ಫ್ಲೈಒವರ್‌ ದುರಂತ: ಚಿಕಿತ್ಸೆ ಫಲಿಸದೇ ಎಎಸ್‌ಐ ಸಾವು

KannadaprabhaNewsNetwork |  
Published : Sep 16, 2024, 01:57 AM IST
ನಾಭಿರಾಜ ದಾಯಣ್ಣವರ. | Kannada Prabha

ಸಾರಾಂಶ

ಧಾರವಾಡ ಉಪನಗರ ಠಾಣೆ ಎಎಸ್‌ಐ ದಾಯಣ್ಣವರ ಕಳೆದ ಸೆ. 10ರಂದು ಫ್ಲೈಒವರ್ ಕೆಳಮಾರ್ಗವಾಗಿ ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಮೇಲಿಂದ ತಲೆ ಮೇಲೆ ಕಬ್ಬಿಣದ ರಾಡ್‌ ಬಿದ್ದಿತ್ತು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹುಬ್ಬಳ್ಳಿ: ಇಲ್ಲಿಯ ಹಳೇ ಕೋರ್ಟ್ ವೃತ್ತದ ಬಳಿ ನಡೆದ ಫ್ಲೈಒವರ್ ಕಾಮಗಾರಿ ವೇಳೆ ಮೇಲಿಂದ ಕಬ್ಬಿಣದ ರಾಡ್‌ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಎಎಸ್‌ಐ ನಾಭಿರಾಜ ದಾಯಣ್ಣವರ (59) ಭಾನುವಾರ ಮೃತಪಟ್ಟಿದ್ದಾರೆ.

ಧಾರವಾಡದ ರಾಜಾಜಿನಗರದ ನಿವಾಸಿ ಹಾಗೂ ಉಪನಗರ ಠಾಣೆ ಎಎಸ್‌ಐ ದಾಯಣ್ಣವರ ಕಳೆದ ಸೆ. 10ರಂದು ಫ್ಲೈಒವರ್ ಕೆಳಮಾರ್ಗವಾಗಿ ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಮೇಲಿಂದ ತಲೆ ಮೇಲೆ ಕಬ್ಬಿಣದ ರಾಡ್‌ ಬಿದ್ದಿತ್ತು. ರಾಡ್‌ ಬಿದ್ದ ರಭಸಕ್ಕೆ ಹೆಲ್ಮೆಟ್ ಒಡೆದು ತಲೆಗೆ ತೀವ್ರವಾದ ಗಾಯವಾಗಿತ್ತು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಸಹ ನೀಡಲಾಗಿತ್ತು. ಮೆದುಳಿಗೆ ಪೆಟ್ಟಾಗಿ ಅರೆಪ್ರಜ್ಞಾ ಸ್ಥಿತಿಗೆ ತಲುಪಿದ್ದರು. ಆನಂತರ ಅವರನ್ನು ನಗರದ ಕೆಎಂಸಿಆರ್‌ಐಗೆ ಸ್ಥಳಾಂತರಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ, ಅವರ ಆರೋಗ್ಯದ ಮೇಲೆ ನಿಗಾ ವಹಿಸಲು ಐದು ವೈದ್ಯರ ವಿಶೇಷ ತಂಡ ಸಹ ರಚಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತರ ನೇತ್ರದಾನ:

ಎಎಸ್‌ಐ ದಾಯಣ್ಣನವರ ಸಾವಿನ ನಂತರವೂ ಸಾರ್ಥಕತೆ ಮೆರದಿದ್ದಾರೆ. ನೇತ್ರದಾನ ಮಾಡಬೇಕೆಂಬ ಅವರ ಇಚ್ಛೆಯನ್ನು ಕುಟುಂಬಸ್ಥರು ಈಡೇರಿಸಿದ್ದಾರೆ. ಕುಟುಂಬದವರು ಮೃತರ ನೇತ್ರಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಉಳಿದ ಅಂಗಾಂಗ ದಾನಕ್ಕೂ ಕುಟುಂಬಸ್ಥರು ಮುಂದಾಗಿದ್ದರು. ಆದರೆ, ಅವರ ಅಂಗಾಂಗಗಳು ನಿಷ್ಕ್ರಿಯವಾಗಿದ್ದರಿಂದ ಧಾರವಾಡದ ಸತ್ತೂರು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಎಎಸ್‌ಐ ನಾಭಿರಾಜ ಅವರು ರಜೆ ಹಾಕದೇ ಕರ್ತವ್ಯ ನಿರ್ಹಿಸುತ್ತಿದ್ದರು ಎಂಬುದು ವಿಶೇಷ.

ಇದಕ್ಕೂ ಪೂರ್ವದಲ್ಲಿ ಕೆಎಂಸಿಆರ್‌ಐಗೆ ಭೇಟಿ ನೀಡಿದ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಪಡೆದ ಕಂಪನಿಯ ಎಂಡಿ ಸೇರಿದಂತೆ 19ಕ್ಕೂ ಹೆಚ್ಚು ಜನರ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಎಎಸ್‌ಐ ಮೃತಪಟ್ಟಿದ್ದು, ಇದನ್ನು ಗಂಭೀರ ಸ್ವರೂಪದ ಪ್ರಕರಣ ಎಂದು ಪರಿಗಣಿಸಲಾಗುತ್ತದೆ ಎಂದರು.

ಈ ಕಾಮಗಾರಿಯಲ್ಲಿ ಬರುವ ಎಲ್ಲ ಇಲಾಖೆಗಳು ಇದಕ್ಕೆ ಹೊಣೆಯಾಗಿದ್ದು, ಸಂಬಂಧಿತ ಗುತ್ತಿಗೆದಾರ ಕಂಪನಿ, ಮಾಲೀಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಮೇಲೂ ಪ್ರಕರಣ ದಾಖಲಾಗುತ್ತದೆ ಎಂದರು. ಪ್ರಕರಣದ ಹಿನ್ನೆಲೆಯಲ್ಲಿ ಫ್ಲೈಒವರ್ ಕಾಮಗಾರಿಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ