ದೇವರ ಆಭರಣ ಹಾಗೂ ಹುಂಡಿ ಕಾಣಿಕೆ ಹಣ ಮತ್ತು ದೇವಸ್ಥಾನದ ಇನ್ನಿತರ ಸ್ವತ್ತು ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಭದ್ರಾವತಿ

ದೇವರ ಆಭರಣ ಹಾಗೂ ಹುಂಡಿ ಕಾಣಿಕೆ ಹಣ ಮತ್ತು ದೇವಸ್ಥಾನದ ಇನ್ನಿತರ ಸ್ವತ್ತು ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ದೊಣಬಘಟ್ಟ ನಿವಾಸಿ ವೆಂಕಟೇಶ ಅಲಿಯಾಸ್ ಕೆಮ್ಮಣ್ಣುಗುಂಡಿ(೫೮) ಮತ್ತು ಪರಶುರಾಮ(೨೦) ಈ ಇಬ್ಬರನ್ನು ಜ. ೨೧ರಂದು ಬಂಧಿಸಲಾಗಿದೆ. ಇವರಿಂದ ಅಂದಾಜು ೧೩,೦೦೦ ರು. ಮೌಲ್ಯದ ೧ ಗ್ರಾಂ ೩ ಮಿಲಿ ತೂಕದ ಬಂಗಾರದ ತಾಳಿ, ೮೧೬೦ ರು. ನಗದು ಹಣ ಹಾಗೂ ೬೦೦೦ ರು. ಮೌಲ್ಯದ ಡಿವಿಆರ್ ಬಾಕ್ಸ್ ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ: ಭದ್ರ ಕಾಲೋನಿಯಲ್ಲಿರುವ ಶ್ರೀ ರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜ.೧೪ರ ಸಂಕ್ರಾಂತಿ ಹಬ್ಬದಂದು ಕಳ್ಳತನವಾಗಿದ್ದು, ದೇವಸ್ಥಾನದ ಅರ್ಚಕರಾದ ಸೀತಾರಾಮ ಭಟ್ಟರು ದೇವಸ್ಥಾನದಲ್ಲಿ ಪೂಜೆ ಮುಗಿಸಿ ರಾತ್ರಿ ೮ ಗಂಟೆಗೆ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದು, ಮರುದಿನ ಬಾಗಿಲು ತೆಗೆಯಲು ಹೋದಾಗ ದೇವಸ್ಥಾನದ ಬೀಗ ಒಡೆದು ದೇವರ ಮೂರ್ತಿಯ ಮೇಲಿದ್ದ ಅಂದಾಜು ೧೨,೦೦೦ ರು. ಬೆಲೆ ಬಾಳುವ ಒಂದೂವರೆ ಗ್ರಾಂ ತೂಕದ ಬಂಗಾರದ ತಾಳಿ ಮತ್ತು ಅಂದಾಜು ೨೦,೦೦೦ ರು. ಬೆಲೆ ಬಾಳುವ ಸುಮಾರು ೨೦೦ ಗ್ರಾಂ ತೂಕದ ಬೆಳ್ಳಿ ಛತ್ರಿ, ಅಂದಾಜು ೧೦,೦೦೦ ರು. ಬೆಲೆ ಬಾಳುವ ತಲಾ ೫೦ ಗ್ರಾಂ ತೂಕದ ೨ ಬೆಳ್ಳಿ ಲೋಟಗಳನ್ನು ಮತ್ತು ದೇವಸ್ಥಾನಕ್ಕೆ ಅಳವಡಿಸಿದ್ದ ಸುಮಾರು ೬,೦೦೦ ರು. ಬೆಳೆ ಬಾಳುವ ಡಿವಿಆರ್ ಹಾಗೂ ದೇವಸ್ಥಾನದ ಹುಂಡಿಯನ್ನು ಒಡೆದು ಅದರಲ್ಲಿದ್ದ ಅಂದಾಜು ೧೦,೦೦೦ ರು. ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್‌ರವರು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಎ.ಜಿ ಕಾರಿಯಪ್ಪ ಹಾಗೂ ಬಿ. ರಮೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್‌ರವರ ಮೇಲ್ವಿಚಾರಣೆಯಲ್ಲಿ ವೃತ್ತ ನಿರೀಕ್ಷಕಿ ನಾಗಮ್ಮ, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಎಂ.ಪಿ ಸಿದ್ದಪ್ಪ ಮತ್ತು ಸಿಬ್ಬಂದಿಗಳಾದ ಆದರ್ಶ ಶೆಟ್ಟಿ, ತೇಜಕುಮಾರ, ಲೋಹಿತ್ ಹಾಗೂ ಶಿವಮೊಗ್ಗ ಜಿಲ್ಲಾ ಬೆರಳಚ್ಚು ತಜ್ಞರ ತಂಡ ಹಾಗೂ ತಾಂತ್ರಿಕ ವರ್ಗದ ಸಿಬ್ಬಂದಿಗಳಾದ ಇಂದ್ರೇಶ್, ಗುರು ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.