ಮೃತ ಗೃಹಲಕ್ಷ್ಮಿ ಖಾತೆಗೆ ಹಣ: ನೋಟಿಸ್‌ ಗೆ ಸೂಚನೆ

KannadaprabhaNewsNetwork |  
Published : Sep 03, 2026, 02:30 AM IST
ಪೋಟೊ2ಕೆಎಸಟಿ1ಕುಷ್ಟಗಿ ಪಟ್ಟಣದ ತಾಲೂಕು ಪಂಚಾಯತಿಯಲ್ಲಿ ನಡೆದ ಗ್ಯಾರಂಟಿ ಸಮಿತಿಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು. | Kannada Prabha

ಸಾರಾಂಶ

ಮೃತಪಟ್ಟರೂ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮೃತಪಟ್ಟ ಫಲಾನುಭವಿಗಳ ಮಾಹಿತಿಯನ್ನು ಕುಟುಂಬಸ್ಥರು ಇಲಾಖೆಗೆ ನೀಡದಿದ್ದರೆ, ವಾರಸುದಾರರಿಗೆ ನೋಟಿಸ್ ಜಾರಿ ಮಾಡಿ ಬಾಕಿ ಹಣ ವಾಪಸ್ ಪಡೆಯಬೇಕು ಎಂದು ಸೂಚಿಸಲಾಯಿತು.

ಕುಷ್ಟಗಿ: ಮೃತಪಟ್ಟರೂ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮೃತಪಟ್ಟ ಫಲಾನುಭವಿಗಳ ಮಾಹಿತಿಯನ್ನು ಕುಟುಂಬಸ್ಥರು ಇಲಾಖೆಗೆ ನೀಡದಿದ್ದರೆ, ವಾರಸುದಾರರಿಗೆ ನೋಟಿಸ್ ಜಾರಿ ಮಾಡಿ ಬಾಕಿ ಹಣ ವಾಪಸ್ ಪಡೆಯಬೇಕು ಎಂದು ಸೂಚಿಸಲಾಯಿತು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಸಿಡಿಪಿಒ ಯಲ್ಲಮ್ಮ ಹಂಡಿ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ 1,358 ಗೃಹಲಕ್ಷ್ಮೀ ಫಲಾನುಭವಿಗಳು ಮೃತಪಟ್ಟಿರುವುದು ಪತ್ತೆಯಾಗಿದೆ. ಆದರೆ, ಕುಟುಂಬಸ್ಥರು ಮಾಹಿತಿಯನ್ನು ಇಲಾಖೆಗೆ ನೀಡದಿರುವುದು ಸಮಸ್ಯೆಯಾಗಿದೆ. ಕುಟುಂಬಸ್ಥರ ಮನವೊಲಿಸಿ ಮಾಹಿತಿ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ತಾಪಂ ಇಒ ಅಮರೇಶ ಮಾತನಾಡಿ, ಮೃತಪಟ್ಟ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಯಲ್ಲಿದ್ದ ₹18.44 ಲಕ್ಷ ಈಗಾಗಲೇ ಸರ್ಕಾರಕ್ಕೆ ಮರುಪಾವತಿಯಾಗಿದೆ. ಇನ್ನೂ ₹31 ಲಕ್ಷ ಬಾಕಿ ಇದೆ. ಬಾಕಿ ಹಣ ಪಾವತಿಸದಿದ್ದರೆ ಸಂಬಂಧಿಸಿದ ವಾರಸುದಾರರಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಡಿಪೋ ಮ್ಯಾನೇಜರ್ ಶಿವಶಂಕರಗೌಡ ಪಾಟೀಲ ಮಾತನಾಡಿ, ಶೌಚಾಲಯ ನಿರ್ವಹಣೆಗೆ ಡಿಪೋ ಮಟ್ಟದಲ್ಲಿ ಟೆಂಡರ್ ಕರೆಯಬೇಕಿದೆ. ಬಸ್ ನಿಲ್ದಾಣದಲ್ಲಿನ ಕಸವನ್ನು ಪುರಸಭೆ ಸಿಬ್ಬಂದಿ ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಅನ್ಯ ವ್ಯಕ್ತಿಗಳೂ ಕಸ ಹಾಕುತ್ತಿರುವುದರಿಂದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದರು.

ಇಒ ಅಮರೇಶ ಮಾತನಾಡಿ, ಸಿಸಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರಿಗೆ ದಂಡ ವಿಧಿಸಬೇಕು. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡಬೇಕು. ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಗಡಚಿಂತಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು. ಗ್ರಾಮಕ್ಕೆ ರೂಟ್ ಹಾಗೂ ರಸ್ತೆ ಸೌಲಭ್ಯವಿದ್ದರೂ ಬಸ್ ಸಂಚಾರವಿಲ್ಲ. ಗ್ರಾಮಸ್ಥರ ಅನುಕೂಲಕ್ಕಾಗಿ ಬಸ್ ಸೇವೆ ಆರಂಭಿಸಬೇಕು ಎಂದು ಸಮಿತಿ ಸದಸ್ಯ ಯಮನೂರಪ್ಪ ಅಬ್ಬಿಗೇರಿ ಒತ್ತಾಯಿಸಿದರು.

ಮೂರು ವರ್ಷದಿಂದ ಸಮಸ್ಯೆ:

ಹನುಮಸಾಗರ ಬಸ್ ನಿಲ್ದಾಣದ ಶೌಚಾಲಯ ಸ್ವಚ್ಛತೆ ಇಲ್ಲ. ನೀರು ಹಾಗೂ ಸಿಸಿ ಕ್ಯಾಮೆರಾ ವ್ಯವಸ್ಥೆಯೂ ಇಲ್ಲ. ಕಳೆದ ಮೂರು ವರ್ಷಗಳಿಂದ ಸಮಸ್ಯೆ ಹೇಳುತ್ತಿದ್ದರೂ ಇದುವರೆಗೆ ಪರಿಹಾರವಾಗಿಲ್ಲ ಎಂದು ಸಮಿತಿ ಸದಸ್ಯೆ ಶೋಭಾ ಪುರ್ತಗೇರಿ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರಿಗೆ ಜಾಗವಿಲ್ಲ

ದೋಟಿಹಾಳ ಬಸ್ ನಿಲ್ದಾಣದ ಎದುರುಗಡೆಯಿರುವ ಅಂಗಡಿಗಳಿಂದ ನಿಲ್ದಾಣ ಗಲೀಜಾಗುತ್ತಿದೆ. ಮಹಿಳೆಯರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ಇದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಅಂಗಡಿಗಳನ್ನು ತೆರವುಗೊಳಿಸಲು ಗ್ರಾಪಂಗೆ ನಿರ್ದೇಶನ ನೀಡಬೇಕು ಎಂದು ಸಮಿತಿ ಸದಸ್ಯ ಬಾಳಪ್ಪ ಅರಳಿಕಟ್ಟಿ ಆಗ್ರಹಿಸಿದರು.

1.54 ಲಕ್ಷ ಇ-ಕೆವೈಸಿ ಬಾಕಿ

ಆಹಾರ ಇಲಾಖೆಯ ಶಿರಸ್ತೆದಾರ ರಮೇಶ ತಾಳಕೇರಿ ಮಾತನಾಡಿ, ಆಹಾರ ಇಲಾಖೆಯ ಸೇವೆಗಳಿಗೆ ಸರ್ವರ್ ಸಮಸ್ಯೆ ಅಡ್ಡಿಯಾಗುತ್ತಿದೆ. ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಸೇವೆಗಳಲ್ಲಿ ವಿಳಂಬವಾಗುತ್ತಿದೆ. ಸಮಸ್ಯೆ ಹಿನ್ನೆಲೆಯಲ್ಲಿ ಬೆಳಗ್ಗೆ ಹಾಗೂ ರಾತ್ರಿ ವೇಳೆಯಲ್ಲಿಯೂ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.

ಕುಷ್ಟಗಿ ತಾಲೂಕಿನಲ್ಲಿ 1.54 ಲಕ್ಷ ಇ-ಕೆವೈಸಿ ಬಾಕಿ ಇದೆ. ನ್ಯಾಯಬೆಲೆ ಅಂಗಡಿ ಅಥವಾ ಗ್ರಾಮ ಒನ್ ಕೇಂದ್ರದ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ಪಾವತಿಯಾಗದಿರುವ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹಿಬೂಬಿ ಕುರಡಗೇರಿ ಒತ್ತಾಯಿಸಿದರು. ಈ ಕುರಿತು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ರಮೇಶ ತಾಳಕೇರಿ ತಿಳಿಸಿದರು.

ಜೆಸ್ಕಾಂ ಎಇಇ ಕೆಂಚಪ್ಪ ಬಾವಿಮನಿ ಹಾಗೂ ಯುವನಿಧಿ ಅಧಿಕಾರಿ ಸಂಗಮೇಶ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ‌ಜಿಲ್ಲಾ ಉಪಾಧ್ಯಕ್ಷ ಅಮರೇಶ ಗಾಂಜಿ, ತಾಲೂಕು ಸಮಿತಿಯ ಸದಸ್ಯರು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಪಂ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆಯಾಗುತ್ತಿದ್ದು, ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು. ಅಧಿಕಾರಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಜನರಿಗೆ ಅಗತ್ಯ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು ಎಂದು ತಾಪಂ ಇಒ ಅಮರೇಶ ಹೇಳಿದರು.

400 ಹೊಸ ಬಸ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಕುಷ್ಟಗಿ ತಾಲೂಕಿಗೂ ಹೆಚ್ಚಿನ ಬಸ್‌ಗಳ ಅಗತ್ಯವಿದ್ದು, ಡಿಪೋ ಮ್ಯಾನೇಜರ್ ಶಿವಶಂಕರಗೌಡ ಪಾಟೀಲ ಅವರು ಹೊಸ ಬಸ್‌ಗಳನ್ನು ಒದಗಿಸುವಂತೆ ಮನವಿಯನ್ನು ಮೇಲಧಿಕಾರಿಗಳಿಗೆ ನೀಡಬೇಕು ಎಂದು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಫಾರೂಕ್ ಡಾಲಾಯತ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರುಕಟ್ಟೆ ಸ್ಥಳಾಂತರಿಸಲು ಆಗ್ರಹಿಸಿ ಮನವಿ
ಕ್ರೀಡೆಯಿಂದ ಶಿಸ್ತು, ನಾಯಕತ್ವ ಗುಣ ವೃದ್ಧಿ; ಬಿಇಒ ದಯಾನಂದ