ಈ ಭಾಗದ ಜನರು ರೈಲ್ವೆ ಸೌಲಭ್ಯಗಳಿಂದ ಸಾಕಷ್ಟು ವಂಚಿತವಾಗಿರುವ ಕುರಿತು ಮನವರಿಕೆ ಮಾಡಿಕೊಟ್ಟರು.

ಬಳ್ಳಾರಿ: ಬಳ್ಳಾರಿಯಿಂದ ಗುಂತಕಲ್ ಗೆ ಹೋಗಿ ಬರಲು ದಿನವೊಂದಕ್ಕೆ ನಾಲ್ಕು ರೈಲುಗಳ ಓಡಾಟ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಮನವಿ ಮಾಡಿದೆ.

ಸಿಕಂದರಾಬಾದ್ ದಕ್ಷಿಣ ಮಧ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜಯ್ ಕುಮಾರ್ ಶ್ರೀವಾತ್ಸವ ಹಾಗೂ ಗುಂತಕಲ್ ರೈಲ್ವೆ ವಿಭಾಗದ ಮ್ಯಾನೇಜರ್ ಚಂದ್ರಶೇಖರ್ ಗುಪ್ತ ಅವರನ್ನು ಭೇಟಿ ಮಾಡಿದ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ಅವರ ನೇತೃತ್ವದ ನಿಯೋಗ, ಈ ಭಾಗದ ಜನರು ರೈಲ್ವೆ ಸೌಲಭ್ಯಗಳಿಂದ ಸಾಕಷ್ಟು ವಂಚಿತವಾಗಿರುವ ಕುರಿತು ಮನವರಿಕೆ ಮಾಡಿಕೊಟ್ಟರು.

ಗುಂತಕಲ್ ರೈಲ್ವೆ ನಿಲ್ದಾಣದಿಂದ ದೇಶದ ನಾನಾ ಭಾಗಗಳಿಗೆ ಸಂಚರಿಸಲು ಸಾಕಷ್ಟು ರೈಲುಗಳ ವ್ಯವಸ್ಥೆಯಿದೆ. ಆದರೆ, ಬಳ್ಳಾರಿ ಭಾಗದ ಜನರಿಗೆ ಗುಂತಕಲ್‌ನಿಂದ ದೇಶದ ನಾನಾ ಭಾಗಗಳಿಗೆ ಸಂಚರಿಸಲು ಬಳ್ಳಾರಿಯಿಂದ ಸಾಕಷ್ಟು ರೈಲು ಸೌಲಭ್ಯ ಇಲ್ಲ. ಹೀಗಾಗಿ ದಿನವೊಂದಕ್ಕೆ ನಾಲ್ಕು ರೈಲುಗಳ ಓಡಾಟದ ವ್ಯವಸ್ಥೆ ಕಲ್ಪಿಸಬೇಕು. ಕೊಲ್ಲಾಪುರ ಬೆಳಗಾವಿ ಮನುಗೂರು ದಿನನಿತ್ಯದ ಎಕ್ಸ್‌ಪ್ರೆಸ್ ರೈಲು ಪುನರ್ ಆರಂಭಿಸಬೇಕು. ಕೇಂದ್ರ ಸರ್ಕಾರದ ರೈಲ್ವೆ ಬಜೆಟ್‌ನಲ್ಲಿ ಈ ರೈಲು ಮಂಜೂರಾಗಿದ್ದು, ಈ ರೈಲು ನಿಲ್ಲಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ನಿಯೋಗದ ಮುಖಂಡರು ತಿಳಿಸಿದರು.

ಬೆಳಗಾವಿ ಮುನಗೂರು ಎಕ್ಸ್‌ಪ್ರೆಸ್ ರೈಲು ಆರಂಭಿಸುವ ಕುರಿತು ಎರಡು ಸಾರಿ ಪತ್ರ ಬರೆದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಹೇಳಿದರಲ್ಲದೆ, ಕೂಡಲೇ ಈ ರೈಲನ್ನು ಹಿಂದೆ ನಿಗದಿಪಡಿಸಿದ ಸಮಯದ ಪ್ರಕಾರ ಓಡಾಟ ಆರಂಭಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬಳ್ಳಾರಿ ಹಗರಿ ಮೂಲಕ ಆದೋನಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸಲು ಆಲೂರು ಮಾರ್ಗವಾಗಿ ನೂತನ ಬ್ರಾಡ್‌ಗೇಜ್‌ ರೈಲು ಮಾರ್ಗ ಆರಂಭವಾಗಬೇಕು. ಪ್ರಸ್ತುತ ಗುಂತಕಲ್ ರೈಲ್ವೆ ನಿಲ್ದಾಣದ ಮೂಲಕ ಮುಂಬೈ- ಹೈದರಾಬಾದ್ -ವಾರಾಣಸಿಗೆ ಬಳ್ಳಾರಿ ಭಾಗದ ಜನರು ರೈಲಿನಲ್ಲಿ ಪ್ರಯಾಣಿಸಲು ಗುಂತಕಲ್ ಮೂಲಕವೇ ಸಂಪರ್ಕ ಇರುತ್ತದೆ. ಗುಂತಕಲ್ ರೈಲ್ವೆ ನಿಲ್ದಾಣಕ್ಕೆ ತಲುಪಿದ ವಾರಾಣಸಿ ರೈಲನ್ನು ಅರ್ಧ ಗಂಟೆ ವರೆಗೆ ನಿಲುಗಡೆ ಮಾಡಿ ಇಂಜಿನ್ ರಿವರ್ಸ್ ಮಾಡಿ ಸಂಚರಿಸುವ ವ್ಯವಸ್ಥೆ ಸದ್ಯಕ್ಕೆ ಇರುತ್ತದೆ. ಬಳ್ಳಾರಿಯಿಂದ ನೇರವಾಗಿ ಆದೋನಿಗೆ ನೂತನ ರೈಲ್ವೆ ಮಾರ್ಗ ರಚನೆ ಮಾಡುವುದರಿಂದ ಎಪ್ಪತ್ತು ಕಿಲೋಮೀಟರ್‌ ಅಂತರ ಕಡಿಮೆ ಆಗುವ ಜತೆಗೆ ಪ್ರಯಾಣದ ಸಮಯ ಒಂದು ಗಂಟೆ ಕಡಿಮೆಯಾಗುತ್ತದೆ ಎಂದು ವಿವರಿಸಿದರು. ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ಪ್ರಧಾನಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ರೈಲ್ವೆ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದರು. ಕ್ರಿಯಾ ಸಮಿತಿಯ ಎಚ್.ಕೆ. ಗೌರಿಶಂಕರ್ ಮತ್ತಿತರಿದ್ದರು.

ಬಳ್ಳಾರಿ ಜನರಿಗೆ ರೈಲ್ವೆ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ನೇತೃತ್ವದ ನಿಯೋಗ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.