ಬಳ್ಳಾರಿಯಲ್ಲಿ ದಾಖಲೆ ರಹಿತ 5.60 ಕೋಟಿ ರು. ನಗದು ವಶ! ನಗದು, ಚಿನ್ನ-ಬೆಳ್ಳಿ ಆಭರಣ ವಶ

KannadaprabhaNewsNetwork |  
Published : Apr 08, 2024, 01:08 AM IST
ಬಳ್ಳಾರಿಯಲ್ಲಿ ದಾಖಲೆ ರಹಿತ 5.60 ಕೋಟಿ ರು. ನಗದು ವಶ. | Kannada Prabha

ಸಾರಾಂಶ

ನಗರದ ಕಂಬಳಿ ಬಜಾರ್ ಮನೆಯೊಂದರಲ್ಲಿ ದಾಖಲೆ ಇಲ್ಲದ ₹5.60 ಕೋಟಿ ನಗದು ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಕಂಬಳಿ ಬಜಾರ್ ಮನೆಯೊಂದರಲ್ಲಿ ದಾಖಲೆ ಇಲ್ಲದ ₹5.60 ಕೋಟಿ ನಗದು ಪತ್ತೆಯಾಗಿದೆ. ಜತೆಗೆ ₹1.4 ಕೋಟಿ ಮೌಲ್ಯದ 3 ಕೆ.ಜಿ. ಚಿನ್ನ, ₹42 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಮತ್ತು ಗಟ್ಟಿಗಳು ಪತ್ತೆಯಾಗಿವೆ. ಇದೆಲ್ಲದರ ಒಟ್ಟು ಮೌಲ್ಯ ₹7.5 ಕೋಟಿ ಎಂದು ಎಸ್ಪಿ ರಂಜಿತಕುಮಾರ್‌ ಬಂಡಾರು ತಿಳಿಸಿದ್ದಾರೆ.

ಕಂಬಳಿ ಬಜಾರ್‌ನ ಹೇಮಾ ಜ್ಯುವೆಲರ್ಸ್ ಮಾಲೀಕ ನರೇಶ್ ಸೋನಿ ಎಂಬುವವರ ಮನೆಯ ಮೇಲೆ ಭಾನುವಾರ ಮಧ್ಯಾಹ್ನ ಪೊಲೀಸರು ನಡೆಸಿದ ದಾಳಿ ವೇಳೆ ಅಪಾರ ಪ್ರಮಾಣದ ಹಣ, ಆಭರಣ ಸಿಕ್ಕಿವೆ.

ಈಗ ಸಿಕ್ಕಿರುವ ಹಣ ಮತ್ತು ಆಭರಣ ಚುನಾವಣೆಯಲ್ಲಿ ಹಂಚಲು ಸಂಗ್ರಹಿಸಿಟ್ಟಿದ್ದೋ, ಹವಾಲದಿಂದ ಬಂದದ್ದೋ ಅಥವಾ ನರೇಶ್‌ ಸೋನಿ ಅವರ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ್ದೋ ಖಚಿತವಾಗಿಲ್ಲ. ಈ ಬಗ್ಗೆ ಪೊಲೀಸ್‌ ಇಲಾಖೆಯಿಂದ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ವಿಷಯವನ್ನು ನಾವು ಆದಾಯ ತೆರಿಗೆ ಇಲಾಖೆ ಗಮನಕ್ಕೂ ತರುತ್ತೇವೆ. ಹಣದ ಮೂಲದ ಬಗ್ಗೆ ಆಭರಣದಂಗಡಿ ಮಾಲೀಕ ನರೇಶ್‌ ಸೋನಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಬಂಡಾರು ತಿಳಿಸಿದರು.

ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರಗಳು ಕಳೆದ ವಿಧಾನಸಭಾ ಚುನಾವಣೆಯಲ್ಲಿ ‘ವೆಚ್ಚ ಕ್ಷೇತ್ರಗಳು’ ಎಂದು ಗುರುತಿಸಿಕೊಂಡಿದ್ದವು. ಹೀಗಾಗಿ ನಾವು ಚುನಾವಣಾ ಅಕ್ರಮಗಳ ಬಗ್ಗೆಯೂ ಹೆಚ್ಚಿನ ಜಾಗ್ರತೆ ವಹಿಸಿದ್ದೇವೆ ಎಂದು ಹೇಳಿದರು.

ನರೇಶ್‌ ಸೋನಿ ಅವರು ಜನಾರ್ದನ ರೆಡ್ಡಿ ಮತ್ತು ಅವರ ಪಕ್ಷ ಕೆಆರ್‌ಪಿಪಿಯೊಂದಿಗೆ ಗುರುತಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಬಳ್ಳಾರಿ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ ಮತ್ತು ಬ್ರೂಸ್‌ಪೇಟೆಯ ಇನ್‌ಸ್ಪೆಕ್ಟರ್ ಎಂ.ಎನ್‌. ಸಿಂಧೂರ್‌ ನೇತೃತ್ವದಲ್ಲಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆದಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ