್ಯಮ, ಶೈಕ್ಷಣಿಕ ನಗರಿಯಾಗಿ, ಇಂದು ಪ್ರವಾಸೋದ್ಯಮ ನಗರಿಯಾಗಿ ವಿಶ್ವದ ಗಮನ ಸೆಳೆಯುತ್ತಿದೆ. ತನ್ನದೇ ಆದ ಸಾಮಾಜಿಕ, ಐತಿಹಾಸಿಕ, ಧಾರ್ಮಿಕ, ವೈಶಿಷ್ಟ್ಯತೆಗಳ ಜೊತೆಗೆ ಸಾಹಿತ್ಯಕ, ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿರುವ ದಾಂಡೇಲಿಯಲ್ಲಿ ಸುಮಾರು 14 ವರ್ಷಗಳ ನಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 2011ರಲ್ಲಿ ಮಾನವ್ಯ ಕವಿ ಎಂದೇ ಕರೆಯಲ್ಪಡುತ್ತಿದ್ದ ಡಾ. ಬಿ.ಎ. ಸನದಿಯವರ ಸರ್ವಾಧ್ಯಕ್ಷತೆಯಲ್ಲಿ ದಾಂಡೇಲಿಯಲ್ಲಿ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅದಕ್ಕೂ ಪೂರ್ವ 1996ರಲ್ಲಿ ಡಾ. ಕೆ.ಜಿ. ಶಾಸ್ತ್ರಿಯವರ ಸರ್ವಾಧ್ಯಕ್ಷತೆಯಲ್ಲಿ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿತ್ತು.ದಾಂಡೇಲಿಯಲ್ಲಿ ತಾಲೂಕು ಕಸಾಪ ಕಾರ್ಯಕಾರಿ ಸಮಿತಿಯ ಸಭೆ ಹಾಗೂ ಶಾಸಕರ ನೇತೃತ್ವದಲ್ಲಿ ಸ್ವಾಗತ ಸಮಿತಿ ಸಭೆ ನಡೆಸಿ, ಸ್ಥಳೀಯ ಸಾಹಿತಿಗಳು ಹಾಗೂ ಜನಪ್ರತಿನಿಧಿಗಳ, ಆಜೀವ ಸದಸ್ಯರ ಜೊತೆ ಸಮಾಲೋಚನೆ ನಡೆಸಿದ ನಂತರದಲ್ಲಿ ಸಮ್ಮೇಳನದ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
25ನೇ ವರ್ಷದ ಸಂಭ್ರಮಾಚರಣೆ:ರಾಜ್ಯದಲ್ಲಿಯೇ ಅತೀ ಹೆಚ್ಚು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಿದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದು. ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನಕ್ಕೆ 25ನೇ ವರ್ಷದ ಸಂಭ್ರಮ. ಜಿಲ್ಲಾ ಸಾಹಿತ್ಯ ಸಮ್ಮೇಳನ ಎರಡು ದಿನ ನಡೆಯುವುದು ವಾಡಿಕೆ. ಆದರೆ ಬೆಳ್ಳಿ ಹಬ್ಬದ ಈ ಸಡಗರದಲ್ಲಿ ನಡೆಯುತ್ತಿರುವ ಈ ಸಮ್ಮೇಳನವನ್ನು ಮೂರು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದ್ದು, ಮೂರನೆಯ ದಿನ 25 ನೇ ವರ್ಷದ ಸಂಭ್ರಮಾಚರಣೆ ನಡೆಯಲಿದೆ. ಜೊತೆಗೆ ಬೆಳ್ಳಿ ಹಬ್ಬದ ನೆನಪಲ್ಲಿ 25 ಪುಸ್ತಕಗಳ ಬಿಡುಗಡೆ, 25 ಜನ ವಿಶೇಷ ಸಾಧಕರಿಗೆ ಗೌರವ, ಇಲ್ಲಿಯವರೆಗೆ ಆಗಿರುವ 25 ಸಮ್ಮೇಳನಾಧ್ಯಕ್ಷರ ಪರಿಚಯ ಸೇರಿದಂತೆ ಹಲವು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಾಸರೆ ತಿಳಿಸಿದ್ದಾರೆ.
ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪಿ.ಆರ್. ನಾಯ್ಕ, ಜಾರ್ಜ್ ಫರ್ನಾಂಡಿಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆಹೊಸೂರ, ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಕಾರವಾರದ ರಾಮಾ ನಾಯ್ಕ, ಅಂಕೋಲಾದ ಗೋಪಾಲಕೃಷ್ಣ ನಾಯಕ, ಮುಂಡಗೋಡದ ವಸಂತ ಕೊಣಸಾಲಿ, ಸಿದ್ದಾಪುರದ ಚಂದ್ರಶೇಖರ ಕುಂಬ್ರಿಗದ್ದೆ, ದಾಂಡೇಲಿಯ ನಾರಾಯಣ ನಾಯ್ಕ, ಜೋಯಿಡಾದ ಪಾಂಡುರಂಗ ಪಟಗಾರ, ಕುಮಟಾದ ಪ್ರಮೋದ ನಾಯ್ಕ, ಭಟ್ಕಳದ ಗಂಗಾಧರ ನಾಯ್ಕ, ಹೊನ್ನಾವರದ ಎಸ್.ಎಚ್. ಗೌಡ, ಜಿಲ್ಲಾ ಪ್ರತಿನಿಧಿಗಳಾದ ಎಸ್.ಜಿ. ಬಿರಾದರ್, ಜಯಶೀಲ ಆಗೇರ, ಪಿ.ಎಂ. ಮುಕ್ರಿ, ಮುಂತಾದವರು ಉಪಸ್ಥಿತರಿದ್ದರು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.