ಬಾಳ ಸಂಗಾತಿ ಆಯ್ಕೆಯಲ್ಲಿ ಶಿಕ್ಷಣ, ಸಂಸ್ಕೃತಿಗೆ ಒತ್ತು ನೀಡಿ: ಡಾ.ಪ್ರಭಾಕರ ಕೋರೆ

KannadaprabhaNewsNetwork |  
Published : Sep 16, 2024, 01:57 AM IST
ಕೆಎಲ್ಇ ಸಂಸ್ಥೆ, ಅಖಿಲ ಭಾರತ ವೀರಶೈವ ಮಹಾಸಭೆ ಸಹಯೋಗದಲ್ಲಿ ಶನಿವಾರ ನಗರದ ಜೀರಗೆ ಭವನದಲ್ಲಿ ಜರುಗಿದ ವೀರಶೈವ ವಧು-ವರರ  ಸಮಾವೇಶದಲ್ಲಿ ಕೆಲೆಸ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾಡಿದರು. | Kannada Prabha

ಸಾರಾಂಶ

ಲಿಂಗಾಯತ ಒಳಪಂಗಡ ಮರೆತು ವರ ಮತ್ತು ಕನ್ಯೆಯರ ಶಿಕ್ಷಣ ಮತ್ತು ಸಂಸ್ಕೃತಿಗೆ ಮಹತ್ವ ಕೊಟ್ಟು ಬಾಳ ಸಂಗಾತಿಗಳ ಆಯ್ಕೆ ಮಾಡಿಕೊಳ್ಳಬೇಕು ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲಿಂಗಾಯತ ಒಳಪಂಗಡ ಮರೆತು ವರ ಮತ್ತು ಕನ್ಯೆಯರ ಶಿಕ್ಷಣ ಮತ್ತು ಸಂಸ್ಕೃತಿಗೆ ಮಹತ್ವ ಕೊಟ್ಟು ಬಾಳ ಸಂಗಾತಿಗಳ ಆಯ್ಕೆ ಮಾಡಿಕೊಳ್ಳಬೇಕು ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಕೆಎಲ್ಇ ಸಂಸ್ಥೆ, ಅಖಿಲ ಭಾರತ ವೀರಶೈವ ಮಹಾಸಭೆ ಸಹಯೋಗದಲ್ಲಿ ಶನಿವಾರ ನಗರದ ಜೀರಗೆ ಭವನದಲ್ಲಿ ಜರುಗಿದ ವೀರಶೈವ ವಧು-ವರರ ಅನ್ವೇಷಣೆ ಕೇಂದ್ರದ 60ನೇ ವಧು-ವರರ, ಪಾಲಕರ ಬೃಹತ್‌ ಸಮಾವೇಶದಲ್ಲಿ ಮಾತನಾಡಿದರು.

ವೀರಶೈವ ಲಿಂಗಾಯತ ಸಮುದಾಯದ ವಧು-ವರರ ಕಲ್ಯಾಣ ಮಹೋತ್ಸವ ಸುಲಭವಾಗಿ, ಸಕಾಲದಲ್ಲಿ ಜರುಗಿ ದಾಂಪತ್ಯ ಜೀವನ ಸುಖಮಯವಾಗಲಿ ಎನ್ನುವ ಸದುದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.

ಅಖಿಲ ಭಾರತ ವೀರ ಶೈವ ಮಹಾಸಭೆ ಅಧ್ಯಕ್ಷೆ ಶರಣೆ ರತ್ನ ಪ್ರಭಾ ಬೆಲ್ಲದ ಮಾತನಾಡಿ, ಮಹಾಸಭೆ ಜಿಲ್ಲಾ ಘಟಕ ಲಿಂಗಾಯತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಎಲ್ಲ ಸೌಕರ್ಯ ಕಲ್ಪಿಸುತ್ತಿದೆ. ಬಡ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಗಾಗಿ ಬೆಳಗಾವಿಯ ಸುಭಾಸ ನಗರದಲ್ಲಿ ಉಚಿತ ವಸತಿ ನಿಲಯ ಪ್ರಾರಂಭಿಸಲಾಗುತ್ತಿದೆ. ಸಮಾಜ ಬಂಧುಗಳು ಈ ಕೈಂಕರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಅನ್ವೇಷಣ ಕೇಂದ್ರದ ಅಧ್ಯಕ್ಷ ಡಾ.ಎಫ್. ವಿ. ಮಾನ್ವಿ ಮಾತನಾಡಿ, ಇಂದಿನ ದಿನಮಾನದಲ್ಲಿ ಪಾಲಕರು ತಮ್ಮ ಉದ್ಯೋಗ ವ್ಯವಹಾರ ಗಳಲ್ಲಿ ಬ್ಯೂಜಿ ಇರುವುದರಿಂದ ತಮ್ಮ ಮಕ್ಕಳಿಗೆ ಯೋಗ್ಯ ಸಂಗಾತಿ ಹುಡುಕುವುದು ಕೊಂಚ ಕಷ್ಟದ ಕೆಲಸವಾದ್ದರಿಂದ ಸಮಾಜ ಬಾಂಧವರ ಪ್ರಯೋಜನ ಕ್ಕಾಗಿ ಇಂತಹ ಸಮಾವೇಶಗಳನ್ನು 1988ರಿಂದ ನಡೆಸುತ್ತ ಬರಲಾಗಿದೆ. ಡಾ.ಕೋರೆಯವರು ಸುಸಜ್ಜಿತ ಸಭಾಂಗಣವನ್ನು ಸಮಾಜ ಬಾಂಧವರ ಒಳಿತಿಗಾಗಿ ಉಚಿತವಾಗಿ ನೀಡಿ ಸಹಕರಿಸಿದ್ದಾರೆ. ನಿಮ್ಮ ಮನಸ್ಸಿನ ಅಪೇಕ್ಷೆ ಈಡೇರಲಿ ವೈವಾಹಿಕ ಸಂಬಂಧಗಳು ಕುದುರಲಿ ಎಂದು ಶುಭ ಹಾರೈಸಿದರು.

ಕೇಂದ್ರದ ನಿರ್ದೇಶಕ ಪ್ರಕಾಶ ಬಾಳೇ ಕುಂದ್ರಿ ವೇದಿಕೆಯ ಮೇಲಿದ್ದರು. ಗೌರವ ಕಾರ್ಯದರ್ಶಿ ಡಾ ಗುರುದೇವಿ ಹುಲೆಪ್ಪ ನವರ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಯಮಕನಮರಡಿ ವಚನ ಪ್ರಾರ್ಥನೆ ಮಾಡಿ, ನಿರೂಪಿಸಿದರು. ಅಂಗಡಿ ವೀರಭದ್ರಪ್ಪ ವಧು-ವರರ ಪರಿಚಯ ಮಾಡಿದರು. ಜ್ಯೋತಿ ಬಾದಾಮಿ ವಂದಿಸಿದರು. ಸುಮಾರು 600ಕ್ಕೂ ಅಧಿಕ ವಧು-ವರರ ಪಾಲಕರು ಪಾಲ್ಗೊಂಡಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ