ಜಿಲ್ಲೆಯಲ್ಲಿ 37 ಹೊಸ ಮತಗಟ್ಟೆ ಸ್ಥಾಪನೆ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

KannadaprabhaNewsNetwork |  
Published : Sep 03, 2026, 02:30 AM IST
ಪೋಟೊ2.2ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ  ಮಾತನಾಡಿದರು. | Kannada Prabha

ಸಾರಾಂಶ

ವಿಶೇಷ ಸಮಗ್ರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿಯಲ್ಲಿನ ಮತದಾರರ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಯಲ್ಲಿ 37 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು.

ಕೊಪ್ಪಳ: ವಿಶೇಷ ಸಮಗ್ರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿಯಲ್ಲಿನ ಮತದಾರರ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಯಲ್ಲಿ 37 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

1200ಕ್ಕೂ ಹೆಚ್ಚು ಮತದಾರರಿರುವ ಪ್ರದೇಶಗಳಲ್ಲಿ ಸುಲಭ ಮತದಾನಕ್ಕೆ ಅನುಕೂಲವಾಗುವಂತೆ ಕುಷ್ಟಗಿ ಕ್ಷೇತ್ರದಲ್ಲಿ 14, ಕನಕಗಿರಿ 11, ಗಂಗಾವತಿ 5, ಯಲಬುರ್ಗಾ 3 ಹಾಗೂ ಕೊಪ್ಪಳ ಕ್ಷೇತ್ರದಲ್ಲಿ 4 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆ 1,315ರಿಂದ 1,352ಕ್ಕೆ ಏರಿಕೆಯಾಗಿದೆ. ಹೊಸ ಮತಗಟ್ಟೆಗಳಿಗೆ ಬೂತ್‌ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದ್ದು, ರಾಜಕೀಯ ಪಕ್ಷಗಳು ಬೂತ್‌ ಮಟ್ಟದ ಏಜೆಂಟರನ್ನು ನೇಮಿಸಬೇಕು ಎಂದರು.

ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ 5,19,142 ಪುರುಷರು, 5,22,189 ಮಹಿಳೆಯರು ಹಾಗೂ 57 ತೃತೀಯ ಲಿಂಗಿಗಳು ಸೇರಿ ಒಟ್ಟು 10,41,388 ಮತದಾರರಿದ್ದಾರೆ.

ಮತದಾರರ ಮ್ಯಾಪಿಂಗ್‌ನಲ್ಲಿ ವ್ಯತ್ಯಾಸ ಕಂಡುಬಂದಿರುವ 14,401 ಮತದಾರರಿಗೆ ನೋಟಿಸ್ ನೀಡಲಾಗುವುದು. ಸಂಬಂಧಿಸಿದವರು ಅಗತ್ಯ ದಾಖಲೆ ಸಲ್ಲಿಸಿ ವಿಚಾರಣೆಗೆ ಹಾಜರಾಗಬಹುದು ಎಂದು ತಿಳಿಸಿದರು.

ಸೆ.19 ಮತ್ತು 20ರಂದು ವಿಶೇಷ ಮತದಾರರ ನೋಂದಣಿ ಅಭಿಯಾನ ನಡೆಯಲಿದೆ. ಸೆ. 23ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಹೊಸ ಮತದಾರರು ನಮೂನೆ-6, ಹೆಸರು ತೆಗೆದುಹಾಕಲು ನಮೂನೆ-7 ಹಾಗೂ ತಿದ್ದುಪಡಿ ಅಥವಾ ಸ್ಥಳಾಂತರಕ್ಕೆ ನಮೂನೆ-8 ಸಲ್ಲಿಸಬಹುದು. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

ಸಭೆಯಲ್ಲಿ ಚುನಾವಣಾ ತಹಸೀಲ್ದಾರ್ ರವಿ ವಸ್ತ್ರದ, ಚುನಾವಣಾ ಶಾಖೆಯ ನಾಗರಾಜ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಜು ಬಾಕಳೆ, ಕೆ.ಎಸ್. ಮೈಲಾರಪ್ಪ, ಮಹಮ್ಮದ್ ಪಾಷಾ, ಕನಕಪ್ಪ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರುಕಟ್ಟೆ ಸ್ಥಳಾಂತರಿಸಲು ಆಗ್ರಹಿಸಿ ಮನವಿ
ಕ್ರೀಡೆಯಿಂದ ಶಿಸ್ತು, ನಾಯಕತ್ವ ಗುಣ ವೃದ್ಧಿ; ಬಿಇಒ ದಯಾನಂದ