ಜನಸಾಗರದ ನಡುವೆ ವೈಭವದ ಗಣಪತಿ ವಿಸರ್ಜನೆ

KannadaprabhaNewsNetwork | Updated : Sep 16 2024, 01:57 AM IST

ಸಾರಾಂಶ

ಭದ್ರಾವತಿ ಶ್ರೀ ವಿನಾಯಕ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನಾಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಭಾನುವಾರ ನಿರೀಕ್ಷೆಗೂ ಮೀರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೫೨ನೇ ವರ್ಷದ ಶ್ರೀ ವಿನಾಯಕ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಭಾನುವಾರ ನಿರೀಕ್ಷೆಗೂ ಮೀರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.

ಪ್ರತಿಷ್ಠಾಪನೆ ಸ್ಥಳದಿಂದ ಬೆಳಿಗ್ಗೆ ಆರಂಭಗೊಂಡ ರಾಜಬೀದಿ ಉತ್ಸವ ಮೆರವಣಿಗೆ ಹೊಸಮನೆ ಶಿವಾಜಿ ವೃತ್ತಕ್ಕೆ ತಲುಪಿ ಪುನಃ ಅದೇ ಮಾರ್ಗದಲ್ಲಿ ಹಿಂದಿರುಗಿ ಮಧ್ಯಾಹ್ನ ೩.೩೦ರ ಸಮಯಕ್ಕೆ ರಂಗಪ್ಪ ವೃತ್ತ ತಲುಪಿತು. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಅದರಲ್ಲೂ ಯುವಕರಿಗಿಂತ ಯುವತಿಯರೇ ಹೆಚ್ಚಾಗಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ನಾದಸ್ವರ, ಡೊಳ್ಳು ಕುಣಿತ, ವೀರಗಾಸೆ, ಗೊಂಬೆ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳ ಹಾಗು ಅಬ್ಬರದ ಸಂಗೀತದ ಸದ್ದಿಗೆ ಹೆಜ್ಜೆ ಹೆಜ್ಜೆಗೂ ಯುವಕ-ಯುವತಿಯರು, ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ವಯಸ್ಸಿನ ಯಾವುದೇ ಭೇದಭಾವವಿಲ್ಲದೆ ಕುಣಿದು ಸಂಭ್ರಮಿಸಿದರು.

ಸೇವಾ ಕಾರ್ಯಗಳು:

ಈ ಬಾರಿ ಉತ್ಸವ ಮೆರವಣಿಗೆ ಕಳೆದ ಬಾರಿಗಿಂತ ಹೆಚ್ಚಿನ ವೈಭವ ಪಡೆದುಕೊಂಡಿದ್ದು, ಇದಕ್ಕೆ ಪೂರಕವೆಂಬಂತೆ ವಿವಿಧ ಹಿಂದೂಪರ ಸಂಘಟನೆಗಳು ಮೆರವಣಿಗೆಯಲ್ಲಿ ಸೇವಾ ಕಾರ್ಯಗಳ ಮೂಲಕ ಭಕ್ತಿ ಸಮರ್ಪಿಸಿದವು. ಪ್ರತಿ ವರ್ಷದಂತೆ ಈ ಬಾರಿ ಸಹ ಅಂಗಡಿಮುಂಗಟ್ಟುಗಳ ಮುಂದೆ ರಸ್ತೆಯುದ್ದಕ್ಕೂ ಅನ್ನದಾನ, ಲಾಡು ಸೇರಿದಂತೆ ಇನ್ನಿತರ ಸಿಹಿ ಹಂಚಿಕೆ, ಕೋಸಂಬರಿ, ಮಜ್ಜಿಗೆ, ತಂಪುಪಾನೀಯ ವಿತರಣೆ ಜರುಗಿದವು.

ಶಿವಾಜಿ, ಪುನೀತ್‌ ಫೊಟೋ ಹಿಡಿದ ಯುವಕರು:

ಈ ಬಾರಿ ಉತ್ಸವ ಮೆರವಣಿಗೆಯಲ್ಲಿ ಯುವಕರು ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜ್ ಮತ್ತು ಕರ್ನಾಟಕ ರತ್ನ, ಪವರ್‌ಸ್ಟಾರ್ ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ಹಾಗು ಶಿವಮೊಗ್ಗದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಹತ್ಯೆಯಾದ ಹಿಂದೂ ಯುವಕ ಹರ್ಷ ಹಾಗೂ ನಗರದಲ್ಲಿ ಕಳೆದ ವರ್ಷ ಅಕಾಲಿಕವಾಗಿ ನಿಧನ ಹೊಂದಿದ ಹಿಂದೂ ಯುವಕ ಸುನೀಲ್ ಕುಮಾರ್ ಅವರ ಭಾವಚಿತ್ರಗಳನ್ನು ಯುವಕರು ಮೆರವಣಿಗೆಯುದ್ದಕ್ಕೂ ಹಿಡಿದುಕೊಂಡು ಪ್ರದರ್ಶಿಸುವ ಜೊತೆಗೆ ಕುಣಿದು ಹಿಂದುತ್ವಕ್ಕೆ ಜೈಕಾರ ಹಾಕಿ ಸಂಭ್ರಮಿಸಿದರು. ಇನ್ನು, ಈ ಬಾರಿ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ವಿಶೇಷವಾಗಿ ಶ್ರೀ ಕೃಷ್ಣ, ಶಿವಾಜಿ ಹಾಗೂ ಸ್ವಾಮಿ ವಿವೇಕಾನಂದರ ವೇಷಧಾರಿಗಳು ಹೆಚ್ಚು ಗಮನ ಸೆಳೆದಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಅವರೊಂದಿಗೆ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಪೊಲೀಸ್ ಇಲಾಖೆ ವತಿಯಿಂದ ಈ ಬಾರಿ ಕರ್ತವ್ಯಕ್ಕೆ ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ೧೭ ಪೊಲೀಸ್ ಉಪಾಧೀಕ್ಷಕರು, ೪೫ ಪೊಲೀಸ್ ನಿರೀಕ್ಷಕರು, ೬೫ ಪೊಲೀಸ್ ಉಪನಿರೀಕ್ಷಕರು, ೧೯೦ ಸಹಾಯಕ ಪೊಲೀಸ್ ನಿರೀಕ್ಷಕರು, ೧೪೫೦ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್, ೪೫೦ ಗೃಹರಕ್ಷಕ ದಳ ಸಿಬ್ಬಂದಿಗಳು, ೧ ಆರ್‌ಎಎಫ್ ತುಕಡಿ, ೫ ಡಿಎಆರ್ ತುಕಡಿ, ೧ ಕ್ಯೂ.ಆರ್.ಟಿ ತುಕಡಿ ಮತ್ತು ೮ ಕೆಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಸಂಜೆ ಸುಮಾರು ೪ ಗಂಟೆ ಸಮಯಕ್ಕೆ ಮಾಧವಚಾರ್ ವೃತ್ತ ತಲುಪಿ ನಂತರ ಹಾಲಪ್ಪ ವೃತ್ತ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ, ಲೋಯರ್ ಹುತ್ತಾವರೆಗೆ ಸಾಗಿತು.

ಪ್ರಮುಖ ವೃತ್ತಗಳಲ್ಲಿ ಆಕರ್ಷಕ ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು. ಕೇಸರಿ ಧ್ವಜ, ಬಂಟಿಂಗ್ಸ್‌ಗಳು ರಾರಾಜಿಸುತ್ತಿದ್ದವು. ಒಟ್ಟಾರೆ ಪ್ರಮುಖ ರಸ್ತೆಗಳು ಕೇಸರಿಮಯವಾಗಿ ಕಂಗೊಳಿಸುತ್ತಿದ್ದವು. ಅಲ್ಲಲ್ಲಿ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ವಿವಿಧ ಸಂಘಟನೆಗಳಿಂದ, ಮುಖಂಡರು, ಗಣ್ಯರಿಂದ ಶುಭ ಕೋರಲಾಗಿತ್ತು.

Share this article