ವಿಷಾಹಾರದಿಂದ 57 ವಿದ್ಯಾರ್ಥಿಗಳು ಅಸ್ವಸ್ಥ: ಭುಗಿಲೆದ್ದ ಆಕ್ರೋಶ

KannadaprabhaNewsNetwork |  
Published : Jul 31, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಬಾಟಂ     | Kannada Prabha

ಸಾರಾಂಶ

57 students fall ill due to food poisoning: Outrage erupts

-ಕರ್ಜಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ । ವಸತಿ ಶಾಲೆಗಳ ಆಹಾರ ಸುರಕ್ಷತೆ ಪ್ರಶ್ನೆ, ಆಸ್ಪತ್ರೆ ಅವ್ಯವಸ್ಥೆಗೆ ಪೋಷಕರು ಕಂಗಾಲು

---

ಕನ್ನಡಪ್ರಭ ವಾರ್ತೆ ಅಫಜಲಪುರ

ತಾಲೂಕಿನ ಕರ್ಜಗಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ 57 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆನಡೆದಿದೆ. ವಸತಿ ಶಾಲೆಗಳಲ್ಲಿನ ಆಹಾರದ ಗುಣಮಟ್ಟ, ಮೇಲ್ವಿಚಾರಣೆ ಹಾಗೂ ಸರ್ಕಾರಿ ಆಸ್ಪತ್ರೆಗಳ ತುರ್ತು ಚಿಕಿತ್ಸಾ ವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಘಟನೆಯ ಬಳಿಕ ಆಸ್ಪತ್ರೆಗೆ ಹರಿದು ಬಂದ ಪಾಲಕರು ಮತ್ತು ವಿವಿಧ ಸಂಘಟನೆಗಳು ಆಡಳಿತದ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ವಸತಿ ಶಾಲೆಯಲ್ಲಿ ಒಟ್ಟು 220 ವಿದ್ಯಾರ್ಥಿಗಳಿದ್ದು, ಮೊದಲ ಪಂಕ್ತಿಯಲ್ಲಿ ಉಪಾಹಾರ ಸೇವಿಸಿದ್ದ 34 ಬಾಲಕರು ಹಾಗೂ 23 ಬಾಲಕಿಯರಿಗೆ ವಾಂತಿ, ಹೊಟ್ಟೆನೋವು ಸೇರಿದಂತೆ ಅಸ್ವಸ್ಥತೆ ಕಾಣಿಸಿಕೊಂಡಿತು. ತಕ್ಷಣ ಉಳಿದ ವಿದ್ಯಾರ್ಥಿಗಳಿಗೆ ಉಪಾಹಾರ ವಿತರಣೆ ಸ್ಥಗಿತಗೊಳಿಸಿ ಅಸ್ವಸ್ಥಗೊಂಡ ಮಕ್ಕಳನ್ನು ಅಫಜಲಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯಲ್ಲಿ ಚಿಕಿತ್ಸೆ: ಆರಂಭವಾಗುತ್ತಿದ್ದಂತೆಯೇ ಮೂಲಸೌಲಭ್ಯಗಳ ಕೊರತೆ ಬಹಿರಂಗವಾಯಿತು. ಹಾಸಿಗೆಗಳ ಅಭಾವದಿಂದ ಒಂದೇ ಹಾಸಿಗೆಯಲ್ಲಿ ಇಬ್ಬರು ಮಕ್ಕಳನ್ನು ಮಲಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಆತಂಕಗೊಂಡ ಕೆಲ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. "ಇಲ್ಲಿನ ವ್ಯವಸ್ಥೆ ನೋಡಿದರೆ ಮಕ್ಕಳನ್ನು ಹೇಗೆ ನಂಬಿ ಬಿಡಬೇಕು " ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.

ಘಟನೆಯ ಬೆನ್ನಲ್ಲೇ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪಾಲಕರು, ವಸತಿ ಶಾಲೆಗಳಿಗೆ ಕಳಪೆ ಹಾಗೂ ಅವಧಿ ಮೀರಿದ ಆಹಾರ ಧಾನ್ಯ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿದರು.

ಆಹಾರ ತಯಾರಿಸಿದ ಸಿಬ್ಬಂದಿಯನ್ನು ಮಾತ್ರವಲ್ಲದೆ, ನಿರ್ಲಕ್ಷ್ಯವಹಿಸಿದ ಮುಖ್ಯಗುರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ವೈ. ಪಾಟೀಲ್, ಮಕ್ಕಳ ಆರೋಗ್ಯವೇ ಮೊದಲ ಆದ್ಯತೆ. ಯಾವುದೇ ರೀತಿಯ ಚಿಕಿತ್ಸೆಯ ಅಗತ್ಯವಿದ್ದರೂ ಸರ್ಕಾರವೇ ಭರಿಸಲಿದೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಯಾರನ್ನೂ ಬಿಡುವುದಿಲ್ಲ. ತಾಲೂಕಿನ ಎಲ್ಲ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಮನಿ ಮಾತನಾಡಿ, ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಈಗಾಗಲೇ ಅಡುಗೆಯವರು ಹಾಗೂ ಸಹಾಯಕರನ್ನು ಅಮಾನತುಗೊಳಿಸಿದ್ದು, ಇತರೆ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಡಳಿತ ವೈದ್ಯಾಧಿಕಾರಿ ಡಾ. ಅಭಯಕುಮಾರ ಪಾಟೀಲ್, "ವಿದ್ಯಾರ್ಥಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಸದ್ಯ ಯಾರ ಜೀವಕ್ಕೂ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖಂಡ ರಾಜು ಜಿಡ್ಡಗಿ, "ವಸತಿ ಶಾಲೆಗಳಲ್ಲಿ ಆಹಾರದ ಗುಣಮಟ್ಟ ಪರೀಕ್ಷಿಸುವ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಕರ್ಜಗಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಆಂಬುಲೆನ್ಸ್ ಲಭ್ಯತೆಯ ಸಮಸ್ಯೆ ತುರ್ತು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿತು. ಇಂತಹ ಘಟನೆಗಳು ಮರುಕಳಿಸದಂತೆ ಆಹಾರ ಪೂರೈಕೆ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಅಗತ್ಯ ಎಂದು ಒತ್ತಾಯಿಸಿದರು.

ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ತಹಸೀಲ್ದಾರ್‌ ಸಂಜೀವಕುಮಾರ ದಾಸರ್ ಹಾಗೂ ತಾ.ಪಂ. ಇಒ ಶಂಕರ ರಾಠೋಡ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ, ಔಷಧೋಪಚಾರ ಹಾಗೂ ಅಗತ್ಯ ಸೌಲಭ್ಯಗಳ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಿದರು.

ಹಾಸಿಗೆ ಹುಡುಕಿದ ಪಾಲಕರು: ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ತಿಳಿದು ಪಾಲಕರು ದೌಡಾಯಿಸಿದರು. ಒಂದೇ ಹಾಸಿಗೆಯಲ್ಲಿ ಇಬ್ಬರು ಮಕ್ಕಳನ್ನು ಮಲಗಿಸಿದ್ದ ದೃಶ್ಯ, ತುರ್ತು ಚಿಕಿತ್ಸಾ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಮತ್ತಷ್ಟು ತೀವ್ರಗೊಳಿಸಿತು. ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆಯಲ್ಲೂ ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವ ಸಾಮರ್ಥ್ಯದ ಕೊರತೆ ಕಂಡುಬಂದಿದ್ದು, ಆರೋಗ್ಯ ಇಲಾಖೆಯ ಸಿದ್ಧತೆ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿತೀನ್ ಗುತ್ತೇದಾರ, ಜೆ.ಎಂ ಕೊರಬು, ಭೀಮರಾವ್ ಗೌರ, ರಾಜು ಉಕ್ಕಲಿ, ಜಮೀಲ್ ಗೌಂಡಿ, ಶ್ರೀಮಂತ ಬಿರಾದಾರ, ಎಂ.ಎಲ್ ಪಟೇಲ್, ಶ್ರೀಕಾಂತ ದೀವಾನಜೀ, ಮುತ್ತು ಕುರಿಮನಿ, ಮಹಾಂತೇಶ ಪಾಟೀಲ್ ಗೌರ, ಮಾಜಿದ್ ಪಟೇಲ್, ಧಾನು ಪತಾಟೆ, ಗೌತಮ ಸಕ್ಕರಗಿ, ರವಿ ಗೌರ, ಸದ್ದಾಂ ನಾಕೇದಾರ, ಶರಣು ಪದಕಿ, ಮಕ್ಕಳ ಪಾಲಕರು, ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ರೋಸ್ಟರ್ ತಿದ್ದುಪಡಿಗೆ ಆಗ್ರಹಿಸಿ ಲಂಬಾಣಿ ಸಮಾಜದಿಂದ ಮನವಿ
ಕೊಲ್ಲಾಪುರದಮ್ಮ, ಕರುಗಲ್ಲಮ್ಮ ಜಾತ್ರಾಮಹೋತ್ಸವ ಆ.3ರಿಂದ