ಹಾವೇರಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಸುಮಾರು ೭೫ ಕಿಮೀ ಮಾನವ ಸರಪಳಿ ನಿರ್ಮಿಸುವ ಮೂಲಕ ಜಿಲ್ಲಾಡಳಿತ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿ ಪ್ರಜಾಪ್ರಭುತ್ವದ ಮಹತ್ವವನ್ನು ಸಾರಲಾಯಿತು. ೬೮ ಸಾವಿರ ಜನರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಜಿಲ್ಲೆಯ ರಾಣೇಬೆನ್ನೂರ ನಗರದ ಆರ್.ಟಿ.ಇ.ಎಸ್. ಕಾಲೇಜ್ ಮುಂಭಾಗ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಲಾಯಿತು. ಜಿಲ್ಲೆಯ ರಾಣೇಬೆನ್ನೂರು ತಾಲೂಕು ಕುಮಾರಪಟ್ಟಣಂದಿಂದ ಆರಂಭಗೊಂಡ ಮಾನವ ಸರಪಳಿ ಕವಲೆತ್ತು, ಚಳಗೇರಿ, ರಾಣೇಬೆನ್ನೂರು, ಗುಡ್ಡದಾನ್ವೇರಿ, ಕೆರಿಮಲ್ಲಾಪೂರ, ಗುಡಿಹೊನ್ನತ್ತಿ, ಹಳೇಹೊನ್ನತ್ತಿ, ಮಾದಾಪೂರ, ತಿಮ್ಮಾಪೂರ, ಗುತ್ತಲ, ನೆಗಳೂರು, ಮರೋಳ, ಹಾಲಗಿ ಮಾರ್ಗವಾಗಿ ಲಕ್ಷ್ಮೇಶ್ವರ ತಾಲೂಕು ಬಾಲೇಹೊಸೂರವರೆಗೆ ಸುಮಾರು ೭೫ ಕಿ.ಮೀ. ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆಯಲಾಯಿತು. ಬೆಳಗ್ಗೆಯೇ ಶಾಲಾ, ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳಲು ಆಗಮಿಸಿದ್ದರು. ಆಯಾ ಶಾಲಾ-ಕಾಲೇಜುಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಶಿಸ್ತುಬದ್ಧವಾಗಿ ರಸ್ತೆಯ ಒಂದು ಬದಿಯಲ್ಲಿ ಸಾಲಾಗಿ ನಿಲ್ಲಿಸಿ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ಮಾನವ ಸರಪಳಿ ನಿರ್ಮಿಸಿದ್ದರು. ಜೊತೆಗೆ ಆಯಾ ಗ್ರಾಮದ ವಿವಿಧ ಸಂಘಟನೆಗಳು ಸಹ ಪಾಲ್ಗೊಂಡು ಮಾನವ ಸರಪಳಿ ನಿರ್ಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸುಮಾರು ೬೮ ಸಾವಿರ ಜನರು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಜಿಲ್ಲೆಯಲ್ಲಿ ೭೫ ಕಿಮೀ ಮಾನವ ಸರಪಳಿ ನಿರ್ಮಿಸುವ ಮಾರ್ಗವನ್ನು ಗುರುತಿಸಿ ಒಂದು ಕಿಮೀಗೆ ಒಂದು ಸಾವಿರ ಜನರನ್ನು ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಮಾರ್ಗ ಮಧ್ಯದಲ್ಲಿ ಬರುವ ಶಾಲಾ, ಕಾಲೇಜುಗಳ ವಿದ್ಯಾಥಿಗಳು, ಗ್ರಾಮಸ್ಥರು, ವಿವಿಧ ಸಂಘಟನೆಗಳ ಸಹಕಾರ ಪಡೆದು ಜಿಲ್ಲೆಯಲ್ಲಿ ೭೫ ಕಿಮೀ ಉದ್ದದ ಐತಿಹಾಸಿಕ ಮಾನವ ಸರಪಳಿ ನಿರ್ಮಿಸಿ, ಒಟ್ಟು ೯೮೬ ಸಸಿಗಳನ್ನು ನೆಡಲಾಯಿತು.